ADVERTISEMENT

ಉದ್ಯಮವಾದ ಮಾಧ್ಯಮ ಕ್ಷೇತ್ರಕ್ಕೆ ಸಮಾಜ ಬಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 17:41 IST
Last Updated 1 ಜುಲೈ 2018, 17:41 IST
ಹಾವೇರಿ ನಗರದ ಅಶೋಕ ಹೋಟೆಲ್‌ನಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆಯನ್ನು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್‌.ಶಂಕರ್‌ ಪೋಟೊ ತೆಗೆಯುವ ಮೂಲಕ ಉದ್ಘಾಟಿಸಿದರು.
ಹಾವೇರಿ ನಗರದ ಅಶೋಕ ಹೋಟೆಲ್‌ನಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆಯನ್ನು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್‌.ಶಂಕರ್‌ ಪೋಟೊ ತೆಗೆಯುವ ಮೂಲಕ ಉದ್ಘಾಟಿಸಿದರು.   

ಹಾವೇರಿ:‘ಉದ್ಯಮವಾದ ಮಾಧ್ಯಮ ಕ್ಷೇತ್ರಕ್ಕೆ ಮೊದಲು ಬಲಿಯಾಗುವುದೇ ಸಮಾಜ’ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮ್ಮಿನಮಟ್ಟು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಅಶೋಕ ಹೋಟೆಲ್‌ನಲ್ಲಿ ನಡೆದ ‘ಪತ್ರಿಕಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು. ಡಿ.ವಿ.ಜಿ. ಹಾಗೂ ಖಾದ್ರಿ ಶ್ಯಾಮಣ್ಣ ಅವರ ಕಾಲಘಟ್ಟದಲ್ಲಿ ಮಾಧ್ಯಮ ರಂಗ ಎನ್ನುವುದು ಸಮಾಜ ಸೇವೆಯಾಗಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಆ ಕೆಲಸವನ್ನು ಮಾಧ್ಯಮ ಮಾಡುತ್ತಿಲ್ಲ. ಮಾಧ್ಯಮ ಮಿತ್ರರು ರಿಲಯನ್ಸ್ ಅಂತಹ ಕಂಪೆನಿಗಳ ಉದ್ಯೋಗಿಗಳಾಗುವ ದಿನಗಳು ದೂರ ಉಳಿದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕೇವಲ ಆಡಿಕೊಳ್ಳುತ್ತಿದ್ದೇವೆ ಅಷ್ಟೇ. ಅದಕ್ಕೆ, ಸಂವಿಧಾನದಲ್ಲಿ ವಿಧಿ ಅಥವಾ ಪುರಾವೆಗಳು ಕೂಡಾ ಇಲ್ಲ. ಬೇರೆ ಬೇರೆ ರಂಗಗಳಂತೆ ಇಂದು ಕೂಡಾ ಉದ್ಯಮವಾಗಿ ಹೊರಹೊಮ್ಮಿದೆ ಎಂದರು.

ADVERTISEMENT

ಅಷ್ಟೇ ಅಲ್ಲ, ಪತ್ರಕರ್ತರಿಗೆ ಸಂವಿಧಾನದಲ್ಲಿ ಯಾವುದೇ ವಿಶೇಷ ಸ್ಥಾನಮಾನಗಳು ಕೂಡಾ ಇಲ್ಲ. ಸಮಾಜದ ಒಬ್ಬ ಸಾಮಾನ್ಯ ವ್ಯಕ್ತಿಗೆ ಇರುವ ಸ್ಥಾನಮಾಗಳೇ ಇವರಿಗೂ ಇವೆ. ಎಷ್ಟೋ ಸಂಸ್ಥೆಗಳು ತಮ್ಮ ಪತ್ರಕರ್ತರಿಗೆ ನೇಮಕಾತಿ ಆದೇಶವನ್ನುಕೂಡಾ ನೀಡುತ್ತಿಲ್ಲ, ಒಂದು ವೇಳೆ ನೀಡಿದರೆ ಕಾರ್ಮಿಕ ಕಾಯ್ದೆ ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂದರು.

ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್‌.ಶಂಕರ್‌ ಮಾತನಾಡಿ, ಮಾಧ್ಯಮಗಳು ವಿಶ್ವಾರ್ಹ ಸುದ್ದಿಗಳನ್ನು ಪ್ರಕಟಿಸಿದಾಗ ಮಾತ್ರ, ಜನರ ವಿಶ್ವಾಸ ಗಳಿಸಲು ಸಾಧ್ಯ. ಅಲ್ಲದೇ, ಪತ್ರಿಕೋದ್ಯಮ ಇಂದು ಹಲವು ಆಯಾಮಗಳಲ್ಲಿ ಹಾಗೂ ಆನ್‌ಲೈನ್‌ ಕ್ಷೇತ್ರದಲ್ಲಿ ಸುರ್ದಿರ್ಘವಾಗಿ ಬೆಳೆಸಯುತ್ತಿದೆ ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ. ಮಾತನಾಡಿ, ಇಂದು ದೃಶ್ಯ ಹಾಗೂ ಮುದ್ರಣ ಮಾಧ್ಯಮ ಸಮಾಜದಲ್ಲಿ ಪ್ರಭಾವಿಯಾಗಿದ್ದು, ಅವರೆಡಕ್ಕಿಂತಲೂ ಸಾಮಾಜಿಕ ಮಾಧ್ಯಮ ಅತ್ಯಂತ ಪ್ರಭಾವಿಯಾಗಿದೆ. ಆದರೆ, ಅದರಲ್ಲಿ ಬರುವ ಎಷ್ಟೋ ಸುದ್ದಿಗಳು ಸತ್ಯಕ್ಕೆ ದೂರವಾಗಿರುತ್ತದೆ ಎಂದರು.

ಸನ್ಮಾನ:ಕಾರ್ಯಕ್ರಮದಲ್ಲಿ ಛಾಯಾಚಿತ್ರ ಪ್ರದರ್ಶನ ಮಾಡಿದ್ದ ‘ಪ್ರಜಾವಾಣಿ’ ಛಾಯಾಗ್ರಾಹಕ ನಾಗೇಶ ಬಾರ್ಕಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಚಾವಡಿ ಅವರನ್ನು ಸನ್ಮಾನಿಸಲಾಯಿತು.

ಆಕರ್ಷಕ ಛಾಯಾಚಿತ್ರ ಪ್ರದರ್ಶನ:

‘ಪ್ರಜಾವಾಣಿ’ ಛಾಯಾಗ್ರಾಹಕ ನಾಗೇಶ್‌ ಬಾರ್ಕಿ ಸೆರೆಹಿಡಿದ ಅಪರೂಪ ಹಾಗೂ ಆಕರ್ಷಕ ಛಾಯಾಚಿತ್ರಗಳ ಪ್ರದರ್ಶನ, ನೋಡುಗರನ್ನು ಆಕರ್ಷಿಸಿತು. ಶಾಸಕರಾದ ನೆಹರು ಓಲೇಕಾರ, ವೀರೂಪಾಕ್ಷಪ್ಪ ಬಳ್ಳಾರಿ, ಬಿ.ಸಿ.ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಕಾರ್ಯ ನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿಯ ಸದಸ್ಯ ಪಿ.ಎನ್.ಸತ್ಯಪ್ಪನವರ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರಾಮು ಮುದಿಗೌಡ್ರ, ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಚಾವಡಿ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್‌.ರಂಗನಾಥ ಇದ್ದರು.

ಈ ಹಿಂದೆ ಸಂಪಾದಕೀಯ ವಿಭಾಗ ಜಾಹೀರಾತು ವಿಭಾಗವನ್ನು ನಿಯಂತ್ರಣ ಮಾಡುತ್ತಿತ್ತು. ಆದರೆ, ಇಂದು ಜಾಹೀರಾತು ವಿಭಾಗ ಸಂಪಾದಕೀಯ ವಿಭಾಗವನ್ನು ನಿಯಂತ್ರಣ ಮಾಡುತ್ತಿದೆ.
–ದಿನೇಶ್‌ ಅಮ್ಮಿನಮಟ್ಟು,ಹಿರಿಯ ಪತ್ರಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.