ADVERTISEMENT

ಹಾವೇರಿ: ಕಿರಿದಾದ ಕೆಳಸೇತುವೆ; ತಪ್ಪದ ಕಿರಿಕಿರಿ

ನಾಗೇಂದ್ರನಮಟ್ಟಿ ರೈಲು ಕೆಳಸೇತುವೆಯಲ್ಲಿ ಸಂಚಾರದಟ್ಟಣೆ, ಚರಂಡಿ ನೀರಿನ ದುರ್ವಾಸನೆ

ಮಂಜುನಾಥ ರಾಠೋಡ
Published 10 ಫೆಬ್ರುವರಿ 2020, 19:30 IST
Last Updated 10 ಫೆಬ್ರುವರಿ 2020, 19:30 IST
ಹಾವೇರಿಯ ನಾಗೇಂದ್ರನಮಟ್ಟಿ ರೈಲು ಕೆಳಸೇತುವೆಯಲ್ಲಿ ಸಂಚಾರದಟ್ಟಣೆಯಾಗಿರುವುದು (ಎಡಚಿತ್ರ), ನಾಗೇಂದ್ರನಮಟ್ಟಿಯ ರೈಲು ಹಳಿ ಪಕ್ಕದಲ್ಲಿ ನಿಂತಿರುವ ಕೊಳಚೆ ನೀರು ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ
ಹಾವೇರಿಯ ನಾಗೇಂದ್ರನಮಟ್ಟಿ ರೈಲು ಕೆಳಸೇತುವೆಯಲ್ಲಿ ಸಂಚಾರದಟ್ಟಣೆಯಾಗಿರುವುದು (ಎಡಚಿತ್ರ), ನಾಗೇಂದ್ರನಮಟ್ಟಿಯ ರೈಲು ಹಳಿ ಪಕ್ಕದಲ್ಲಿ ನಿಂತಿರುವ ಕೊಳಚೆ ನೀರು ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ   

ಹಾವೇರಿ: ನಗರದ ನಾಗೇಂದ್ರನಮಟ್ಟಿ ಹೋಗುವ ಮಾರ್ಗದಲ್ಲಿಚರಂಡಿ ನೀರಿನ ದುರ್ವಾಸನೆ ಒಂದೆಡೆಯಾದರೆ, ರೈಲು (ಕೆಳಸೇತುವೆ)ಅಂಡರ್‌ಪಾಸ್‌ನಲ್ಲಿ ಸಂಚಾರದಟ್ಟಣೆಯೂ ಗಂಭೀರವಾಗಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

ನಾಗೇಂದ್ರನಮಟ್ಟಿ ಭಾಗದಲ್ಲಿ ನಾಲ್ಕು ವಾರ್ಡ್‌ಗಳು ಬರುತ್ತವೆ. ಇಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಅಂಡರ್‌ಪಾಸ್‌ನಲ್ಲಿಯೇ ಓಡಾಡುತ್ತಾರೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ವೈಜ್ಞಾನಿಕವಾಗಿ ಇನ್ನೊಂದು ಅಂಡರ್‌ಪಾಸ್‌ ನಿರ್ಮಿಸಿ ಸಂಚಾರ ಸುಗಮಗೊಳಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ.

ಮಳೆಗಾಲದಲ್ಲಿ ರೈಲು ಕೆಳ ಸೇತುವೆಯಲ್ಲಿ ನೀರು ತುಂಬಿಕೊಂಡರೆ, ಹಳೇಎಪಿಎಂಸಿ ಮಾರುಕಟ್ಟೆ ಬಳಿಯ ಗುತ್ತಲ ರಸ್ತೆಯ ಹಳೇಯ ಅಂಡರ್‌ಪಾಸ್‌ ಮೂಲಕ ಹಾದು ಬರಬೇಕು. ಇಲ್ಲವೇ, ಹೊಸದಾಗಿ ನಿರ್ಮಿಸಲಾದ ಪ್ಲೈಓವರ್‌ ಮೂಲಕ ಸಾಗಬೇಕು. ಅಲ್ಲಿ ಬೃಹತ್‌ ವಾಹನಗಳು ಸಂಚರಿಸುವುದರಿಂದ ಚಿಕ್ಕಪುಟ್ಟ ವಾಹನ, ಪಾದಾಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಅಂಡರ್‌ಪಾಸ್‌ನಿಂದ ಬರಬೇಕೆಂದರೆ ಅಲ್ಲಿಯೂ ಮಳೆಗಾಲದಲ್ಲಿ ನೀರು ನಿಂತಿರುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

