ADVERTISEMENT

ರಾಜಕಾಲುವೆ ನುಂಗಿದ ಖದೀಮರು: ಹಾವೇರಿಗೆ ಜಲ ಕಂಟಕ

* ವರ್ಷದಿಂದ ವರ್ಷಕ್ಕೆ ಸಣ್ಣದಾಗುತ್ತಿರುವ ಕಾಲುವೆಗಳು * ಮಳೆ ಬಂದರೆ ಜನರಿಗೆ ಜೀವಭಯ * ಬಾಲಕನ ಸಾವು ಎಚ್ಚರಿಕೆಯ ಗಂಟೆ

ಸಂತೋಷ ಜಿಗಳಿಕೊಪ್ಪ
Published 21 ಅಕ್ಟೋಬರ್ 2024, 6:55 IST
Last Updated 21 ಅಕ್ಟೋಬರ್ 2024, 6:55 IST
<div class="paragraphs"><p>ಹಾವೇರಿ ಮಹರ್ಷಿ ವಾಲ್ಮೀಕಿ ವೃತ್ತ ಬಳಿ ಇರುವ ಕಾಲುವೆ ಕಿರಿದಾಗಿರುವುದು</p></div>

ಹಾವೇರಿ ಮಹರ್ಷಿ ವಾಲ್ಮೀಕಿ ವೃತ್ತ ಬಳಿ ಇರುವ ಕಾಲುವೆ ಕಿರಿದಾಗಿರುವುದು

   

ಹಾವೇರಿ: ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿರುವ ಹಾವೇರಿ, ಹೆಸರಿಗಷ್ಟೇ ಜಿಲ್ಲಾ ಕೇಂದ್ರವಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಗರ ತತ್ತರಿಸಿದೆ. ಮಳೆ ನೀರು ಸುಗಮವಾಗಿ ಹರಿದು ಹೋಗಲು ನಿರ್ಮಿಸಿದ್ದ ರಾಜಕಾಲುವೆ ಹಾಗೂ ಒಳ ಕಾಲುವೆಗಳ ಜಾಗ ಖದೀಮರ ಪಾಲಾಗಿದ್ದು, ಹಾವೇರಿ ಜಲ ಕಂಟಕದ ಸುಳಿಯಲ್ಲಿ ಸಿಲುಕಿದೆ.

ಮಳೆ ನೀರು ಹರಿದು ಹೋಗಬೇಕಿದ್ದ ರಾಜಕಾಲುವೆಗಳೇ ಕಾಣೆಯಾಗಿವೆ. ಮಳೆ ನೀರಿನಿಂದ ಹಾನಿ ಅನುಭವಿಸಿದ ಜನರು, ‘ರಾಜಕಾಲುವೆ ಹುಡುಕಿಕೊಡಿ’ ಎಂದು ಜಿಲ್ಲಾಡಳಿತ ಹಾಗೂ ನಗರಸಭೆಗೆ ಮನವಿ ಮಾಡುತ್ತಿದ್ದಾರೆ. ರಾಜಕಾಲುವೆ ಸುಳಿವು ಇಲ್ಲದಂತೆ ಅದರ ಜಾಗವನ್ನು ತಮ್ಮದಾಗಿಸಿಕೊಂಡಿರುವ ಭೂ ಕಳ್ಳರು, ದಾಖಲೆಗಳನ್ನೂ ನುಂಗಿ ನೀರು ಕುಡಿದಿದ್ದಾರೆ. ಹಾವೇರಿಯಲ್ಲಿ ರಾಜಕಾಲುವೆಗಳು ಎಲ್ಲಿವೆ ? ಎಂಬುದನ್ನು ಹುಡುಕಿಕೊಂಡು ಹೊರಟರೆ, ದಾಖಲೆಗಳೇ ಸಿಗುತ್ತಿಲ್ಲ.

