ಹಾವೇರಿ: ನೀಲ ಆಕಾಶದಲ್ಲಿ ಜಗಮಗಿಸುವ ಸೂರ್ಯನ ಸುತ್ತ ಉಂಟಾದ ತೇಜೋಮಂಡಲ (ಪರಿಧಿ) ದೃಶ್ಯ ನೋಡಿದ ಹಾವೇರಿ ನಗರದ ಜನರು ಆಶ್ಚರ್ಯಚಕಿತರಾದರು.
ಮಂಗಳವಾರ ಮಧ್ಯಾಹ್ನ 12.30ರಿಂದ 1.40ರವರೆಗೆ ಸೂರ್ಯನ ಸುತ್ತ ಮೂಡಿದ್ದ ವರ್ಣದುಂಗುರ ನೋಡಲು ಜನರು ಮುಗಿಬಿದ್ದರು. ಯುವಕ–ಯುವತಿಯರು ಮೊಬೈಲ್‌ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದೇನು ಅಪಾಯದ ಮುನ್ಸೂಚನೆಯಾ ಎಂದು ಕೆಲವು ಜನರು ಆತಂಕವನ್ನೂ ವ್ಯಕ್ತಪಡಿಸಿದರು.
ಸೂರ್ಯನ ಬೆಳಕು ಮತ್ತು ವಾಯುಮಂಡಲದಲ್ಲಿ ತೇಲಾಡುತ್ತಿರುವ ಹಿಮ ಸ್ಫಟಿಕಗಳು ಪರಸ್ಪರ ಪ್ರಭಾವ ಬೀರುವುದರಿಂದ ಸೃಷ್ಟಿಯಾಗುವ ದ್ಯುತಿ ವಿದ್ಯಮಾನಗಳ ವರ್ಗದ ಹೆಸರೇ ‘ತೇಜೋಮಂಡಲ’. ಆಂಗ್ಲ ಭಾಷೆಯಲ್ಲಿ ಇದನ್ನು ‘Halos’ ಎಂದು ಕರೆಯುತ್ತಾರೆ. ತೇಜೋಮಂಡಲಗಳು ಬಣ್ಣದ ಅಥವಾ ಬಿಳಿ ಉಂಗುರಗಳಿಂದ ಹಿಡಿದು ಆಕಾಶದಲ್ಲಿನ ವೃತ್ತ ಖಂಡಗಳು ಹಾಗೂ ಕಲೆಗಳವರೆಗೆ ವ್ಯಾಪಿಸುವ ಅನೇಕ ರೂಪಗಳನ್ನು ಹೊಂದಿರಬಹುದು. ತೇಜೋಮಂಡಲ ಪ್ರಕಾರಗಳಲ್ಲಿ ವೃತ್ತಾಕಾರದ ತೇಜೋಮಂಡಲ ಅತ್ಯಂತ ಚಿರಪರಿಚಿತವಾದದ್ದು ಎನ್ನುತ್ತಾರೆ ವಿಜ್ಞಾನ ಶಿಕ್ಷಕರು.
‘ಯಾವ ಜಾಗದಲ್ಲಿ ನಿಂತುಕೊಂಡು ನೋಡುತ್ತೇವೆ ಎಂಬುದರ ಆಧಾರದಲ್ಲಿ ಇದು ಗೋಚರಿಸುತ್ತದೆ. ನೆತ್ತಿಯ ಮೇಲೆ ಮೋಡಗಳಿದ್ದು, ಅದರಲ್ಲಿ ಮಂಜುಗಡ್ಡೆಯ ತುಣುಕುಗಳಿದ್ದರೆ, ಸೂರ್ಯನ ಬೆಳಕಿನ ಕಿರಣಗಳು ಪ್ರತಿಫಲನ ಮತ್ತು ವರ್ಣ ವಿಭಜನೆಗೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳಿಂದ ಉಂಗುರ ಗೋಚರಿಸುತ್ತದೆ. ಅದು ಸೂರ್ಯನ ಸುತ್ತ ಇರುವುದಿಲ್ಲ. ಅದು ಮೋಡದ ಸುತ್ತ ಉಂಟಾಗುತ್ತದೆ. ನಮಗೆ ಸೂರ್ಯನ ಸುತ್ತ ಇರುವಂತೆ ಕಂಡು ಬರುತ್ತದೆ. ಈ ವರ್ಷದಲ್ಲಿ ಎರಡು ಮೂರು ಬಾರಿ ಈ ರೀತಿ ಕಾಣಿಸಿಕೊಂಡಿದೆ. ಇದೊಂದು ಸಹಜ ಪ್ರಕ್ರಿಯೆ’ ಎನ್ನುತ್ತಾರೆ ಮೇವುಂಡಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ವೀರೇಶ ಗಡ್ಡದೇವರಮಠ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.