ಬ್ಯಾಡಗಿ: ಪಟ್ಟಣದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಸುತ್ತಲಿನ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ತಂಬಾಕು ಉತ್ಪನ್ನಗಳನ್ನು ಶುಕ್ರವಾರ ತಹಶೀಲ್ದಾರ್ ನೇತೃತ್ವದ ತಂಡ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಕಿಡಿಗೇಡಿಗಳು ರಾತ್ರಿ ವೇಳೆ ಶಾಲಾ ಆವರಣದಲ್ಲಿ ಗುಟ್ಕಾ, ಸಿಗರೇಟು ಹಾಗೂ ಇನ್ನಿತರ ತಂಬಾಕು ಉತ್ಪನ್ನಗಳನ್ನು ಎಸೆದಿದ್ದು, ಶಾಲೆಯ ಕಿಟಕಿ ಗಾಜು, ಹೂವಿನ ಕುಂಡಲಾ, ಸಿ.ಸಿ ಟಿವಿ ಕ್ಯಾಮೆರಾ ಸೇರಿದಂತೆ ಇನ್ನಿತರ ವಸ್ತುಗಳಿಗೆ ಹಾನಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು.
‘ಈ ಹಿಂದೆ ಆರೋಗ್ಯ ಇಲಾಖೆ ಸಿಬ್ಬಂದಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ತಾಕೀತು ಮಾಡಿದ್ದರೂ ಸುತ್ತಲಿನ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಅವ್ಯಾಹತವಾಗಿ ನಡೆದಿತ್ತು. ಶಾಲಾ ಆವರಣದಿಂದ 200 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಬಾರದು ಎನ್ನುವ ನಿಯಮವನ್ನು ಉಲ್ಲಂಘಿಸಿರುವ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಮಾಹಿತಿ ನೀಡಿದರು.
‘ಗ್ರಾಮೀಣ ಪ್ರದೇಶದಲ್ಲಿಯೂ ಶಾಲೆ ಎದುರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಲ್ಲಿಯೂ ದಾಳಿ ನಡೆಸಲಾಗುವುದು’ ಎಂದು ತಹಶೀಲ್ದಾರ್ ಎಫ್.ಎ.ಸೋಮನಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ತಾಲ್ಲೂಕು ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.