ಹಾವೇರಿ: ‘ಭೂಮಿ ತಾಯಿ ನಂಬಿರುವ ರೈತರು, ಜಗಕ್ಕೆಲ್ಲ ಅನ್ನ ನೀಡುವವರು. ಆತ್ಮಹತ್ಯೆಯಂಥ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಸಮಸ್ಯೆಗೆ ಪರಿಹಾರ ಸೂಚಿಸಲು ಹಾಗೂ ಕೃಷಿ ಸಂಬಂಧಿತ ಕೆಲಸಗಳಿಗೆ ಕೃಷಿ ಇಲಾಖೆ ಜೊತೆಯಿದೆ’ ಎಂದು ಕೃಷಿ ಇಲಾಖೆ ಹಾವೇರಿ ಜಿಲ್ಲೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ರೈತರಿಗೆ ಧೈರ್ಯ ತುಂಬಿದರು.
ಕೃಷಿ ಸಂಬಂಧಿತ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಪ್ರಜಾವಾಣಿ’ ಗುರುವಾರ ಹಮ್ಮಿಕೊಂಡಿದ್ದ ಫೋನ್–ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
‘ಜಿಲ್ಲೆಯಲ್ಲಿ ಸುಮಾರು ಶೇ 70ರಷ್ಟು ಜನರು ಪ್ರತಿ ವರ್ಷ ಗೋವಿನ ಜೋಳ ಬೆಳೆಯುತ್ತಾರೆ. ಇದರಿಂದ ಇಳುವರಿ ಕಡಿಮೆ ಆಗುತ್ತಿದೆ. ಮುಳ್ಳಸಜ್ಜೆ ಕಳೆ ಮತ್ತು ರೋಗ– ಕೀಟಬಾಧೆ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಈ ಎಲ್ಲ ಸಮಸ್ಯೆಗೆ ಬೆಳೆ ಪರಿವರ್ತೆನೆಯೇ ಪರಿಹಾರ. ಪದೇ ಪದೇ ಗೋವಿನ ಜೋಳ ಬೆಳೆಯುವ ಬದಲು ಹತ್ತಿ, ಸೋಯಾಬಿನ್, ಶೇಂಗಾ ಹಾಗೂ ಇತರೆ ಬೆಳೆ ಬೆಳೆಯಬೇಕು. ಇದರಿಂದ ಆದಾಯವೂ ವೃದ್ಧಿಯಾಗುತ್ತದೆ’ ಎಂದು ಅವರು ಹೇಳಿದರು.
ದೂರವಾಣಿ ಕರೆ ಮಾಡಿದವರ ಮತ್ತು ಮಂಜುನಾಥ ಅವರು ಸ್ಪಂದಿಸಿದ ವಿವರ ಹೀಗಿದೆ.
* ಮರಿಗೌಡ್ರ ಪಾಟೀಲ, ಜೀರನಹಳ್ಳಿ, ಹಾನಗಲ್: ಕೃಷಿ ಇಲಾಖೆಯಿಂದ ರೈತರಿಗೆ ಇರುವ ಯೋಜನೆಗಳು ಯಾವುವು. ಯೋಜನೆ ಜಾರಿಗೆ ಅನುದಾನ ಕೊರತೆ ಇದೆಯೇ?
ಮಂಜುನಾಥ: ರಾಜ್ಯ ಸರ್ಕಾರದಿಂದ ಲಭ್ಯವಿರುವ ಅನುದಾನಕ್ಕೆ ತಕ್ಕಂತೆ ರೈತರಿಗೆ ಯೋಜನೆ ತಲುಪಿಸಲಾಗುತ್ತಿದೆ. ಮುಂಗಾರಿನಲ್ಲಿ ಸಬ್ಸಿಡಿ ಬೀಜ ಮತ್ತು ಕೀಟರೋಗಕ್ಕೆ ಔಷಧಿ ವಿತರಿಸಲಾಗಿದೆ. ಟ್ರ್ಯಾಕ್ಟರ್ ಜೋಡಣೆ ಸಲಕರಣೆಗಳು, ಸ್ಪ್ರಿಂಕ್ಲರ್, ಕೋಯ್ಲೋತ್ತರ ಉಪಕರಣ ವಿತರಿಸಲಾಗುತ್ತಿದೆ. ಎಲ್ಲದ್ದಕ್ಕೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದ್ದಲ್ಲಿ, ಸಹಾಯಕ ಕೃಷಿ ನಿರ್ದೇಶಕರನ್ನು ಭೇಟಿಯಾಗಿ.
