ರಾಣೆಬೆನ್ನೂರು: ಎಲ್ಲ ಕನ್ನಡ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಾ, ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಾ, ಹಸನ್ಮುಖಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡರು ಶುಕ್ರವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಕುಳಿತಿದ್ದರು.
ಅವರ ಪುತ್ರ ಪ್ರಕಾಶ ಕೋಳಿವಾಡ, ಸೊಸೆ ಪೂರ್ಣಿಮಾ ಪ್ರಕಾಶ್ ಹಾಗೂ ಹೆಣ್ಣು ಮಕ್ಕಳಾದ ಪ್ರತಿಭಾ ಶರತ್‌ಚಂದ್ರ, ಸುನೀತಾ ವೆಂಕಟೇಶ, ಸಪ್ನಾ ಡಾ.ಶಿವಾನಂದ, ಸುಷ್ಮಾ ಹಾಗೂ ಅಳಿಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ಕೆಲ ಕಾಲ ಮನೆಯಲ್ಲಿ ಸಂತೋಷ ಹಂಚಿಕೊಳ್ಳುತ್ತಾ, ನಿರಾಳ ಭಾವದಲ್ಲಿದ್ದರು.
ಆ ನಂತರ ತಮಗಾಗಿ ಕಾಯುತ್ತಿದ್ದ ಮುಖಂಡರು, ಕಾರ್ಯಕರ್ತರೊಂದಿಗೆಯಾವ ಯಾವ ಮತಗಟ್ಟೆಗಳಲ್ಲಿ ಎಷ್ಟೆಷ್ಟು ಮತಗಳು ಬರಬಹುದು ಎಂಬುದರ ಬಗ್ಗೆ ಚರ್ಚಿಸಿ ಗೆಲವಿನ ಬಗ್ಗೆ ಲೆಕ್ಕಾಚಾರದಲ್ಲಿ ಮುಳುಗಿದರು.
ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಫಲಿತಾಂಶ ಏನೇ ಇರಲಿ. ಉಪ ಚುನಾವಣೆ ಸಮಾಧಾನ ತಂದಿದೆ. ಇಂದು ತಲೆಯ ಮೇಲಿನ ಭಾರ ಕಡಿಮೆಯಾಗಿದೆ. ಇಂಥ ಹತ್ತಾರು ಚುನಾವಣೆ ಎದುರಿಸಿದ್ದೇನೆ. ಮನಸ್ಸಿನಲ್ಲಿ ಯಾವುದೇ ಢವಢವ ಪ್ರಶ್ನೆಯೇ ಬರುವುದಿಲ್ಲ. ದುಗುಡವೂ ಇಲ್ಲ. ಇವತ್ತು ಸ್ವಲ್ಪ ರೆಸ್ಟ್ ಸಿಕ್ಕಿದೆ ಎನ್ನುತ್ತಾ ನಗೆ ಬೀರಿದರು.
‘ಕಾಂಗ್ರೆಸ್ ಪಕ್ಷದ ಹಿಂದಿನ ಸರ್ಕಾರ ಜನತೆಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ನಾನು ಸ್ಪೀಕರ್ ಆಗಿದ್ದಾಗ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಸಾಧನೆಗಳೇ ಇಂದು ಮಾತನಾಡುತ್ತಿವೆ. ಅವೇ ನನಗೆ ಶ್ರೀರಕ್ಷೆ’ ಎಂದರು.
ಅವರ ಪುತ್ರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಅವರು ಮಾತನಾಡಿ, ಐಟಿ ದಾಳಿಯಿಂದ ನಮ್ಮ ಗೆಲುವಿಗೆ ಯಾವುದೇ ಧಕ್ಕೆಯಾಗಿಲ್ಲ. ಹಾಗಾಗಿ ತಂದೆಯವರ ಗೆಲುವು ಕಟ್ಟಿಟ್ಟ ಬುತ್ತಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ‘ಕೆ.ಬಿ.ಕೋಳಿವಾಡ ಅವರು ರಾಜಕೀಯದಲ್ಲಿ ಅತ್ಯಂತ ಹಿರಿಯ ರಾಜಕಾರಣಿ. ಎಲ್ಲ ವರ್ಗದವರ ಪ್ರೀತಿ ಪಾತ್ರರಾಗಿದ್ದಾರೆ. ಅವರು 50 ವರ್ಷ ರಾಜಕೀಯದಲ್ಲಿದ್ದಾರೆ. 5 ಬಾರಿ ಗೆಲುವು ಪಡೆದು ಈಗ ಆರನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.