ADVERTISEMENT

ಇತ್ತೀಚೆಗೆ ಹಳೇ ಪಿ.ಬಿ.ರಸ್ತೆ ಮೇಲೆ ಮೂರು ಅಡಿಯಷ್ಟು ರಭಸವಾಗಿ ನೀರು ಹರಿದಿತ್ತು. ಪಕ್ಕದ ಶಿವಾಜಿನಗರದಲ್ಲಿರುವ ಮನೆಗಳಿಗೂ ನೀರು ನುಗ್ಗಿತ್ತು. ಹಳೇ ಪಿ.ಬಿ.ರಸ್ತೆಯ ಬದಿಯ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬಾಲಕ ನಿವೇದನ್ ಗುಡಗೇರಿ (12) ಪ್ರಾಣ ಬಿಟ್ಟಿದ್ದಾನೆ. ಈ ಸಾವು, ಹಾವೇರಿ ಜನರಿಗೆ ಎಚ್ಚರಿಕೆ ಗಂಟೆ ನೀಡುತ್ತಿದೆ. ರಸ್ತೆಗೆ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು ಹೇಗೆ ? ಎಂಬುದರ ಬಗ್ಗೆ ತಿಳಿಯಲು ಹೊರಟಾಗ, ನಗರದ ಹಲವು ರಾಜಕಾಲುವೆಗಳು ಹಾಗೂ ಚರಂಡಿಗಳು ಒತ್ತುವರಿಯಾಗಿರುವ ಅಂಶ ಗೊತ್ತಾಗುತ್ತದೆ.

‘ಹಾವೇರಿಯಲ್ಲಿ ನಿಗದಿತ ಜಾಗಗಳಲ್ಲಿ ರಾಜಕಾಲುವೆಗಳು ಹಾಗೂ ಚರಂಡಿಗಳು ಇವೆ. ಈ ಹಿಂದೆಲ್ಲ ಜೋರು ಮಳೆಯಾದರೂ ರಸ್ತೆ ಮೇಲೆ ನೀರು ಬರುತ್ತಿರಲಿಲ್ಲ. ಮನೆಗಳಿಗೂ ನುಗ್ಗುತ್ತಿರಲಿಲ್ಲ. ಕೆಲ ಖದೀಮರು, ರಾಜಕಾಲುವೆ ಹಾಗೂ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಮನೆಗಳು– ಮಳಿಗೆಗಳು ಹಾಗೂ ಇತರೆ ಸಂಸ್ಥೆಗಳ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ’ ಎಂದು ರಾಣಿ ಚನ್ನಮ್ಮ ವೃತ್ತದಲ್ಲಿರುವ ವ್ಯಾಪಾರಿ ಚಂದ್ರಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.

‘15 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ನಗರದ ಹೊರವಲಯದಲ್ಲಿ ಮಳೆಯಿಂದ ಸಂಗ್ರಹವಾಗುವ ನೀರು, ರಾಜಕಾಲುವೆ ಹಾಗೂ ಚರಂಡಿ ಮೂಲಕ ಕೆರೆಗಳಿಗೆ ಹೋಗುತ್ತಿತ್ತು. ಆದರೆ, ಈಗ ರಾಜಕಾಲುವೆ ಜಾಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಲಾಗಿದೆ. ಹೀಗಾಗಿ, ನೀರು ಹರಿದುಹೋಗಲು ಜಾಗವಿಲ್ಲ. ರಸ್ತೆ ಮೇಲೆ ಹರಿದು, ಮನೆಗಳಿಗೆ ನುಗ್ಗುತ್ತಿದೆ’ ಎಂದು ದೂರಿದರು.‌

ಕಾಲುವೆ ಜಾಗದಲ್ಲಿ ಕುರುಹು: ರಾಜಕಾಲುವೆ ಜಾಗವನ್ನು ಭೂ ಕಳ್ಳರು ಒತ್ತುವರಿ ಮಾಡಿಕೊಂಡು ನೆಲವನ್ನು ಸಮ ಮಾಡಿದ್ದಾರೆ. ಕೆಲವರು, ರಾಜಕಾಲುವೆಯ ಅಕ್ಕ–ಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ, ರಾಜಕಾಲುವೆಯು ಕಿರಿದಾದ ಕಾಲುವೆಯಾಗಿದೆ. ರಾಜಕಾಲುವೆಗಳು ಹಾಗೂ ಇತರೆ ಕಾಲುವೆಗಳು ಎಲ್ಲೆಲ್ಲಿವೆ? ಎಂಬುದನ್ನು ಹುಡುಕಿದಾಗ ಕೆಲ ಕುರುಹುಗಳು ಪತ್ತೆಯಾದವು.

