ADVERTISEMENT

ಪ್ರಜಾವಾಣಿ ಫೋನ್‌ ಇನ್‌: ಹಾವೇರಿಯಲ್ಲಿ ‘ಮಾದರಿ ಹಾಸ್ಟೆಲ್‌’ ರೂಪಿಸಲು ಕ್ರಮ

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್‌ ರೇಷ್ಮಾ ಹೇಳಿಕೆ

ಸಿದ್ದು ಆರ್.ಜಿ.ಹಳ್ಳಿ
ಶಂಕರ ಕೊಪ್ಪದ
Published 12 ಜನವರಿ 2024, 6:10 IST
Last Updated 12 ಜನವರಿ 2024, 6:10 IST
ಕೌಸರ್‌ ರೇಷ್ಮಾ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಹಾವೇರಿ – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಕೌಸರ್‌ ರೇಷ್ಮಾ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಹಾವೇರಿ – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ‘ಜಿಲ್ಲೆಯ ಎಲ್ಲ ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆಗಳನ್ನು ‘ಮಾದರಿ ಹಾಸ್ಟೆಲ್‌’ ಮತ್ತು ‘ಮಾದರಿ ಶಾಲೆ’ಯನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 83 ಹಾಸ್ಟೆಲ್‌ಗಳಿದ್ದು, ಪ್ರತಿ ತಿಂಗಳು 10 ‘ಮಾದರಿ ಹಾಸ್ಟೆಲ್’ಗಳನ್ನಾಗಿ ರೂಪಿಸಲು ಯೋಜನೆ ರೂಪಿಸಿದ್ದೇವೆ’ ಎಂದು ಹಾವೇರಿಯ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್‌ ರೇಷ್ಮಾ ತಿಳಿಸಿದರು. 

‘ಪ್ರಜಾವಾಣಿ’ ಫೋನ್‌ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ಗುಣಮಟ್ಟದ ಆಹಾರ, ಹಾಸ್ಟೆಲ್‌ ಕೊಠಡಿಗಳ ಸ್ವಚ್ಛತೆ, ಸ್ನಾನಗೃಹ ಮತ್ತು ಶೌಚಾಲಯಗಳ ನೈರ್ಮಲ್ಯ, ಮೆನು ಪ್ರಕಾರ ಊಟ–ತಿಂಡಿ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆ, ಯೋಗ, ಪ್ರಾರ್ಥನೆ, ಶೇ 100ರಷ್ಟು ಹಾಜರಾತಿ, ದಾಖಲೆಗಳ ನಿರ್ವಹಣೆ ಸೇರಿದಂತೆ ಪ್ರತಿಯೊಂದೂ ನಿಯಮಾನುಸಾರ ನಡೆಯುವಂತೆ ಸಹಾಯಕ ನಿರ್ದೇಶಕರು ಮತ್ತು ವಾರ್ಡನ್‌ಗಳಿಗೆ ಸೂಚಿಸಲಾಗಿದೆ. 2024ರ ಜನವರಿಯಿಂದ ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ಹಾಸ್ಟೆಲ್ ಮತ್ತು ವಸತಿ ಶಾಲೆಗಳನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಂತರ್ಜಾತಿ ವಿವಾಹ ಮತ್ತು ಸರಳವಿವಾಹಕ್ಕೆ ಸಂಬಂಧಪಟ್ಟ ಪ್ರೋತ್ಸಾಹಧನ ಹಾಗೂ ಮೆರಿಟ್‌ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ, ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಹೆಚ್ಚು ಕರೆಗಳು ಬಂದವು. ಎಲ್ಲ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ಸಮರ್ಪಕವಾದ ಉತ್ತರ ಕೊಟ್ಟು, ಸಮಸ್ಯೆ ಬಗೆಹರಿಸುವ ಭರವಸೆಯನ್ನೂ ಕೌಸರ್‌ ರೇಷ್ಮಾ ನೀಡಿದರು. 

