ADVERTISEMENT

ಹಾವೇರಿ | ದರ ಏರಿಕೆ ನೆಪ: ಗರ್ಭಿಣಿಯರಿಗೆ ವಿತರಿಸುವ ‘ಮೊಟ್ಟೆ’ಗೆ ಕತ್ತರಿ

24 ಮೊಟ್ಟೆ ಬದಲು 10 ರಿಂದ 15 ಮೊಟ್ಟೆ ವಿತರಣೆ

ಸಂತೋಷ ಜಿಗಳಿಕೊಪ್ಪ
Published 22 ಜೂನ್ 2024, 6:13 IST
Last Updated 22 ಜೂನ್ 2024, 6:13 IST
<div class="paragraphs"><p>ಕೋಳಿ ಮೊಟ್ಟೆ (ಸಂಗ್ರಹ ಚಿತ್ರ )</p></div>

ಕೋಳಿ ಮೊಟ್ಟೆ (ಸಂಗ್ರಹ ಚಿತ್ರ )

   

ಹಾವೇರಿ: ಮೊಟ್ಟೆ ದರ ಏರಿಕೆ ನೆಪವೊಡ್ಡಿ ಜಿಲ್ಲೆಯ ಹಲವೆಡೆ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಣೆಯಲ್ಲಿ ಕಡಿತ ಮಾಡಲಾಗಿದೆ. 24 ಮೊಟ್ಟೆಗಳ ಬದಲು 10 ರಿಂದ 15 ಮೊಟ್ಟೆಗಳನ್ನು ಮಾತ್ರ ವಿತರಿಸಲಾಗುತ್ತಿದೆ.

ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ನಿವಾರಿಸಲು ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ರೂಪಿಸಿದ್ದು, ಅದರ ಮೂಲಕ ಮೊಟ್ಟೆ ಮತ್ತು ಇತರೆ ದವಸ–ಧಾನ್ಯ ವಿತರಿಸಲಾಗುತ್ತದೆ.

ADVERTISEMENT

‘ಹಾನಗಲ್ ತಾಲ್ಲೂಕಿನ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಮೇ ತಿಂಗಳಲ್ಲಿ 25 ಮೊಟ್ಟೆ ವಿತರಿಸಲಾಗಿತ್ತು. ಆದರೆ,  ಜೂನ್‌ನಲ್ಲಿ 15 ಮೊಟ್ಟೆ ಮಾತ್ರ ವಿತರಿಸಲಾಗಿದೆ’ ಎಂದು ಜನರು ದೂರುತ್ತಾರೆ.

‘ಒಂದು ಮೊಟ್ಟೆಗೆ ಸರ್ಕಾರ ₹ 5 ನೀಡುತ್ತಿದೆ. ಈಗ ಮೊಟ್ಟೆ ದರ ₹ 7 ಆಗಿದೆ. ಹೆಚ್ಚುವರಿ ಹಣವನ್ನು ಸರ್ಕಾರ ಕೊಡುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಮೊಟ್ಟೆ ದರ ಕಡಿಮೆ ಇತ್ತು. ಒಂದು ಮೊಟ್ಟೆಗೆ ₹ 5 ದರದಲ್ಲಿ ₹ 120 ಕೊಟ್ಟು 24 ಮೊಟ್ಟೆ ಖರೀದಿಸಿ, ವಿತರಿಸಲಾಗಿತ್ತು. ಈ ತಿಂಗಳು ದರ ದುಬಾರಿ ಆಗಿರುವುದರಿಂದ, ಲಭ್ಯವಿರುವ ಹಣದಲ್ಲಿ 15 ಮೊಟ್ಟೆಗಳನ್ನು ಮಾತ್ರ ವಿತರಿಸಲಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

‘ಮೊಟ್ಟೆಗಳ ಸಂಖ್ಯೆ ಕಡಿಮೆ ಮಾಡುವಂತೆ ಸರ್ಕಾರ‘ಆದೇಶಿಸಿಲ್ಲ. ಆದರೆ, ನಮ್ಮ ಬಳಿ ಲಭ್ಯವಿರುವ ಹಣದಲ್ಲಿ ಎಷ್ಟು ಸಾಧ್ಯವೋ, ಅಷ್ಟು ಮೊಟ್ಟೆ ಮಾತ್ರ ಖರೀದಿಸಿ, ವಿತರಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಮಾತೃಪೂರ್ಣ ಯೋಜನೆ ಒಳ್ಳೆಯ ಕಾರ್ಯಕ್ರಮ. ಆದರೆ, ಇದೀಗ ಮೊಟ್ಟೆ ವಿತರಣೆಗೆ ತಕ್ಕಂತೆ ಸರ್ಕಾರ ಹಣ ಕೊಡುತ್ತಿಲ್ಲ ಎಂಬುದು ಬೇಸರದ ಸಂಗತಿ. ಸರ್ಕಾರದ ಈ ನಡೆ ಖಂಡನೀಯ. ದರ ಏರಿಕೆ ನೆಪದಲ್ಲಿ ಕಡಿಮೆ ಮೊಟ್ಟೆ ವಿತರಿಸುವುದು ಸರಿಯಲ್ಲ. ಕೂಡಲೇ ಮೊಟ್ಟೆ ಖರೀದಿಗೆ ಅಗತ್ಯವಿರುವ ಹಣವನ್ನು ಅಂಗನವಾಡಿಗಳಿಗೆ ಬಿಡುಗಡೆ ಮಾಡಬೇಕು’ ಎಂದು ಹಾನಗಲ್ ನಿವಾಸಿ ರತ್ನಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.