ಇಜಾರಿ ಲಕಮಾಪುರ ಬಳಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಸಮೀಪದಲ್ಲಿ ನೇತಾಜಿನಗರದ ಸಮೀಪದಲ್ಲಿ ಕಟ್ಟೆ ಇದೆ. ಅದರ ಕೆಳಭಾಗದಲ್ಲಿ ಕಾಲುವೆ ಇದೆ. ಆದರೆ, ಈ ಕಾಲುವೆ ಎಲ್ಲಿಂದ ? ಎಲ್ಲಿಗೆ ಹೋಗುತ್ತದೆ ? ಎಂಬುದು ನಿಖರವಾಗಿ ಜನರಿಗೆ ಗೊತ್ತಿಲ್ಲ. ಕಾಲುವೆಯ ಎರಡೂ ಬದಿಯಲ್ಲಿಯೂ ಮಣ್ಣು ಹಾಕಿ ಮುಚ್ಚಲಾಗಿದೆ. ಈ ಕಾಲುವೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರೆ ಮಾತ್ರ  ನಿಖರ ಮಾಹಿತಿ ಲಭ್ಯವಾಗಲಿದೆ.

ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ಕೆಳಭಾಗದಲ್ಲಿ ನೀರು ಹರಿದುಹೋಗಲು ರಾಜಕಾಲುವೆಯಿದೆ. ಆದರೆ, ವರ್ಷ ಕಳೆದಂತೆ ಈ ರಾಜಕಾಲುವೆ ಕಿರಿದಾದ ಕಾಲುವೆಯಾಗಿದೆ. ಕಾಲುವೆಯ ದಿಕ್ಕನ್ನು ಬದಲಿಸಲಾಗಿದೆ. ಜೊತೆಗೆ, ಕಾಲುವೆ ಹೂಳು ತುಂಬಿಕೊಂಡಿದೆ. ಕಾಲುವೆಯ ನಿಗದಿತ ಜಾಗವನ್ನು ಮುಚ್ಚಿ ಒತ್ತುವರಿ ಮಾಡಿಕೊಂಡಿರುವ ಆರೋಪ ಇದೆ. ಇತ್ತೀಚೆಗೆ ಮಳೆ ಸುರಿದ ಸಂದರ್ಭದಲ್ಲಿ, ಇದೇ ಕಾಲುವೆಯಿಂದಲೇ ಹೆಚ್ಚುವರಿಯಾದ ನೀರು ಹಳೇ ಪಿ.ಬಿ. ರಸ್ತೆಗೆ ಹರಿದಿತ್ತು. ಶಿವಾಜಿನಗರದ ಮನೆಗಳಿಗೂ ನುಗ್ಗಿತ್ತು.

ಸುಭಾಷ್ ವೃತ್ತ, ಮಂಜುನಾಥನಗರ, ಮುಲ್ಲಾನಕೇರಿ, ಹೆಗ್ಗೇರಿ ಕೆರೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ಬಳಿ ಮಳೆ ನೀರು ಹರಿದುಹೋಗಲು ಕಾಲುವೆಗಳಿವೆ. ಈ ಪೈಕಿ ಹಲವು ಕಾಲುವೆಗಳು ಒತ್ತುವರಿಯಾಗಿರುವುದಾಗಿ ಜನರು ಆರೋಪಿಸುತ್ತಿದ್ದಾರೆ.

ದಾಖಲೆ ಕೇಳಿದರೆ, ಬೆರಳು ಮಾಡುವ ಅಧಿಕಾರಿಗಳು: ನಗರದಲ್ಲಿರುವ ರಾಜಕಾಲುವೆಗಳು ಎಷ್ಟು? ಎಲ್ಲೆಲ್ಲಿ ಕಾಲುವೆಗಳಿವೆ ? ಎಂಬ ಬಗ್ಗೆ ನಗರಸಭೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಒಬ್ಬರ ಮೇಲೊಬ್ಬರು ಬೆರಳು ಮಾಡಿ ತೋರಿಸುತ್ತಿದ್ದಾರೆ. ಯಾವ ಅಧಿಕಾರಿ ಬಳಿಯೂ ರಾಜಕಾಲುವೆಗಳ ಸೂಕ್ತ ದಾಖಲೆ ಇಲ್ಲವೆಂಬುದು ಜಗಜ್ಜಾಹೀರವಾಗಿದೆ.