ADVERTISEMENT

ನಾಗೇಂದ್ರನಮಟ್ಟಿ ರೈಲು ಅಂಡರ್‌ಪಾಸ್‌ ಬ್ರಿಡ್ಜ್‌ನಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಗಣಜೂರ, ಕೋಳುರು, ಹಳೆ ವಾಟರ್‌ಟ್ಯಾಂಕ್‌ ಭಾಗ ಹೊಲಕ್ಕೆ, ಶಾಲಾ ಕಾಲೇಜಿಗೆವಿದ್ಯಾರ್ಥಿಗಳು, ಕಚೇರಿಗೆ ಹೋಗುವ ನೌಕರರು ನಿತ್ಯ ಇದೇ ಮಾರ್ಗವಾಗಿ ಓಡಾಡುವುದರಿಂದ ಸಂಚಾರ ದಟ್ಟಣೆ ಎದುರಿಸಬೇಕಾಗಿದೆ. ಮಳೆಗಾಲದಲ್ಲಿಯೂ ಇದು ಹೆಚ್ಚಾಗುತ್ತದೆ ಎಂದು ಸಾರ್ವಜನಿಕರು ದೂರುತ್ತಾರೆ.

‘ಬಸವೇಶ್ವರನಗರದ ಸಿ ಬ್ಲಾಕ್‌ ಬಳಿ ರೈಲು ಗೇಟು ಇದೆ. ಅಲ್ಲಿ ರಸ್ತೆ ಇದ್ದರೂ ಇಲ್ಲದಂತಾಗಿದ್ದು,ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಈ ಅಂಡರ್‌ಪಾಸ್‌ನಲ್ಲಿ ಕೆಲವು ಬಾರಿ ಅಪಘಾತ ಸಂಭವಿಸಿ ಜಗಳಗಳು ನಡೆಯುತ್ತವೆ’ ಎಂದು ಆಟೋ ಚಾಲಕರಾದ ರಫೀಕ್‌ಸಾಬ್‌ ಸಿರ್ಸಿ, ಗೌಸ್‌ ಕರ್ಜಗಿ ಹೇಳಿದರು.

ಚರಂಡಿ ನೀರಿನ ದುರ್ವಾಸನೆ

‘ಮಳೆಗಾಲದಲ್ಲಿ ನೀರು ಹರಿದು ಹೋಗಲು ಇಲ್ಲಿ ಜಾಗವಿಲ್ಲದಂತಾಗಿದೆ. ಇದರಿಂದ ನೀರು ನಿಂತು ದುರ್ವಾಸನೆ ಬೀರುತ್ತದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ.

ಅಲ್ಲದೆ, ಚಿಕನ್‌ ಮಾರುಕಟ್ಟೆಯಿಂದ ತ್ಯಾಜ್ಯಗಳನ್ನು ಇಲ್ಲಿಯೇ ತಂದು ಸುರಿಯುತ್ತಾರೆ. ಇದರಿಂದಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಲ್ಲದೆ, ರಾತ್ರಿ ಹಂದಿ ನಾಯಿಗಳು ಗುಂಪು ಗುಂಪಾಗಿ ಸೇರಿ ಜನರಲ್ಲಿ ಭಯ ಹುಟ್ಟಿಸುತ್ತಿವೆ’ ಎನ್ನುತ್ತಾರೆ ಮಂಜಪ್ಪ ಕುಮ್ಮಣ್ಣನವರ.

ಇಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯುವುದಕ್ಕಾಗಿ, ನಗರಸಭೆಗೆ ಹಲವಾರು ಬಾರಿ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದೇವೆ. ಆದರೂ, ಅವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅಧಿಕಾರಿಗಳು ಇತ್ತ ಕಡೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಅವರು ದೂರಿದರು.

‘ರಾತ್ರಿಹೊತ್ತು ಆಸ್ಪತ್ರೆಗೆ ಹೋಗಬೇಕೆಂದರೆ ಕತ್ತಲಿನಲ್ಲಿಯೇ ಸಂಚರಿಸಬೇಕಾಗಿದೆ. ಇರುವ ಬೀದಿ ದೀಪಗಳು ಸರಿಯಾಗಿ ಬೆಳಕು ನೀಡುವುದಿಲ್ಲ. ಕಿಡಿಗೇಡಿಗಳು ಬೀದಿ ದೀಪಗಳನ್ನು ಹೊಡೆದು ಹಾಕುತ್ತಾರೆ.

ಅಧಿಕಾರಿಗಳು ಇದರ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಇಲ್ಲಿನ ನಿವಾಸಿ ಶಮಶಾದ್‌ಬೇಗಂ ಮುಜಾವರ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.