ADVERTISEMENT

ರಾಣೆಬೆನ್ನೂರು | ನಿರಂತರ ಮಳೆ: ಜಾನುವಾರು ವ್ಯಾಪಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 5:43 IST
Last Updated 31 ಅಕ್ಟೋಬರ್ 2024, 5:43 IST
ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ದಸರಾ ಜಾನುವಾರು ಜಾತ್ರೆಗೆ ಆಗಮಿಸಿದ ರಾಸುಗಳು 
ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ದಸರಾ ಜಾನುವಾರು ಜಾತ್ರೆಗೆ ಆಗಮಿಸಿದ ರಾಸುಗಳು    

ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ಜಾನುವಾರು ಜಾತ್ರೆ ನಡೆಯುತ್ತದೆ. ಇಲ್ಲಿನ ರಣದಮ್ಮ ದೇವಿ ದೇವಸ್ಥಾನದ ಗುಡ್ಡದ ಬಳಿ ಈ ಬಾರಿ ಮಾರಾಟಕ್ಕೆ 3 ಸಾವಿರಕ್ಕೂ ಅಧಿಕ ಜಾನುವಾರುಗಳು ಬಂದಿವೆ. ಇದು ಬರೀ ಜಾನುವಾರು ಜಾತ್ರೆಯಾಗಿರದೆ, ರೈತರು ಮತ್ತು ಖರೀದಿದಾರರ ನಡುವಿನ ಕೊಂಡಿಯಾಗಿ, ಗ್ರಾಮೀಣ ಜನರಿಗೆ ಸಡಗರ ಸಂಭ್ರಮದ ಹಬ್ಬವಾಗಿ ಗಮನ ಸೆಳೆಯುತ್ತಿದೆ.

ಆದರೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ವ್ಯಾಪಾರಕ್ಕೆ ಅನಾನುಕೂಲವಾಗಿದೆ. ರೈತರು ಮಾಲತೇಶ ದೇವರಿಗೆ ಹೋಗಿ ಪೂಜೆ ಸಲ್ಲಿಸಿದರು. ತಿರುಗಾಡಿ ನೋಡಿ ಸಣ್ಣ ಕರುಗಳು (ಹೋರಿ) ₹ 38 ಸಾವಿರದಿಂದ ₹ 1.20 ಲಕ್ಷದವರೆಗೆ, 4 ಹಲ್ಲು, 6 ಹಲ್ಲು, ಬಾಯಿ ಗೂಡಿದ ಮತ್ತು ದೊಡ್ಡವು ₹ 2 ಲಕ್ಷದಿಂದ ₹ 6 ಲಕ್ಷದವರೆಗೆ ಮಾರಾಟವಾಗಿದ್ದು ಕಂಡು ಬಂದಿತು.

ರಾಜ್ಯದ ಎಲ್ಲ ಜಿಲ್ಲೆಗಳ ವಿವಿಧ ಬಗೆಯ ರಾಸುಗಳು ಮಾರಾಟಕ್ಕೆ ಬಂದಿವೆ. ಮೂಡಲ, ಕಸಿ, ಕಿಲಾರಿ, ಗಿಡ್ಡ, ಮಾಸು ಮಿಶ್ರ ತಳಿ, ಜವಾರಿ, ಕರಮಲಗಿ ಸೇರಿದಂತೆ ವಿವಿಧ ಬಗೆಯ ಸುಂದರ ಮೈಕಟ್ಟು ಹೊಂದಿದ ಎತ್ತುಗಳು ಕಂಡು ಬಂದವು. ಮಾಲತೇಶ ದೇವರ ಕಾರ್ಣಿಕೋತ್ಸವದ ದಿನ ಗ್ರಾಮ ಪಂಚಾಯಿತಿಯಿಂದ ಜಾನುವಾರು ಜಾತ್ರೆ ಬಗ್ಗೆ ದಿನಾಂಕ ಘೋಷಣೆ ಮಾಡಲಾಗುತ್ತದೆ. ಪ್ರತಿ ವರ್ಷ ವ್ಯಾಪಾರಕ್ಕೆ ಬರುವ ಪಟ್ಟಣಗಳಿಗೆ ಕರಪತ್ರಗಳ ಮೂಲಕ, ವಾಟ್ಸ್‌ ಆಪ್‌ ಸಂದೇಶ, ದೂರವಾಣಿ ಮೂಲಕ ಮಾಹಿತಿ ಒದಗಿಸಲಾಗುವುದು ಎಂದು ಜಾನುವಾರು ಜಾತ್ರಾ ಕಮೀಟಿ ಅಧ್ಯಕ್ಷೆ ಧರ್ಮವ್ವ ಚೆನ್ನಪ್ಪ ಲಮಾಣಿ ತಿಳಿಸಿದರು.