‘ಬಾಲಕ ನಿವೇದನ್ ಸಾವಿಗೆ ರಾಜಕಾಲುವೆ ಒತ್ತುವರಿಯೂ ಒಂದು ಕಾರಣ. ಹೀಗಾಗಿ, ರಾಜಕಾಲುವೆಗಳ ಮಾಹಿತಿ ನೀಡುವಂತೆ ನಗರಸಭೆ ಅಧಿಕಾರಿಗಳನ್ನು ಕೋರಲಾಗಿತ್ತು. ಆದರೆ, ಅವರು ತಮ್ಮ ಬಳಿ ದಾಖಲೆ ಇಲ್ಲವೆಂದು ಉತ್ತರಿಸಿದರು. ಭೂ ದಾಖಲೆಗಳ ಇಲಾಖೆಯವರನ್ನು ಕೇಳುವಂತೆ ಹೇಳಿ ಕೈ ತೊಳೆದುಕೊಂಡರು’ ಎಂದು ವಕೀಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾವೇರಿ ನಗರಕ್ಕೆ ಸಂಬಂಧಪಟ್ಟ ನಕಾಶೆ ಹಾಗೂ ಇತರೆ ದಾಖಲೆಗಳನ್ನು ನಗರಸಭೆಯವರು ಇಟ್ಟುಕೊಳ್ಳಬೇಕು. ಅವುಗಳು ಸಾರ್ವಜನಿಕ ದಾಖಲೆಗಳು. ಸಾರ್ವಜನಿಕರು ಕೇಳಿದ ಸಂದರ್ಭದಲ್ಲಿ ನೀಡಬೇಕು. ಆದರೆ, ಹಾವೇರಿ ನಗರಸಭೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ, ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕಾಲುವೆ ಮಾಹಿತಿ ಇಲ್ಲವೆಂದರೆ, ಅಧಿಕಾರಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ’ ಎಂದು ಕಿಡಿಕಾರಿದರು.

ಜೀವಭಯದಲ್ಲಿ ಬಡವರು: ಶಿವಾಜಿನಗರ, ಅಶ್ವಿನಿನಗರ, ನಾಗೇಂದ್ರನಮಟ್ಟಿ, ಹಾನಗಲ್ ರಸ್ತೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದಾರೆ. ಚಾಲಕರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಹೋಟೆಲ್ ಸಿಬ್ಬಂದಿ, ಕಚೇರಿ ಸಿಬ್ಬಂದಿಗಳು ಕುಟುಂಬದ ಜೊತೆ ನೆಲೆಸಿದ್ದಾರೆ. ಇವರ ಮನೆಗಳಿರುವ ಪ್ರದೇಶಕ್ಕೆ ಪ್ರತಿ ಬಾರಿ ನೀರು ನುಗ್ಗುತ್ತಿದ್ದು, ಅವರೆಲ್ಲರೂ ಜೀವಭಯದಲ್ಲಿ ಬದುಕು ದೂಡುತ್ತಿದ್ದಾರೆ.

ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಬಾಲಕ ನಿವೇದನ್ ಸಹ ಚಾಲಕನ ಮಗ. ಇಂಥ ಹಲವು ಮಕ್ಕಳು, ಶಿವಾಜಿನಗರ ಹಾಗೂ ಸುತ್ತಮುತ್ತ ವಾಸವಿದ್ದಾರೆ. ಬಾಲ್ಯದ ಆಟಗಳನ್ನು ಆಡಲು ಹಾಗೂ ಅಗತ್ಯವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಗಡೆ ಬರುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದ ಸಂದರ್ಭದಲ್ಲಿ, ಮಕ್ಕಳ ಪ್ರಾಣಕ್ಕೆ ಸಂಚಕಾರ ಬರುವ ಅವಘಡಗಳು ನಡೆಯುತ್ತಿವೆ. ಇದರಿಂದ ಹೆದರಿರುವ ಪೋಷಕರು, ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡುತ್ತಿದ್ದಾರೆ.