ADVERTISEMENT

ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ಬಾರದಿರುವ ವಿದ್ಯಾರ್ಥಿಗಳು ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿಸಿರಬೇಕು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿರಬೇಕು. ಅರ್ಹ ಎಲ್ಲ ವಿದ್ಯಾರ್ಥಿಗಳಿಗೂ ಹಂತ– ಹಂತವಾಗಿ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ ಎಂದು ಉತ್ತರಿಸಿದರು. 

338 ಅರ್ಜಿಗಳು ಬಾಕಿ

2023–24ನೇ ಸಾಲಿನಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ಪ್ರೋತ್ಸಾಹಧನ ₹2.19 ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. 1,206 ಅರ್ಜಿಗಳು ಸ್ವೀಕೃತವಾಗಿದ್ದು, 17 ಅರ್ಜಿಗಳು ತಿರಸ್ಕೃತಗೊಂಡಿವೆ. 851 ಅರ್ಜಿಗಳು ಮಂಜೂರಾಗಿವೆ. 338 ಬಾಕಿ ಉಳಿದ ಅರ್ಜಿಗಳಿಗೆ ₹67 ಲಕ್ಷ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಮಾಹಿತಿ ನೀಡಿದರು. 

ನೀರಿನ ಸಮಸ್ಯೆ ನಿವಾರಿಸಿ

‘ಹಾವೇರಿ ನಗರದ ಶಿವಾಜಿನಗರದಲ್ಲಿರುವ ಬಾಲಕಿಯರ ವಸತಿನಿಲಯದಲ್ಲಿ ನೀರಿನ ಸಮಸ್ಯೆ ನಿವಾರಿಸಿ’ ಎಂದು ದಲಿತ ಮುಖಂಡ ಸಂಜಯಗಾಂಧಿ ಸಂಜೀವಣ್ಣನವರ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೇಷ್ಮಾ, ‘ಸಮಸ್ಯೆ ಗಮನಕ್ಕೆ ಬಂದಿದೆ. ಕೊಳವೆಬಾವಿ ಬತ್ತಿದ್ದು, ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಹಾಸ್ಟೆಲ್‌ನಲ್ಲಿ 100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಆದರೆ 300ಕ್ಕೂ ಅಧಿಕ ವಿದ್ಯಾರ್ಥಿಗಳು ಇರುವ ಕಾರಣ ನೀರಿನ ಕೊರತೆಯಾಗುತ್ತಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹಾವೇರಿ ನಗರಸಭೆ ವತಿಯಿಂದ 24X7 ಯೋಜನೆಯ ಮುಖ್ಯ ಪೈಪ್‌ಲೈನ್‌ನಿಂದ ಹಾಸ್ಟೆಲ್‌ಗೆ ಸಂಪರ್ಕ ಕಲ್ಪಿಸಲು ಕೋರಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ’ ಎಂದರು. 

ಸಿಸಿಟಿವಿ ಕ್ಯಾಮೆರಾ ಹಾಕಿಸಿ

‘ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಹಾಸ್ಟೆಲ್‌ನ ವಿದ್ಯಾರ್ಥಿಗಳು ಶಾಲೆಗಳಿಗೆ ಸರಿಯಾಗಿ ಹೋಗದೆ, ಹಾಸ್ಟೆಲ್‌ನಲ್ಲೇ ಕಾಲ ಕಳೆಯುತ್ತಾರೆ. ಹೀಗಾಗಿ ಸಿಸಿಟಿವಿ ಕ್ಯಾಮೆರಾ ಹಾಕಿಸಿ’ ಎಂದು ಫಕ್ಕಿರೇಶ ಕಾಳಿ ಮನವಿ ಮಾಡಿದರು. 