* ಅಡಿವೆಪ್ಪ ಆಲದಕಟ್ಟಿ, ಹಾನಗಲ್: ಬೆಳೆ ಹಾನಿ ಹಾಗೂ ಪರಿಹಾರ ಹಲವು ರೈತರಿಗೆ ಬರುತ್ತಿಲ್ಲ. ಏಕೆ ? ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಹಣ ಬಂದಿದೆ. ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ಹಣ ಏಕೆ ಬಂದಿಲ್ಲ ?
ಬೆಳೆ ಹಾನಿಗೆ ₹ 154 ಕೋಟಿ ಪರಿಹಾರ ಜಮೆ ಆಗಿದೆ. ಖಾತೆ ಸರಿ ಇಲ್ಲದಿದ್ದರೆ, ಆಧಾರ್ ಜೋಡಣೆ ಆಗದಿದ್ದರೆ ಹಾಗೂ ಇತರ ಕಾರಣದಿಂದ ಕೆಲ ರೈತರಿಗೆ ಜಮೆ ಆಗಿಲ್ಲ. ಗ್ರಾಮ ಲೆಕ್ಕಾಧಿಕಾರಿ ಬಳಿ ಪಟ್ಟಿ ಇದೆ. ಪರಿಶೀಲಿಸಿಕೊಳ್ಳಬಹುದು. ಏನು ಸಮಸ್ಯೆ ಇದೆ ಎಂಬುದನ್ನು ತಿಳಿದು ಸರಿಯಾದ ಮಾಹಿತಿ ನೀಡಿದರೆ, ಹಣ ಜಮೆ ಆಗಲಿದೆ. ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ಬಗ್ಗೆ ಪ್ರತ್ಯೇಕ ಯಾವುದೇ ಪರಿಹಾರ ಬಗ್ಗೆ ಮಾಹಿತಿ ಇಲ್ಲ.
* ಶ್ರೀಧರ ಮಲಗುಂದ, ಶ್ಯಾಡಗುಪ್ಪಿ, ಹಾನಗಲ್: ಜಿಲ್ಲೆಯ ಬಹುತೇಕ ಮಳಿಗೆಯವರು ಬೀಜ, ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ.
ಯಾವ ಮಳಿಗೆಯಲ್ಲಿ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂಬುದನ್ನು ವಿಳಾಸ ಸಮೇತ ತಿಳಿಸಿ. ಇಂದೇ ಅಂಗಡಿ ಮೇಲೆ ದಾಳಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
* ಎಂ. ತಳವಾರ, ಕೊಪ್ಪರಸಿಕೊಪ್ಪ, ಹಾನಗಲ್: ಗೋವಿನ ಜೋಳದ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ ? ಏನು ಮಾಡುವುದು.
ಫೋಷಕಾಂಶ ಕೊರತೆ ಹಾಗೂ ಮಳೆ ಜಾಸ್ತಿಯಾದರೆ ಈ ಸಮಸ್ಯೆ ಬರುತ್ತದೆ. ಒಮ್ಮೆ ಬೆಳೆಯ ಮಾದರಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ. ಅಲ್ಲಿ ಅವರು ಸಮಸ್ಯೆಗೆ ಪರಿಹಾರ ತಿಳಿಸುತ್ತಾರೆ.
* ಪರಪ್ಪನವರ, ಹಾನಗಲ್: ಈ ಬಾರಿಯ ಬೆಳೆ ವಿಮೆ ನಿರ್ವಹಣೆ ಜವಾಬ್ದಾರಿಯನ್ನು ಯಾವ ಕಂಪನಿಗೆ ವಹಿಸಲಾಗಿದೆ ?
ಈ ಬಾರಿಯ ವಿಮೆ ಜವಾಬ್ದಾರಿಯನ್ನು ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿಗೆ (ಎಐಸಿ) ವಹಿಸಲಾಗಿದೆ. ಅವರೇ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಕೆಲಸ ಶುರು ಮಾಡಿದ್ದಾರೆ.