‘ಶ್ರೀಮಂತರು ಹಾಗೂ ಕೆಲ ಪ್ರಭಾವಿಗಳು, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡು ಕುಟುಂಬದ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ನಮ್ಮಂಥ ಬಡವರು, ‘ಯಾವಾಗ ಮನೆಗೆ ನೀರು ನುಗುತ್ತದೆ. ರಸ್ತೆಯಲ್ಲಿ ರಭಸವಾಗಿ ನೀರು ಬಂದರೆ ಏನು ಅನಾಹುತ ಸಂಭವಿಸುತ್ತದೆ?’ ಎಂಬ ಚಿಂತೆಯಲ್ಲಿಯೇ ಬದುಕುತ್ತಿದ್ದೇವೆ’ ಎಂದು ಶಿವಾಜಿನಗರದಲ್ಲಿ ವಾಸವಿರುವ ಕಾರ್ಮಿಕ ರಂಗಪ್ಪ ಮಾಚಣ್ಣನವರ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ನಾನು, ಪತ್ನಿ, ತಾಯಿ ಹಾಗೂ ಮೂವರು ಮಕ್ಕಳು ಒಂದು ಕೊಠಡಿಯ ಮನೆಯಲ್ಲಿ ವಾಸವಿದ್ದೇವೆ. ಪ್ರತಿ ಬಾರಿ ಜೋರು ಮಳೆ ಬಂದಾಗ, ಮನೆಯೊಳಗೆ ನೀರು ಬರುತ್ತದೆ. ನಿರಂತರವಾಗಿ ಮಳೆಯಾದರೆ, ಮನೆಗೆ ನುಗ್ಗಿದ ನೀರು ಬೇಗನೇ ಕಡಿಮೆ ಆಗುವುದಿಲ್ಲ. ದಿನದ ಕೂಲಿ ನಂಬಿರುವ ನಾನು ಹಾಗೂ ಪತ್ನಿ, ದಿನವೀಡಿ ದುಡಿದು ಮನೆಗೆ ಬಂದರೆ ನೀರು ಹೊರಗೆ ಹಾಕುವುದೇ ಕೆಲಸವಾಗುತ್ತಿದೆ’ ಎಂದು ವಸ್ತುಸ್ಥಿತಿ ತೆರೆದಿಟ್ಟರು.

‘ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಮಳೆ ನೀರು ಹರಿದು, ಕೆರೆಗಳಿಗೆ ಹೋಗಲು ದಾರಿ ಮಾಡಬೇಕು. ನಮ್ಮ ಮನೆಗೆ ನೀರು ನುಗ್ಗುವುದನ್ನು ತಡೆದು, ನೆಮ್ಮದಿಯಾಗಿ ಬದುಕಲು ಅನುಕೂಲ ಮಾಡಿಕೊಡಬೇಕು’ ಎಂದು ಅವರು ಕೋರಿದರು.

