ಹಾವೇರಿ: ‘ಬ್ರಾಹ್ಮಣ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿಯೇ ಪ್ರತಿಭಾ ಪುರಸ್ಕಾರ ಯೋಜನೆಯನ್ನು ಪ್ರಸಕ್ತ ವರ್ಷದಿಂದ ಜಾರಿಗೊಳಿಸಲಾಗುವುದು’ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಹೇಳಿದರು.
ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಈಚೆಗೆ ಆಯೋಜಿಸಿದ್ದ ವಿಪ್ರ ಬಾಂಧವರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ಹೆಚ್ಚು ಅಂಕ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ₹5ರಿಂದ ₹15 ಸಾವಿರದವರೆಗೆ ನಗದು ಬಹುಮಾನ ನೀಡಲಾಗುವುದು. ಇದು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅನ್ವಯವಾಗುವುದು ಎಂದರು.
ವಿಪ್ರ ಸಮಾಜದಲ್ಲಿ ಅನೇಕರು ಬಡವರಿದ್ದು ಅವರಿಗೆ ಈವರೆಗೂ ವಸತಿ ಯೋಜನೆಯ ಲಾಭ ದೊರೆತಿಲ್ಲ. ಇದಕ್ಕಾಗಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ 50 ಮನೆಗಳನ್ನು ವಸತಿ ರಹಿತರಿಗೆ ನೀಡಬೇಕು. ಇದಕ್ಕೆ ಅಗತ್ಯವಿರುವ ಪ್ರಥಮ ಹಂತದ ಹಣವನ್ನು ಫಲಾನುಭವಿ ಪರವಾಗಿ ಮಂಡಳಿ ಭರಿಸಲಿದೆ ಎಂದರು.
ವೇದ ಅಧ್ಯಯನವನ್ನು ಉತ್ತೇಜಿಸಲು ವೇದ ಶಿಷ್ಯವೇತನ, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ, ಸ್ವಯಂ ಉದ್ಯೋಗ ಆರಂಭಕ್ಕೆ ಪುರುಷೋತ್ತಮ ಹಾಗೂ ವೃದ್ಧರಿಗೆ ವೃದ್ಧಾಶ್ರಮ ತೆರೆಯುವ ಚಿಂತನೆ ನಡೆದಿದೆ. ಬ್ರಾಹ್ಮಣರು ತಮ್ಮಲ್ಲಿನ ಉಪವರ್ಗದಿಂದ ದೂರವಿದ್ದು, ನಾವೆಲ್ಲ ಬ್ರಾಹ್ಮಣರು ಎಂಬ ಭಾವನೆ ಹೊಂದಿ ಏಕತೆ ಪ್ರದರ್ಶಿಸಬೇಕು. ವಿಪ್ರರ ಅಭಿವೃದ್ಧಿ ಕುರಿತು ಯಾವುದೇ ಸಲಹೆ ಸೂಚನೆ ನೀಡಿದರೂ ಅದನ್ನು ಮಂಡಳಿ ಸ್ವೀಕರಿಸುತ್ತದೆ. ಈ ತಿಂಗಳ ಕೊನೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ವಲಯಮಟ್ಟದಲ್ಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಬಿ. ನಾತು, ಸುಬ್ರಾಮ ಹೆಗಡೆ ಮಾತನಾಡಿ, ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ ನೀಡಿಕೆಯಲ್ಲಿದ್ದ ಗೊಂದಲ ನಿವಾರಣೆಯಾಗಿದ್ದು, ಸೆ.10ರ ನಂತರ ಅರ್ಹರಿಗೆ ಕಂದಾಯ ಇಲಾಖೆ ಮೂಲಕ ಪ್ರಮಾಣ ಪತ್ರ ದೊರಕಲಿದೆ ಎಂದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಭಾಕರರಾವ್ ಮಂಗಳೂರ ಮಾತನಾಡಿದರು. ಗಾಯತ್ರಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜೆ.ಕೆ. ದೇಸಾಯಿ, ರಮೇಶ್ ಪಾಟೀಲ್, ಸುರೇಶ್ ಕಡಕೋಳ, ಸತೀಶ ದೇಶಪಾಂಡೆ, ಶ್ರೀನಿವಾಸ ಶಿವಪೂಜಿ ಹುಬ್ಬಳ್ಳಿ, ಬ್ರಾಹ್ಮಣ ಸಂಘದ ಮುಖಂಡ ಎ.ವುಸಿ ಇದ್ದರು.ವಿ.ಜೆ. ಕುಲಕರ್ಣಿ ಸ್ವಾಗತಿಸಿದರು. ಗಾಯತ್ರಿ ಸಂಸ್ಥೆ ಉಪಾಧ್ಯಕ್ಷೆ ವಸಂತ ಮೊಕ್ತಾಲಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.