* ಮಲ್ಲಪ್ಪ, ಬ್ಯಾಡಗಿ: ನಮಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಬೀಸಲಹಳ್ಳಿ ಸೊಸೈಟಿಯಲ್ಲಿ ಕೇಳಿದರೆ, ಲಿಂಕ್ ಜೊತೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ನಮಗೆ ಅಷ್ಟು ಹಣವಿಲ್ಲ. ಲಿಂಕ್ ಬೇಡವೆಂದರೂ ಸೊಸೈಟಿಯವರು ಕೇಳುತ್ತಿಲ್ಲ.
ಯೂರಿಯಾ ಪ್ರಮಾಣ ಕಡಿಮೆ ಮಾಡಿ. ಪೊಟ್ಯಾಶಿಯಂ ಹಾಕಿ. ಅದರಿಂದ ರೋಗ ನಿರೋಧಕ ಶಕ್ತಿ ಬರುತ್ತದೆ. ಕಾಳುಗಳು ಗಟ್ಟಿ ಆಗುತ್ತವೆ. ಇಳುವರಿಯೂ ಚೆನ್ನಾಗಿರುತ್ತವೆ. ಜಿಲ್ಲೆಯಲ್ಲಿ ಯೂರಿಯಾ ಕೊರತೆ ಇಲ್ಲ. ಬೀಸಲಹಳ್ಳಿ ಸೊಸೈಟಿಯವರ ಜೊತೆ ಮಾತನಾಡಿ ಸಮಸ್ಯೆ ಸರಿಪಡಿಸುವೆ.
* ಸುರೇಶ, ಹಾವನೂರು: ಗೋವಿನ ಜೋಳ ಹಾಗೂ ಕಬ್ಬು ಹಾಕುತ್ತಿದ್ದೇವೆ. ಇಳುವರಿ ಬರುತ್ತಿಲ್ಲ. ನೀರಿನಲ್ಲಿ ಉಪ್ಪಿನ ಅಂಶ ಇರುವುದಾಗಿ ಹೇಳುತ್ತಿದ್ದಾರೆ. ಏನು ಮಾಡುವುದು?
ಪ್ರತಿ ವರ್ಷವೂ ಒಂದೇ ಬೆಳೆ ಬೆಳೆಯುವುದರಿಂದ ಇಳುವರಿ ಕಡಿಮೆ ಬರುತ್ತದೆ. ಗೋವಿನ ಜೋಳದಲ್ಲಿ ಮುಳ್ಳಸಜ್ಜೆ ಕಳೆ ಬರುತ್ತಿದೆ. ಸೋಯಾಬಿನ್, ಶೇಂಗಾ ಹಾಕಿ ಚೆನ್ನಾಗಿ ಬರುತ್ತದೆ. ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿಯಲ್ಲಿ ನೀರು ಪರೀಕ್ಷೆ ಮಾಡಿಸಿ, ನಂತರ ಸಲಹೆ ಪಡೆದುಕೊಳ್ಳಿ
* ರವೀಂದ್ರಗೌಡ್ರ ಪಾಟೀಲ; ಬೆಳೆ ವಿಮೆ ಹಾಗೂ ಬೆಳೆ ಪರಿಹಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ವಿಮೆ ಕಂಪನಿಗಳ ನಿಯಮಗಳು ಅವೈಜ್ಞಾನಿಕವಾಗಿವೆ. ಅವುಗಳನ್ನು ಸರಿಪಡಿಸಬೇಕು
ನಿಮ್ಮ ಸಲಹೆಯನ್ನು ಸರ್ಕಾರಕ್ಕೆ ತಿಳಿಸಲಾಗುವುದು
ಚಿನ್ನಮುಳಗುಂದದ ಶಿವಾನಂದ, ಶ್ಯಾಡಗುಪ್ಪಿಯ ಶರಣಪ್ಪ ಅವರು ತೋಟಗಾರಿಕೆ ಬೆಳೆಗಳ ಬಗ್ಗೆ ವಿಚಾರಿಸಿದಾಗ, ಮಂಜುನಾಥ ಅವರು ಪ್ರಾಥಮಿಕ ಮಾಹಿತಿ ನೀಡಿದರು. ಇನ್ನಷ್ಟು ಮಾಹಿತಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಂದ ಕೊಡಿಸುವುದಾಗಿ ತಿಳಿಸಿದರು.