‘ಜಿಲ್ಲೆಯ ಎಲ್ಲ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಲಾಗಿದೆ. ಕಾಗಿನೆಲೆ ಹಾಸ್ಟೆಲ್‌ನಲ್ಲಿ ಸಿಸಿಟಿವಿ ಚಾಲನೆಯಲ್ಲಿದೆಯಾ? ಇಲ್ಲವೇ? ಎಂಬುದನ್ನು ಪರಿಶೀಲಿಸಲಾಗುವುದು ಮತ್ತು ವಿದ್ಯಾರ್ಥಿಗಳು ಶಾಲೆಗಳಿಗೆ ನಿತ್ಯ ಹೋಗುವಂತೆ ಕ್ರಮ ವಹಿಸಲಾಗುವುದು’ ಎಂದು ಕೌಸರ್‌ ರೇಷ್ಮಾ ತಿಳಿಸಿದರು. 

‘ಮಾಸ್ಟರ್‌ಮೈಂಡ್‌’ ಸೌಲಭ್ಯ ಪಡೆದುಕೊಳ್ಳಿ

ಪರಿಶಿಷ್ಟ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂಬ ಉದ್ದೇಶದಿಂದ ‘ಡೆಕ್ಕನ್‌ ಹೆರಾಲ್ಡ್‌’ ಮತ್ತು ‘ಪ್ರಜಾವಾಣಿ’ ಬಳಗದ ‘ಮಾಸ್ಟರ್‌ಮೈಂಡ್‌’ ಆನ್‌ಲೈನ್‌ ಮಾರ್ಗದರ್ಶಿಯ ಚಂದಾದಾರಿಕೆ ಸೌಲಭ್ಯವನ್ನು ಇಲಾಖೆಯಿಂದ ಒದಗಿಸಿದ್ದೇವೆ. ಹಿಂದಿನ ಪ್ರಶ್ನೆಪತ್ರಿಕೆಗಳು, ಪ್ರಚಲಿತ ವಿದ್ಯಮಾನ, ಲೇಖನಗಳು, ವಿಡಿಯೊಗಳು, 6 ಸಾವಿರಕ್ಕೂ ಹೆಚ್ಚಿನ ಅಭ್ಯಾಸ ಪ್ರಶ್ನೆಗಳು ಈ ಮಾರ್ಗದರ್ಶಿಯಲ್ಲಿ ಲಭ್ಯವಿದ್ಯು, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ ಎಂದು ಹೇಳಿದರು.  

ಕಚೇರಿ ಸ್ಥಾಪನೆಗೆ ನೆರವು ನೀಡಿ

‘2018ರಲ್ಲಿ ಎಲ್‌ಎಲ್‌ಬಿ ಮುಗಿದಿದೆ. ಕಚೇರಿ ಸ್ಥಾಪನೆಗೆ ಇಲಾಖೆಯಿಂದ ನೆರವು ನೀಡಿ’ ಎಂದು ರಾಣೆಬೆನ್ನೂರಿನ ಕುಮಾರ್ ಲಮಾಣಿ ಕೇಳಿದರು. ಇದಕ್ಕೆ ರೇಷ್ಮಾಉತ್ತರಿಸಿ, ‘ಇಲಾಖೆಯಿಂದ ₹1 ಲಕ್ಷ ಅನುದಾನ ಸಿಗುತ್ತದೆ. ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದರೆ, ಅನುದಾನ ಬಂದ ತಕ್ಷಣ ಕೊಡುತ್ತೇವೆ’ ಎಂದು ಭರವಸೆ ನೀಡಿದರು. 

