ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಅಧೀನದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರದಲ್ಲಿ ಒಬ್ಬರೇ ರೇಡಿಯಾಲಜಿಸ್ಟ್ ಕೆಲಸ ಮಾಡುತ್ತಿದ್ದು, ಸ್ಕ್ಯಾನಿಂಗ್ ಮಾಡಿಸಲು ಗರ್ಭಿಣಿಯರು ಹಾಗೂ ಇತರರು ತಿಂಗಳುಗಟ್ಟಲೇ ಸರದಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಬಹುತೇಕ ಬಡವರು ಹಾಗೂ ಮಧ್ಯಮ ವರ್ಗದವರು, ಜಿಲ್ಲಾಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗಬೇಕೆಂದು ಜಿಲ್ಲಾಸ್ಪತ್ರೆ ಸ್ಥಾಪಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.
ಗರ್ಭಿಣಿಯವರು ತಮ್ಮ ಮಗುವಿನ ಬೆಳವಣಿಗೆ ತಿಳಿದುಕೊಳ್ಳಲು ನಿಗದಿತ ದಿನದಂದು ಐದು ಬಾರಿ ಸ್ಕ್ಯಾನಿಂಗ್ ಮಾಡಿಸಬೇಕಾದ ಅಗತ್ಯತೆ ಇರುತ್ತದೆ. ತಪಾಸಣೆ ನಡೆಸುವ ವೈದ್ಯರು, ಸ್ಕ್ಯಾನಿಂಗ್ ಚೀಟಿ ಸಹ ಬರೆದುಕೊಡುತ್ತಿದ್ದಾರೆ. ಅದೇ ಚೀಟಿ ಹಿಡಿದು ಗರ್ಭಿಣಿಯರು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಕ್ಕೆ ಬರುತ್ತಿದ್ದಾರೆ.
‘ಇಂದು ಸ್ಕ್ಯಾನಿಂಗ್ ಸಾಧ್ಯವಿಲ್ಲ. ತಿಂಗಳು ಬಿಟ್ಟು ನಿಮ್ಮ ಸರದಿ ಬಂದಾಗ ಸ್ಕ್ಯಾನಿಂಗ್‌ಗೆ ಬನ್ನಿ’ ಎಂದು ಕೇಂದ್ರದ ಸಿಬ್ಬಂದಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಮಗುವಿನ ಸ್ಕ್ಯಾನಿಂಗ್ ಮಾಡಿಸಲು ಗರ್ಭಿಣಿಯರು, ತಿಂಗಳುಗಟ್ಟಲೇ ಕಾಯುತ್ತಿದ್ದಾರೆ. ನಿಗದಿತ ದಿನದಂದು ಸ್ಕ್ಯಾನಿಂಗ್ ಮಾಡಿಸಲು ಸಾಧ್ಯವಾಗದಲೇ ನೊಂದುಕೊಂಡು ಪರದಾಡುತ್ತಿದ್ದಾರೆ. ತಿಂಗಳ ಹಿಂದೆ ಬಂದು ವಾಪಸು ಹೋದವರು, ಪುನಃ ಈ ತಿಂಗಳು ಬರುತ್ತಿದ್ದಾರೆ. ಈ ಪೈಕಿ ಕೆಲವರ ಸ್ಕ್ಯಾನಿಂಗ್ ಸಹ ಮುಂದೂಡಲಾಗುತ್ತಿರುವ ಆರೋಪವಿದೆ.
