ಹಾವೇರಿ: ಸೇವಂತಿಗೆ ಹೂವಿನ ದರ ತೀವ್ರ ಕುಸಿದ ಪರಿಣಾಮ 25ಕ್ಕೂ ಅಧಿಕ ರೈತರು ನಗರದ ಹೂವಿನ ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದ ಹೂಗಳನ್ನು ಶುಕ್ರವಾರ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಾಣೆಬೆನ್ನೂರು ತಾಲ್ಲೂಕಿನ ಮುಷ್ಟೂರು, ಮಣಕೂರು, ಲಿಂಗದಹಳ್ಳಿ ಗ್ರಾಮಗಳಿಂದ ರೈತರು ನಗರದ ಜಿಲ್ಲಾಸ್ಪತ್ರೆ ಮುಂಭಾಗದ ‘ಫ್ಲವರ್ ಮಾರ್ಕೆಟ್’ಗೆ ಸೇವಂತಿಗೆ ಹೂ ತಂದಿದ್ದರು. ತುಳಸಿ ಲಗ್ನದ ಸಂದರ್ಭದಲ್ಲಿ ಉತ್ತಮ ದರ ಸಿಗುತ್ತದೆ ಎಂದು ನಿರೀಕ್ಷಿಸಿದ್ದರು. ವ್ಯಾಪಾರಿಗಳು ಕೆ.ಜಿ.ಗೆ ₹10 ದರ ಎಂದು ಹೇಳಿದಾಗ, ತೀವ್ರ ಅಸಮಾಧಾನಗೊಂಡ ರೈತರು ಹಾಕಿದ ಬಂಡವಾಳವೂ ಸಿಗುವುದಿಲ್ಲ ಎಂದು ಬೇಸರದಿಂದ ಸುಮಾರು ಒಂದು ಕ್ವಿಂಟಲ್‌ನಷ್ಟು ಹೂಗಳನ್ನು ರಸ್ತೆಗೆ ಸುರಿದರು.
ರಸ್ತೆಯಲ್ಲಿ ಓಡಾಡುವ ಜನರು ಮತ್ತು ಬಸ್ಸುಗಳಲ್ಲಿ ಹೋಗುತ್ತಿದ್ದ ಜನರನ್ನು ಕೈಬೀಸಿ ಕರೆಯುತ್ತಾ, ಬನ್ನಿ ಉಚಿತವಾಗಿ ಹೂ ತೆಗೆದುಕೊಂಡು ಹೋಗಿ ಎಂದು ರೈತರೇ ಕರೆಯುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದ ಜನರ ಮನಸ್ಸನ್ನು ಕಲಕಿತು.
‘ದೀಪಾವಳಿ ಸಂದರ್ಭ ಸೇವಂತಿಗೆ ಹೂವಿನ ದರ ಕೆ.ಜಿ.ಗೆ ₹80ರಿಂದ ₹100 ಇದ್ದದ್ದು, ಈಗ ₹10ಕ್ಕೆ ಕುಸಿದಿದೆ. ಕಳೆದ ವರ್ಷ ಕೆ.ಜಿ.ಗೆ ₹180ರಿಂದ ₹200 ದರದಲ್ಲಿ ಮಾರಾಟ ಮಾಡಿದ್ದೆವು. ಒಳ್ಳೆಯ ಆದಾಯ ಸಿಕ್ಕಿದ್ದರಿಂದ ಅರ್ಧ ಎಕರೆಯಲ್ಲಿ ಹೂ ಬೆಳೆಯುತ್ತಿದ್ದ ನಮ್ಮೂರಿನ ರೈತರು ಈ ವರ್ಷ 3ರಿಂದ 4 ಎಕರೆಯಲ್ಲಿ ಬೆಳೆದಿದ್ದರು. ಬೆಂಗಳೂರಿನ ಮಾರುಕಟ್ಟೆಯಲ್ಲಿ ಹೂಗಳಿಗೆ ಉತ್ತಮ ಬೇಡಿಕೆ ಇಲ್ಲದ ಕಾರಣ, ಹಾವೇರಿ ಮಾರುಕಟ್ಟೆಗೆ ಹೂಗಳನ್ನು ತಂದಿದ್ದೆವು. ಇಲ್ಲಿಯೂ ದರ ಕುಸಿದಿದ್ದು, ಹೂ ಕೊಂಡುಕೊಳ್ಳುವವರು ಗತಿಯಿಲ್ಲ’ ಎಂದು ಮುಷ್ಟೂರು, ಮಣಕೂರು ರೈತರು ಸಮಸ್ಯೆ ತೋಡಿಕೊಂಡರು.
ಸಂಕಷ್ಟದಲ್ಲಿರುವ ಹೂವು ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು. ಬೆಂಬಲ ಬೆಲೆಯಡಿ ಹೂ ಖರೀದಿಸಿ ನೆರವು ನೀಡಬೇಕು.–ಚನ್ನವೀರಪ್ಪ ಹೂ ಬೆಳೆಗಾರ ಕೂನಬೇವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.