ಶಾಂತಿ ಸಭೆ ನಡೆಸಲು ಕೋರಿಕೆ

‘ಅಹಿತಕರ ಘಟನೆ ಮತ್ತು ದೌರ್ಜನ್ಯ ಪ್ರಕರಣಗಳ ತಡೆಗೆ ಇಲಾಖೆಯಿಂದ ಜಾಗೃತಿ ಮೂಡಿಸಿ’ ಎಂದು ರಾಣೆಬೆನ್ನೂರಿನ ಮಹೇಶ್ ಕೋರಿದರು. ಇದಕ್ಕೆ ಉತ್ತರಿಸಿದ ರೇಷ್ಮಾ, ‘ಬೇಲೂರು, ಚಿಕ್ಕಮಾಗನೂರು, ನಂದಿಹಳ್ಳಿಯಲ್ಲಿ ಈಗಾಗಲೇ ಶಾಂತಿ ಸಭೆ ನಡೆಸಿದ್ದೇವೆ. ಎಲ್ಲಿಯಾದರೂ ಸಮಸ್ಯೆ ಇರುವುದು ತಿಳಿಸಿದರೆ ಕೂಡಲೇ ಶಾಂತಿ ಸಭೆ ನಡೆಸುತ್ತೇವೆ’ ಎಂದರು. 

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ 

ಪ್ರಶ್ನೆ ಕೇಳಿದ ಇತರರು

ಆಕಾಶ್‌ ಕಲ್ಲನಗೌಡ್ರು (ಹಾವೇರಿ) ಚಂದ್ರಿಕಾ ದೊಡ್ಡಮನಿ (ರಾಣೆಬೆನ್ನೂರು) ಗಜೇಂದ್ರ (ಬ್ಯಾಡಗಿ) ಸಿದ್ದಪ್ಪ (ರಾಣೆಬೆನ್ನೂರು) ಶೇಖಪ್ಪ (ಚಿನ್ನಮುಳಗುಂದ) ವೆಂಕಟೇಶ ದೊಡ್ಡಮನಿ (ಹಾವೇರಿ) ನಾಗಮಣಿ (ಬ್ಯಾಡಗಿ) ಪ್ರೇಮಾ ವಾಲ್ಮೀಕಿ (ಹಾನಗಲ್‌) ಪ್ರವೀಣ್‌ (ರಟ್ಟೀಹಳ್ಳಿ) ರವಿ ನೇರಲಗಿ (ಸವಣೂರು) ರಮೇಶ ಭಜಂತ್ರಿ (ಶಿಗ್ಗಾವಿ) ಮಂಜುನಾಥ್‌ (ಹಾವೇರಿ) ರೇಖಾ ಭೀಮಣ್ಣನವರ (ಹಾನಗಲ್‌) ಫಕ್ಕೀರಪ್ಪ ಭಜಂತ್ರಿ (ತಿಳವಳ್ಳಿ) ಗಿರೀಶ್‌ (ಹಾನಗಲ್‌) ಪ್ರವೀಣ ಹರಿಜನ (ಹಾವೇರಿ) ರೇಖಾ (ಹಾವೇರಿ) ಶಂಭುಲಿಂಗಯ್ಯ ಮಠದ (ನೆಗಳೂರು) ದೀಪಿಕಾ ಚಲವಾದಿ (ರಾಣೆಬೆನ್ನೂರು) ಲಕ್ಷ್ಮಿ ಲಮಾಣಿ (ಸವಣೂರು) ಶಿಲ್ಪಾ (ಹಿರೇಕೆರೂರು) ಲಲಿತಾ ಹರಿಜನ (ಕಬ್ಬೂರು) ಚಂದ್ರಪ್ಪ (ಹಿರೇಕೆರೂರು).