ದಿನಕ್ಕೆ 20 ಸ್ಕ್ಯಾನಿಂಗ್ ಹೆಚ್ಚು: ಹಾವೇರಿ ಜಿಲ್ಲೆಗೆ ಒಂದೇ ರೇಡಿಯಾಲಜಿಸ್ಟ್ ಹುದ್ದೆ ಮಂಜೂರಾಗಿದೆ. ಅವರು ಸಹ ಜಿಲ್ಲಾಸ್ಪತ್ರೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ಉಪಕರಣಗಳಿದ್ದು, ದಿನಕ್ಕೆ ಗರಿಷ್ಠ 40 ಸ್ಕ್ಯಾನಿಂಗ್ ಮಾಡಲು ಅವಕಾಶವಿದೆ. ಆದರೆ, ಸದ್ಯ ದಿನಕ್ಕೆ ಸುಮಾರು 20 ಸ್ಕ್ಯಾನಿಂಗ್ ಸಹ ಆಗುತ್ತಿಲ್ಲವೆಂದು ರೋಗಿಗಳು ದೂರಿದರು.
‘ಗರ್ಭಿಣಿಯಾಗಿರುವ ನನಗೆ ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ಚೀಟಿ ಬರೆದುಕೊಟ್ಟಿದ್ದಾರೆ. ಆಗಸ್ಟ್ 6ರಂದು ಸ್ಕ್ಯಾನಿಂಗ್ ಮಾಡಿಸಲು ಕೇಂದ್ರಕ್ಕೆ ಹೋಗಿದ್ದೆ. ಆದರೆ, ಅವರು ಸೆಪ್ಟೆಂಬರ್ 2ರಂದು ಸ್ಕ್ಯಾನಿಂಗ್ ಮಾಡಿಸಲು ಬರುವಂತೆ ಬರೆದುಕೊಟ್ಟಿದ್ದಾರೆ’ ಎಂದು ನಾಗನೂರಿನ ರತ್ನಮ್ಮ ಹೇಳಿದರು.
‘ತಿಂಗಳು ಬಿಟ್ಟು ಬರುವಂತೆ ಸಿಬ್ಬಂದಿ ಹೇಳುತ್ತಿದ್ದಾರೆ. ಕಾಯಲು ಸಾಧ್ಯವಿಲ್ಲದಿದ್ದರೆ, ಖಾಸಗಿ ಲ್ಯಾಬ್‌ಗೆ ಹೋಗಿ ಎನ್ನುತ್ತಿದ್ದಾರೆ. ಬಡವರಾಗಿರುವ ನಾವು ಖಾಸಗಿ ಲ್ಯಾಬ್‌ಗೆ ಹೋಗಿ ದುಬಾರಿ ಹಣ ನೀಡಿ ಸ್ಕ್ಯಾನಿಂಗ್ ಮಾಡಿಸಬೇಕಾ? ಜಿಲ್ಲಾಸ್ಪತ್ರೆಯಲ್ಲಿ ಯಂತ್ರಗಳು ಇದ್ದರೂ ನಮ್ಮಂಥ ಬಡವರಿಗೆ ಉಪಯೋಗವಾಗುತ್ತಿಲ್ಲವೇಕೆ’ ಎಂದು ಅವರು ಪ್ರಶ್ನಿಸಿದರು.
‘ದಿನಕ್ಕೆ 40 ಮಂದಿಗೆ ಸ್ಕ್ಯಾನಿಂಗ್ ಮಾಡುವ ಸಾಮರ್ಥ್ಯವಿರುವ ಕೇಂದ್ರದಲ್ಲಿ ಸದ್ಯ 20 ಸ್ಕ್ಯಾನಿಂಗ್ ಸಹ ಮಾಡುತ್ತಿಲ್ಲ. ಒಬ್ಬರೇ ರೇಡಿಯಾಲಜಿಸ್ಟ್ ಇದ್ದು, ಅವರು ಸಹ ಪುರುಷರು. ಹೆಚ್ಚಾಗಿ ಮಹಿಳೆಯರು ಸ್ಕ್ಯಾನಿಂಗ್ ಮಾಡಿಸಲು ಬರುತ್ತಾರೆ. ಇನ್ನೊಬ್ಬ ಮಹಿಳಾ ರೇಡಿಯಾಲಜಿಸ್ಟ್ ಅವರನ್ನು ನೇಮಿಸಬೇಕು’ ಎಂದು ಗಾಂಧಿಪುರದ ಮಹಿಳೆ ಗಿರೀಜಾ ಆಗ್ರಹಿಸಿದರು.
