ADVERTISEMENT

ವೀರಗಾಸೆ ಕಲಾವಿದ ಮಹೇಶ್ವರಗೌಡ ಲಿಂಗದಹಳ್ಳಿಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 15:16 IST
Last Updated 30 ಅಕ್ಟೋಬರ್ 2022, 15:16 IST
ಮಹೇಶ್ವರಗೌಡ ಲಿಂಗದಹಳ್ಳಿ, ವೀರಗಾಸೆ ಕಲಾವಿದರು 
ಮಹೇಶ್ವರಗೌಡ ಲಿಂಗದಹಳ್ಳಿ, ವೀರಗಾಸೆ ಕಲಾವಿದರು    

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪ ಗ್ರಾಮದ ವೀರಗಾಸೆ ಕಲಾವಿದರಾದ ಮಹೇಶ್ವರಗೌಡ ಲಿಂಗದಹಳ್ಳಿ ಅವರು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಹೇಶ್ವರಗೌಡ ಲಿಂಗದಹಳ್ಳಿ ಅವರು ವೀರಗಾಸೆ ಕಲೆಯಲ್ಲಿ ಅಪ್ರತಿಮ ಕಲಾವಿದರಾಗಿದ್ದು, ತಮ್ಮ ವಂಶಪಾರಂಪರ್ಯವಾಗಿಬಂದಿರುವ ಪುರವಂತಿಕೆ (ವೀರಗಾಸೆ) ಕಲೆಯನ್ನು 10ನೇ ವಯಸ್ಸಿನಿಂದಲೇ ರೂಢಿಸಿಕೊಂಡಿದ್ದು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ.

ಧಾರವಾಡ ಆಕಾಶವಾಣಿ, ಬೆಂಗಳೂರು ದೂರದರ್ಶನ, ಜಾನಪದ ಜಾತ್ರೆ, ಜನಪದೋತ್ಸವ, ಮೈಸೂರು ದಸರಾ, ಹಂಪಿ ಉತ್ಸವ, ಸ್ವಾತಂತ್ರ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ, ಗಣರಾಜ್ಯೋತ್ಸವ, ಬನವಾಸಿ ಕದಂಬೋತ್ಸವ ಸೇರಿದಂತೆ ರಾಜ್ಯದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ADVERTISEMENT

ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಉತ್ತರ ಕರ್ನಾಟಕ ಉತ್ಸವ, ಜೈಪುರದಲ್ಲಿ ನಡೆದ ಲೋಕರಂಗ ಉತ್ಸವ, ಕೇರಳದಲ್ಲಿ ನಡೆದ ಕಾಸರಗೂರು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧಡೆ ತಮ್ಮ ಪುರವಂತಿಕೆ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದು, ಇವರ ಕಲೆಯನ್ನು ಮೆಚ್ಚಿ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಪ್ರಶಸ್ತಿಗಳು: 2007-08ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2011ರಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಜಾನಪದ ಲೋಕ ಪ್ರಶಸ್ತಿ, 2018ರಲ್ಲಿ ಹಾವೇರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. ಜಿಲ್ಲೆಯ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಗಿದೆ.

‘ಎಲೆಮರೆಕಾಯಿಯಂತಿರುವ ಗ್ರಾಮೀಣ ಜಾನಪದ ಕಲಾವಿದರ ಸಾಧನೆಯನ್ನು ಗುರುತಿಸಿ ಸರ್ಕಾರ ಪಾರದರ್ಶಕವಾಗಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಗ್ರಾಮೀಣ ಭಾಗದ ಕಲಾವಿದರಲ್ಲಿ ಮತ್ತಷ್ಟು ಚೈತನ್ಯ ಬಂದಂತಾಗಿದೆ’ ಎಂದು ಮಹೇಶ್ವರಗೌಡ ಲಿಂಗದಹಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.