ADVERTISEMENT

ಅ.12ಕ್ಕೆ ಆಗಬೇಕಿದ್ದ ಜಾನುವಾರು ಜಾತ್ರೆ ಮಳೆಯ ಕಾರಣ ಅ.16ಕ್ಕೆ ಜಾತ್ರೆ ಆರಂಭವಾಗಿದೆ. ಎತ್ತುಗಳು ನಿಲ್ಲುವ ಜಾಗವನ್ನು ಸ್ವಚ್ಚಗೊಳಿಸಿ, ಜಾನುವಾರುಗಳಿಗೆ ಕುಡಿಯುವ ನೀರು, ಬೀದಿ ದೀಪ ಅಳವಡಿಸಲಾಗಿದೆ. ಒಂದು ಜೊತೆ ಎತ್ತುಗಳಿಗೆ ಗ್ರಾಮ ಪಂಚಾಯಿತಿಯಿಂದ ₹ 400 ಹಣ ಕಟ್ಟಿಸಿಕೊಂಡು ತಳ ಚೀಟಿ ಕೊಡಲಾಗುವುದು ಎಂದು ಗ್ರಾ.ಪಂ ಸಿಬ್ಬಂದಿ ಬೀರೇಶ ಗುಡಗೂರ ಮತ್ತು ಜಗದೀಶ ಹೆಗ್ಗೇರಿ ತಿಳಿಸಿದರು.

ಮೊದಲ ಒಂದು ವಾರ ಮಳೆಯ ಕಾರಣ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿತ್ತು. ಈಗ 2-3 ದಿನಗಳಿಂದ ಖರೀದಿದಾರರು ಹೆಚ್ಚಾಗಿದ್ದರಿಂದ ವ್ಯಾಪಾರ ನಡೆಯುತ್ತಿತ್ತು. ಈಗ ಮತ್ತೆ ಮಳೆ ಸುರಿಯುತ್ತಿದ್ದರಿಂದ ಅನಾನುಕೂಲವಾಗಿದೆ ಎನ್ನುತ್ತಾರೆ ಅರಸೀಕೆರೆ ತಾಲ್ಲೂಕಿನ ಗಂಡಸಿಯ ಸಿದ್ದರಾಮಣ್ಣ.

ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ದಸರಾ ಜಾನುವಾರು ಜಾತ್ರೆಗೆ ಆಗಮಿಸಿದ ರಾಸುಗಳು 

‘ನಾನು ಸುಮಾರು 15 ವರ್ಷಗಳಿಂದ ದೇವರಗುಡ್ಡಕ್ಕೆ ಬರುತ್ತಿದ್ದೇನೆ. ಈ ಬಾರಿಯ ಜಾತ್ರೆಗೆ ಜಾನುವಾರುಗಳು ಕಡಿಮೆ ಬಂದಿರುವುದು ಬಿಟ್ಟರೆ ವ್ಯಾಪಾರ ವಹಿವಾಟುಗಳಿಗೇನು ಕಮ್ಮಿ ಇಲ್ಲ. ಜಾತ್ರೆಗೆ ಬಂದ ದಿನವೇ ಸಾಕಷ್ಟು ರಾಸುಗಳು ಮಾರಾಟವಾಗಿವೆ. ರೈತರು ಹುಮ್ಮಸ್ಸಿನಿಂದ ಜಾನುವಾರುಗಳನ್ನು ಖರೀದಿಸುತ್ತಿದ್ದಾರೆ’ ಎಂದು ಧಾರವಾಡ ತಾಲ್ಲೂಕಿನ ಮಮ್ಮಿಗಟ್ಟಿ ಗ್ರಾಮದ ಬಾಪೂಜಿ ದೇಸಾಯಿ ಹಾಗೂ ಗುಡ್ಡದ ಆನ್ವೇರಿಯ ಬಸವರಾಜ ಗಂಗಾಧರಪ್ಪ ಸವಣೂರ ಅವರು ಸಂತಸ ವ್ಯಕ್ತಪಡಿಸಿದರು.