(ನಿರ್ವಹಣೆ: ಸಂತೋಷ ಜಿಗಳಿಕೊಪ್ಪ, ಅಮಿತ ಶೇಟ, ಮಾಲತೇಶ ಇಚ್ಚಂಗಿ)
ಇದೊಂದು ಅರ್ಥಪೂರ್ಣ ಫೋನ್–ಇನ್ ಕಾರ್ಯಕ್ರಮ. ರೈತರ ಜೊತೆ ಮಾತನಾಡಲು ಅವಕಾಶ ಕಲ್ಪಿಸಿದ ‘ಪ್ರಜಾವಾಣಿ‘ಗೆ ಧನ್ಯವಾದ- ಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಹಾವೇರಿ
ಕೃಷಿಗೆ ರಾಸಾಯನಿಕ ಔಷಧಿ ಯಾಕೆ?
ಫೋನ್–ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಬೊಮ್ಮಿಕಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಕಾವ್ಯಾ ಹಿರೇಮಠ ‘ನಮ್ಮ ಶಿಕ್ಷಕರು ‘ರಾಸಾಯನಿಕ ಬಳಸಿದರೆ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಎಲ್ಲರೂ ಸಾವಯವ ಬಳಸಿ’ ಎನ್ನುತ್ತಾರೆ. ಆದರೆ ನೀವು ಏಕೆ ರಾಸಾಯನಿಕ ಔಷಧಿ ಮಾರಲು ಅವಕಾಶ ನೀಡಿದ್ದೀರಾ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಂಜುನಾಥ ‘ಕೃಷಿ ಬಗ್ಗೆ ಇರುವ ನಿನ್ನ ಆಸಕ್ತಿಗೆ ಧನ್ಯವಾದ. ಇಂದು ಹಲವು ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ರಾಸಾಯನಿಕ ಔಷಧಿಗಳನ್ನು ದಿಢೀರ್ ಬಂದ್ ಮಾಡಿದರೆ ಸಾಕಷ್ಟು ಸಮಸ್ಯೆ ಆಗುತ್ತದೆ. ಆಹಾರ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಕ್ಕ– ಪಕ್ಕದ ದೇಶದಲ್ಲಿ ಈ ಪ್ರಯೋಗ ಮಾಡಿ ದಿವಾಳಿತನ ಅನುಭವಿಸಿದ್ದಾರೆ. ಹೀಗಾಗಿ ಹಂತ ಹಂತವಾಗಿ ರಾಸಾಯನಿಕ ಬಳಕೆ ಕಡಿಮೆ ಮಾಡುವ ಕೆಲಸ ನಡೆದಿದೆ’ ಎಂದರು. ‘ಸಾವಯವ ಕೃಷಿ ಮಾಡುವವರಿಗೆ ಪ್ರಮಾಣ ಪತ್ರ ನೀಡುವ ಕಂಪನಿಗಳಿವೆ. ಈ ಪತ್ರ ಪಡೆದರೆ ಅಂಥ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಉತ್ತಮ ಬೆಲೆ ಸಿಗುತ್ತಿದೆ. ಹೆಚ್ಚಿನ ರೈತರು ಸಾವಯವ ಕೃಷಿಯತ್ತ ಒಲುವು ಹೊಂದಬೇಕು’ ಎಂದು ಹೇಳಿದರು.