ವಿದೇಶದಲ್ಲಿ ಓದಲು ನೆರವು

ಹಿರೇಕೆರೂರಿನ ಶ್ರುತಿ ‘ಎಂಜಿನಿಯರಿಂಗ್‌ ಕೋರ್ಸ್ ಮುಗಿದಿದೆ. ವಿದೇಶದಲ್ಲಿ ಓದಲು ಇಲಾಖೆಯಿಂದ ಯಾವ ರೀತಿ ನೆರವು ಸಿಗುತ್ತದೆ’ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಕೌಸರ್‌ ರೇಷ್ಮಾ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಇಲಾಖೆಯಿಂದ ‘ಪ್ರಬುದ್ಧ’ ಯೋಜನೆ ರೂಪಿಸಲಾಗಿದೆ. ಇಲಾಖೆಯ ಅರ್ಹತಾ ಪರೀಕ್ಷೆಯಲ್ಲಿ ನಿಗದಿಪಡಿಸಿದ ಅಂಕ ಪಡೆಯಬೇಕು. ಆಯ್ಕೆಯಾದವರಿಗೆ ಬೋಧನಾ ಶುಲ್ಕ ಪುಸ್ತಕಗಳ ವೆಚ್ಚ ಮತ್ತು ಇತರ ಸೌಲಭ್ಯಗಳು ಸಿಗಲಿವೆ. ಹೆಚ್ಚಿನ ವಿವರಗಳಿಗೆ ಇಲಾಖೆ ವೆಬ್‌ಸೈಟ್‌ ನೋಡಿ ಎಂದರು.

ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ

ವಿವಿಧ ವಿವಾಹಗಳ ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ 2023ರ ಜೂನ್‌ ತಿಂಗಳಲ್ಲಿ ₹52 ಲಕ್ಷ ಮೊದಲನೇ ಕಂತು ಬಿಡುಗಡೆಯಾಗಿತ್ತು. ನಂತರ ಸೆಪ್ಟೆಂಬರ್‌ನಲ್ಲಿ ₹29 ಲಕ್ಷ ಬಿಡುಗಡೆಯಾಯಿತು. ಒಟ್ಟು ₹81 ಲಕ್ಷ ಪ್ರೋತ್ಸಾಹಧನವನ್ನು 93 ಪ್ರಕರಣಗಳ ಫಲಾನುಭವಿಗಳಿಗೆ ನೀಡಲಾಗಿದೆ. ₹2.47 ಕೋಟಿ ಅನುದಾನ ಬಿಡುಗಡೆಯಾದ ಕೂಡಲೇ ಬಾಕಿ 95 ಪ್ರಕರಣಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಕೌಸರ್‌ ರೇಷ್ಮಾ ತಿಳಿಸಿದರು.  ಅಂತರ್ಜಾತಿ ವಿವಾಹವಾದವರು ಒಂದೂವರೆ ವರ್ಷದೊಳಗೆ ಅರ್ಜಿ ಹಾಕಬೇಕು. ಅವಧಿ ಮೀರಿದ ನಂತರ ಅರ್ಜಿ ಹಾಕಿದರೆ ಅಂಥ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು. 

ಕೋಚಿಂಗ್‌ ಸೌಲಭ್ಯ ಕಲ್ಪಿಸಿ

‘ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ಯುಪಿಎಸ್‌ಸಿ ಕೆಪಿಎಸ್‌ಸಿ ಕೋಚಿಂಗ್‌ ಸೌಲಭ್ಯ ಪಡೆಯುವುದು ಹೇಗೆ?‌’ ಎಂದು ಅಕ್ಕಿಆಲೂರಿನ ಸದಾನಂದ  ಕೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಮಾಹಿತಿಯನ್ನು ಕೇಳಿ ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶ ಪರೀಕ್ಷೆ ನಡೆಸಿ ಗಳಿಸಿದ ಅಂಕಗಳ ಆಧಾರದ ಮೇಲೆ ನಿಗದಿತ ಗುರಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಶಿಷ್ಯವೇತನ ಮತ್ತು ತರಬೇತಿಯ ವೆಚ್ಚ ಭರಿಸಲಾಗುವುದು. ದೆಹಲಿ ಹೈದರಾಬಾದ್‌ ಬೆಂಗಳೂರು ಧಾರವಾಡ ದಾವಣಗೆರೆ ಮುಂತಾದ ಕಡೆ ತರಬೇತಿ ಪಡೆಯಬಹುದು ಎಂದು ಕೌಸರ್‌ ರೇಷ್ಮಾ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.