ದೇವರಗುಡ್ಡ ಜಾನುವಾರು ಜಾತ್ರೆಯಲ್ಲಿ ರೈತರು ರಾಸುಗಳಿಗೆ ಹಿಡೆ ಹಗ್ಗ ಮೂಗುದಾರ ಮಕಾಡ ಬಾರುಕೋಲು ಗೊಂಡೆ ಕೊಳ್ಳಂಗಡ ಖರೀದಿಸಿದರು.

ದುಬಾರಿ ಬೆಲೆ ಬಾಳುವ ಎತ್ತುಗಳ ಜೊತೆಗೆ ಬಯಲಿನಲ್ಲಿಯೇ ಉಳಿದುಕೊಳ್ಳುತ್ತೇವೆ. ಡಬ್ಬಾ ಅಂಗಡಿಯಲ್ಲಿ ಸಿಗುವ ಎಗ್‌ರೈಸ್‌, ಮಿರ್ಚಿ ಮಂಡಕ್ಕಿ, ಅನ್ನಸಾಂಬಾರು ತಿಂದು ಜೀವನ ಸಾಗಿಸುತ್ತೇವೆ. ಒಂದು ಜೊತೆ ಎತ್ತುಗಳಿಗೆ ಲಾರಿ ಬಾಡಿಗೆ ₹ 3 ಸಾವಿರ ಖರ್ಚು ಬರುತ್ತದೆ. ₹ 100 ರಿಂದ 200 ಹಣ ಕೊಟ್ಟು ಹೊಟ್ಟು, ಹಸಿ ಹುಲ್ಲು ಖರೀದಿಸುತ್ತೇವೆ. ಖರ್ಚು ತೆಗೆದು ಒಂದು ಜೋಡಿ ಎತ್ತು ಮಾರಿದರೆ ₹ 3 ರಿಂದ 4 ಸಾವಿರ ಕೈಗೆ ಸಿಗುತ್ತದೆ ಎನ್ನುತ್ತಾರೆ ಹಾಸನದ ಗಂಡಸಿಯ ಗೋವಿಂದರಾಜ್‌.

ದೇರವಗುಡ್ಡ ಜಾನುವಾರು ಜಾತ್ರೆಯಲ್ಲಿ ರೈತರು ಎತ್ತುಗಳನ್ನು ಖರೀದಿಸಲು ಬೆರಳುಗಳ ಮೂಲಕ ವ್ಯಾಪರ ಕುದಿರಿಸಿದರು.
ದೇವರಗುಡ್ಡಕ್ಕೆ ಜಾನುವಾರುಗಳ ಜಾತ್ರೆಗೆ ಬರುವ ವ್ಯಾಪಾರಸ್ಥರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ
ಧರ್ಮವ್ವ ಚನ್ನಪ್ಪ ಲಮಾಣಿ ಜಾನುವಾರು ಜಾತ್ರಾ ಕಮೀಟಿ ಅಧ್ಯಕ್ಷೆ
ದೇವರಗುಡ್ಡ ಜಾತ್ರೆಗೆ ಬರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ಚಿಕಿತ್ಸಕರು ಹಾಗೂ ಸಿಬ್ಬಂದಿ ನೇಮಿಸಲಾಗಿದೆ.
ಡಾ.ನೀಲಕಂಠ ಅಂಗಡಿ ಸಹಾಯಕ ನಿರ್ದೇಶಕ ಪಶು ಸಂಗೋಪನೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.