ಗೋವಿನ ಜೋಳದಲ್ಲಿ ಲದ್ದಿ ಹುಳು: ನಿರ್ವಹಣೆ
ಸುಲಭ ಜಿಲ್ಲೆಯಲ್ಲಿ ಗೋವಿನ ಜೋಳ ಬೆಳೆಯಲ್ಲಿ ಲದ್ದಿ (ಫಾಲ್ ಸೈನಿಕ) ಹುಳು ಕಾಣಿಸಿಕೊಳ್ಳುತ್ತಿದೆ. ಇದರಿಂದ ಬೆಳೆ ಕುಂಠಿತವಾಗುತ್ತದೆ. ಇದರ ನಿರ್ವಹಣೆಗೆ ಕೆಲ ಉಪಾಯಗಳು ಇಲ್ಲಿವೆ. * ಬೆಳೆಯ ಮೇಲೆ ಮೊಟ್ಟೆಯ ಗುಂಪುಗಳು ಕಂಡುಬಂದಾಗ ಸಂಗ್ರಹಿಸಿ ನಾಶಪಡಿಸಬೇಕು * ಪ್ರತಿ ಎಕರೆಗೆ 4 ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು * ಮೆರಾರೈಜಿಯಂ ರಿಲೇಯಿ (ಪ್ರತಿ ಲೀಟರ್‌ಗೆ 2 ಗ್ರಾಂ) ಅಥವಾ ಬ್ಯಾಸಿಲಸ್ ಥುರಿಂಜಿನ್ಸಿಸ್ (ಪ್ರತಿ ಲೀಟರ್‌ಗೆ 2 ಮಿ.ಲೀ) ಸಿಂಪಡಣೆ ಮಾಡಬೇಕು * ಬೇವಿನ ಬೀಜದ ಕಷಾಯ (ಶೇ 3) ಅಥವಾ ಅಜಾಡಿರಕ್ಟಿನ್ 10000 ಪಿಪಿಎಂ (ಪ್ರತಿ ಲೀಟರ್‌ಗೆ 2 ಮಿ.ಲೀ) ಬೆರೆಸಿ ಸಿಂಪಡಿಸಬೇಕು * ಎಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ (ಪ್ರತಿ ಲೀಟರ್‌ಗೆ 0.4 ಗ್ರಾಂ) ಅಥವಾ ಕ್ಲೋರಾಂಟ್ರನಿಲಿಪ್ರೋಲ್ 18.5 ಎಸ್.ಸಿ (ಪ್ರತಿ ಲೀಟರ್ ನೀರಿಗೆ 0.4 ಮಿ.ಮೀ) ಸುಳಿಯ ಭಾಗಕ್ಕೆ ತಲುಪುವಂತೆ ಸಿಂಪಡಣೆ ಮಾಡಬೇಕು * ಬೆಳೆಯಲ್ಲಿ ಫೋಷಕಾಂಶ ಕೊರತೆ ನೀಗಿಸಲು 19;19;19 ನೀರಿನಲ್ಲಿ ಕರಗುವ ರಸಗೊಬ್ಬರದೊಂದಿಗೆ ಲಘು ಪೋಷಕಾಂಶ ಮಿಶ್ರಣವನ್ನು ಬೆರೆಸಿ ಸಿಂಪರಣೆ ಮಾಡಬೇಕು. * ಕೃಷಿ ಜಮೀನಿನಲ್ಲಿ ನೀರು ಹೆಚ್ಚಾದರೆ ಬಸಿಗಾಲುವೆ ನಿರ್ಮಿಸಿ ನೀರು ಹೊರಕೆ ಕಳುಹಿಸಬೇಕು
ಜಿಲ್ಲೆಯ ಕೃಷಿ ಕ್ಷೇತ್ರದ ವಿವರ
327087 ಹೆಕ್ಟೇರ್ ಜಿಲ್ಲೆಯಲ್ಲಿ ಬಿತ್ತನೆ ಕ್ಷೇತ್ರದ ಗುರಿ 296177 ಹೆಕ್ಟೇರ್ ಬಿತ್ತನೆ ಪೂರ್ಣ 23526 ಕ್ವಿಂಟಾಲ್ ಬೀಜ ಪೂರೈಕೆ 16976 ಕ್ವಿಂಟಾಲ್ ಬೀಜ ವಿತರಣೆ 145556 ಟನ್ ರಸಗೊಬ್ಬರ ಪೂರೈಕೆ 91179 ರಸಗೊಬ್ಬರ ವಿತರಣೆ
ಆ್ಯಪ್ ಬಳಸಿ ಬೆಳೆ ಸಮೀಕ್ಷೆ
ರೈತರಿಗಾಗಿ ಬೆಳೆಗಳ ಸಮೀಕ್ಷೆಗೆಂದು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ‘ಪೂರ್ವ ಮುಂಗಾರು ಹಾಗೂ ಮುಂಗಾರು ರೈತರ ಬೆಳೆ ಸಮೀಕ್ಷೆ 2024’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ರೈತರು ಬೆಳೆದ ಮಾಹಿತಿಯನ್ನು ಚಿತ್ರ ಸಹಿತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇದೇ ಮಾಹಿತಿ ಆಧರಿಸಿ ಬೆಳೆ ವಿಮೆ ಬೆಳೆ ನಷ್ಟ ಬೆಂಬಲ ಬೆಲೆ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ಲಭ್ಯವಾಗಲಿವೆ. ‘₹ 66 ಕೋಟಿ ವಿಮೆ: ಕೇಂದ್ರಕ್ಕೆ ಮೇಲ್ಮನವಿ’ ಜಿಲ್ಲೆಯ ರೈತರಿಗೆ ಸಂದಾಯ ಆಗಬೇಕಿದ್ದ ₹ 66 ಕೋಟಿ ವಿಮೆ ಬಾಕಿ ಇದೆ. ವಿಮೆ ಜವಾಬ್ದಾರಿ ವಹಿಸಿಕೊಂಡಿದ್ದ ರಿಲಯನ್ಸ್ ಜನರನ್ ಇನ್ಶೂರೆನ್ಸ್ ಕಂಪನಿಯವರು ವಿಮೆ ಕೊಡುವುದಿಲ್ಲವೆಂದು ರಾಜ್ಯ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಸಮಿತಿ ವಜಾ ಮಾಡಿದೆ. ಈಗ ಕಂಪನಿಯವರು ಕೇಂದ್ರ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ಇತ್ಯರ್ಥವಾದ ನಂತರವೇ ವಿಮೆ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ’ ಎಂದು ಮಂಜುನಾಥ ಅಂತರವಳ್ಳಿ ಹೇಳಿದರು. ಬ್ಯಾಡಗಿಯ ರೈತ ಕಿರಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಈ ಬಾರಿಯೂ ಬೆಳೆ ವಿಮೆ ಪಾವತಿ ಆರಂಭವಾಗಿದ್ದು ಈವರೆಗೆ 93228 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 31 ಕೊನೆ ದಿನ’ ಎಂದರು.
ಹೊರ ಜಿಲ್ಲೆಯ ರೈತರಿಂದ ಕರೆ
* ಮಂಜುನಾಥ ಹರಪ್ಪನಹಳ್ಳಿ: ಗೋವಿನ ಜೋಳ ಇಳುವರಿ ಕಡಿಮೆ ಆಗುತ್ತಿದೆ. ಪರಿಹಾರವೇನು? ಬೆಳೆ ಪರಿವರ್ತನೆ ಮಾಡಿ ಇಳುವರಿ ಹೆಚ್ಚಾಗುತ್ತದೆ. ನೀರಾವರಿ ಇದ್ದರೆ ತರಕಾರಿ ಬೆಳೆಯಿರಿ ಉತ್ತಮ ಲಾಭ ಸಿಗುತ್ತದೆ
* ಮಧು ಧಾರವಾಡ: ಮಾವಿನ ತೋಟದಲ್ಲಿ ಮಿಶ್ರ ಬೆಳೆಗೆ ಏನು ಮಾಡಬೇಕು. ನೀರು ಕಡಿಮೆ ಇದೆ. ಕೃಷಿ ಇಲಾಖೆಯಿಂದ ಏನಾದರೂ ಯೋಜನೆ ಇದೆಯೇ? ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ ಮಾಡಿಸಿ. ಮಾವಿನ ತೋಟದೊಳಗೆ ಸೋಯಾಬಿನ್ ಉದ್ದು ಗೋವಿನ ಜೋಳ ಅಲಸಂದಿ ಸೇರಿ ಯಾವುದಾದರೂ ಬೆಳೆಯಿರಿ
* ರಾಜಶೇಖರ್ ಮುದ್ದೇಬಿಹಾಳ: ರೈತರಿಗೆ ವಿಷಜಂತು ಕಡಿದರೆ ಪರಿಹಾರ ಇದೆಯೇ? ಕೃಷಿ ಕೆಲಸ ಮಾಡುವಾಗ ಹಾವು ಹಾಗೂ ಇತರೆ ವಿಷಜಂತು ಕಡಿದು ಮೃತಪಟ್ಟರೆ ಉಪ ವಿಭಾಗಾಧಿಕಾರಿ ಸಮಿತಿ ಮೂಲಕ ₹ 2 ಲಕ್ಷ ಪರಿಹಾರ ನೀಡಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.