ದುಬಾರಿ ದರ ವಸೂಲಿ: ‘ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರದಲ್ಲಿ ನಿಗದಿತ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಿಸಲು ಆಗುತ್ತಿಲ್ಲ. ಸ್ಕ್ಯಾನಿಂಗ್ ಅನಿವಾರ್ಯವಾಗಿರುವುದರಿಂದ, ಖಾಸಗಿ ಲ್ಯಾಬ್‌ಗೆ ಹೋಗುವಂತಾಗಿದೆ. ಖಾಸಗಿ ಲ್ಯಾಬ್‌ನಲ್ಲೂ ದುಬಾರಿ ದರ ವಸೂಲಿ ಮಾಡಲಾಗುತ್ತಿದೆ. ಸರ್ಕಾರವೇ ಖಾಸಗಿ ಲ್ಯಾಬ್‌ಗಳಲ್ಲಾದರೂ ಅರ್ಹ ಬೆಲೆ ನಿಗದಿಪಡಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
Highlights - ಜಿಲ್ಲಾಸ್ಪತ್ರೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರ ಮತ್ತೊಬ್ಬ ರೇಡಿಯಾಲಜಿಸ್ಟ್ ನೇಮಕಕ್ಕೆ ಆಗ್ರಹ
Cut-off box - ‘ಅಗತ್ಯವಿರುವವರಿಗೆ ತುರ್ತು ಸ್ಕ್ಯಾನಿಂಗ್’ ‘ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರದಲ್ಲಿ ದಿನಕ್ಕೆ 40 ಸ್ಕ್ಯಾನಿಂಗ್ ಮಾಡಲು ಅವಕಾಶವಿದೆ. ತುರ್ತು ಅಗತ್ಯವಿರುವವರಿಗೆ ಮೊದಲ ಪ್ರಾಶಸ್ತ್ಯ ನೀಡಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರು ತಿಳಿಸಿದರು. ಸ್ಕ್ಯಾನಿಂಗ್ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಜಿಲ್ಲೆಗೆ ಒಂದೇ ರೇಡಿಯಾಲಜಿಸ್ಟ್ ಹುದ್ದೆ ಮಂಜೂರಾಗಿದೆ. ಒಬ್ಬರೇ ರೇಡಿಯಾಲಜಿಸ್ಟ್ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಕೇಂದ್ರಕ್ಕೆ ಬರುವ ಜನರ ಸಂಖ್ಯೆ ಹೆಚ್ಚಿದ್ದು ರೇಡಿಯಾಲಜಿಸ್ಟ್ ಸಹ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು.
Cut-off box - ರೇಡಿಯಾಲಜಿಸ್ಟ್ ರಜೆ ಪಡೆದರೆ ಕೇಂದ್ರ ಬಂದ್ ಒಬ್ಬರೇ ರೇಡಿಯಾಲಜಿಸ್ಟ್ ಇರುವುದರಿಂದ ಅವರು ರಜೆ ಪಡೆದರೆ ಕೇಂದ್ರವನ್ನೇ ಬಂದ್ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಸ್ಕ್ಯಾನಿಂಗ್ ಪ್ರಕ್ರಿಯೆಯೇ ಸ್ಥಗಿತವಾಗುತ್ತಿದೆ. ‘2018ರಿಂದ 2020ರವರೆಗೆ ರೇಡಿಯಾಲಜಿಸ್ಟ್ ಕೊರತೆಯಿಂದ ಕೇಂದ್ರ ಬಂದ್ ಆಗಿತ್ತು. ರೇಡಿಯಾಲಾಜಿಸ್ಟ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಗ 58 ದಿನ ರಜೆ ಪಡೆದಿದ್ದರು. ಈ ಸಂದರ್ಭದಲ್ಲೂ ಕೇಂದ್ರದ ಬಾಗಿಲು ಮುಚ್ಚಿತ್ತು’ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.