ಇಜಾರಿ ಲಕಮಾಪುರ ಬಳಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಸಮೀಪದಲ್ಲಿರುವ ಕಾಲುವೆ ಸಂಪೂರ್ಣವಾಗಿ ಮುಚ್ಚಿರುವುದು – ಪ್ರಜಾವಾಣಿ ಚಿತ್ರಗಳು/ ಮಾಲತೇಶ ಇಚ್ಚಂಗಿ
ಹಾವೇರಿ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿರುವ ಕಾಲುವೆ ಹೂಳು ತುಂಬಿಕೊಂಡಿರುವುದು ಹಾಗೂ ನೀರು ಹರಿದುಹೋಗದಂತೆ ತಡೆದಿರುವ ದೊಡ್ಡ ಗಾತ್ರದ ಪೈಪ್
ದಾಖಲೆ ನೀಡಲು ಅಧಿಕಾರಿಗಳ ಹಿಂದೇಟು ಕಾಲುವೆ ಜಾಗದಲ್ಲಿ ಕುರುಹುಗಳು ಒತ್ತುವರಿ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ
ಹಳೇ ಪಿ.ಬಿ.ರಸ್ತೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗ ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಇದೆ. ಅದು ಮುಗಿಯುತ್ತಿದ್ದಂತೆ ರಾಜಕಾಲುವೆ ಒತ್ತುವರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಕ್ರಮ ಜರುಗಿಸಲಾಗುವುದು
ಡಾ. ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ರಾಜಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಶಿವಾಜಿನಗರದ ಮನೆಗಳಿಗೆ ನೀರು ನುಗ್ಗುತ್ತಿದೆ. ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ
ಚನ್ನಮ್ಮ ಬ್ಯಾಡಗಿ ನಗರಸಭೆ ಸದಸ್ಯೆ ವಾರ್ಡ್ ನಂ. 9
ವ್ಯವಸ್ಥಿತ ಯೋಜನೆಯಿಲ್ಲದ ಹಾವೇರಿ
ವ್ಯವಸ್ಥಿತ ಯೋಜನೆ ಹಾಗೂ ಮೂಲ ಸೌಕರ್ಯಗಳಿಲ್ಲದೇ ಹಾವೇರಿ ಸೊರಗಿದೆ. ಯಾಲಕ್ಕಿ ಕಂಪಿನ ನಾಡು ಹಾವೇರಿ ಇದೀಗ ರಾಜಕಾಲುವೆಗಳು ಕಾಣೆಯಾಗಿರುವ ಹಾಗೂ ಮೂಲ ಸೌಕರ್ಯಗಳಿಲ್ಲದ ನಗರವಾಗಿ ಮಾರ್ಪಡುತ್ತಿದೆ. ವ್ಯವಸ್ಥಿತ ಯೋಜನೆ ರೂಪಿಸಿ ಜಿಲ್ಲಾ ಕೇಂದ್ರದ ಮರ್ಯಾದೆ ಉಳಿಸುವಂತೆ ಜನರು ಅಧಿಕಾರಿಗಳು–ಜನಪ್ರತಿನಿಧಿಗಳನ್ನು ಆಗ್ರಹಿಸುತ್ತಿದ್ದಾರೆ.
‘ಹಾವೇರಿ ನಕಾಶೆ ಪರಿಶೀಲಿಸಿ ಕ್ರಮ’
‘ರಾಜಕಾಲುವೆ ಹಾಗೂ ಇತರೆ ಕಾಲುವೆಗಳು ಚರಂಡಿಗಳ ಜಾಗ ಒತ್ತುವರಿ ಆಗಿರುವ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಹಾವೇರಿ ನಗರದ ಮೂಲ ನಕಾಶೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಕಾಶೆ ಕೈಗೆ ಸೇರಿದ ನಂತರ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ತಿಳಿಸಿದರು. ರಾಜಕಾಲುವೆ ಒತ್ತುವರಿ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ‘ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಗರದಲ್ಲಿ ಸಾಕಷ್ಟು ಹಾನಿಯಾಗಿದೆ. ಜನರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗಿದೆ’ ಎಂದರು. ‘ಹಾವೇರಿ ಮೂಲ ನಕಾಶೆ ನೀಡುವಂತೆ ನಗರಸಭೆ ಅಧಿಕಾರಿಗಳನ್ನು ಕೇಳಿದ್ದೆ. ಆದರೆ ಅವರು ತಮ್ಮ ಬಳಿ ಇಲ್ಲ. ಭೂ ದಾಖಲೆಗಳ ಇಲಾಖೆ ಬಳಿ ಇರುವುದಾಗಿ ತಿಳಿಸಿದ್ದಾರೆ. ಅಲ್ಲಿಯ ಅಧಿಕಾರಿಗಳಿಂದ ತ್ವರಿತವಾಗಿ ನಕಾಶೆ ಪಡೆದು ಸಲ್ಲಿಸುವಂತೆ ಹೇಳಿದ್ದೇನೆ. ನಕಾಶೆ ಪರಿಶೀಲಿಸಿದಾಗಲೇ ರಾಜಕಾಲುವೆಗಳು ಎಲ್ಲೆಲ್ಲಿವೆ ? ಎಂಬುದು ಗೊತ್ತಾಗಲಿದೆ. ಬಳಿಕ ಒತ್ತುವರಿ ತೆರವು ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ಅದನ್ನು ತೆರವು ಮಾಡಲು ಯಾರಿಗೂ ಹೆದರುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.