ರಾಣೆಬೆನ್ನೂರು: ಮಾನ್ಸೂನ್ ಆರಂಭವಾದರೂ ವಾಡಿಕೆಯಷ್ಟು ಮಳೆಯಾಗದಿದ್ದರಿಂದ ಜನರು ಹಾಗೂ ರೈತರನ್ನು ಚಿಂತೆಗೀಡು ಮಾಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 14 ಕೆರೆಗಳು ಬರಿದಾಗಿದ್ದು, ಕೆರೆ ಅಚ್ಚುಕಟ್ಟಿನಲ್ಲಿರುವ ಜಮೀನು ಹಾಗೂ ಗ್ರಾಮಗಳ ಅಂತರ್ಜಲ ಮಟ್ಟವೂ ಕುಸಿದಿದೆ.
ಗ್ರಾಮೀಣ ಬದುಕಿನ ಜೀವನಾಡಿ ಆಗಿರುವ ಕೆರೆಗಳು ಕುಡಿಯುವ ನೀರು, ಅಂತರ್ಜಲ ಮಟ್ಟ ಹೆಚ್ಚಿಸಲು ಆಸರೆಯಾಗಿವೆ. ಅತಿಕ್ರಮಣ, ಹೂಳು, ದುರಸ್ತಿ ಕಾಣದ ಏರಿ, ದಿಕ್ಕುತಪ್ಪಿದ ನೀರು ನಿರ್ವಹಣಾ ಪದ್ಧತಿಯಿಂದ ಕೆರೆಗಳು ಕ್ರಮೇಣ ಶಿಥಿಲಾವಸ್ಥೆಗೆ ತಲುಪುತ್ತಿವೆ. ಅರೇಮಲ್ಲಾಪುರದ ಹೊಸಕೆರೆ ಮತ್ತು ಶಿವಾಜಿನಗರದ ಕೆರೆಗಳು ಇದಕ್ಕೆ ನಿದರ್ಶನದಂತಿವೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಅರೇಮಲ್ಲಾಪುರದ ಹೊಸಕೆರೆ ತುಂಬಿದ ಮೇಲೆ ಮೂರನೇ ಡಿಸ್ಟಿಬ್ಯೂಟರ್ ಮೂಲಕ ಹೆಸ್ಕಾಂ ಗ್ರಿಡ್ ಎದುರಿಗೆ ಇರುವ ಶಿವಾಜಿ ನಗರದ ಕೆರೆಗೆ ಕಾಲುವೆ ಮೂಲಕ ನೀರು ಬಿಡಲಾಗುತ್ತದೆ. ಈ ಬಾರಿ ಮಳೆ ಇಲ್ಲದ ಕಾರಣ ಹೊಸಕೆರೆ ಮತ್ತು ಶಿವಾಜಿನಗರದ (ಬಡಾವಣೆ) ಕೆರೆಗಳು ಸಂಪೂರ್ಣ ಬರಿದಾಗಿವೆ.
ಅಪ್ಪರ್ ತುಂಗಾ ಮತ್ತು ಯಕ್ಲಾಸಪುರ ಏತ ನೀರಾವರಿ ಯೋಜನೆಯಿಂದ ಎರಡೂ ಕೆರೆಗಳಿಗೆ ನೀರು ತುಂಬಿಸುವ ಗುರಿ ಇದೆ. ತಾಲ್ಲೂಕಿನ ಐರಣಿ ಗ್ರಾಮದ ಬಳಿ ನದಿ ಸಮೀಪದಲ್ಲಿ ಕಾಲುವೆ ಕಾಮಗಾರಿ ಮತ್ತು ಯಂತ್ರಗಳ ದುರಸ್ತಿ ಕಾಮಗಾರಿ ನಡೆದಿರುವುದರಿಂದ ನೀರು ಸದ್ಯಕ್ಕೆ ಲಭ್ಯವಾಗುತ್ತಿಲ್ಲ ಎಂದು ಎಂದು ಗ್ರಾಮಸ್ಥರು ತಿಳಿಸಿದರು.
ಶಿವಾಜಿನಗರದ ಕೆರೆ ಸಂಪೂರ್ಣ ಬರಿದಾಗಿದ್ದರಿಂದ ಮಳೆಗಾಲದಲ್ಲೂ ಕುರಿಗಳಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಕೆರೆಯ ಸುತ್ತಲೂ ಕಸ, ಪೊದೆ, ಜಾಲಿ ಮುಳ್ಳಿನ ಕಂಟಿ ಆಳೆತ್ತರವಾಗಿ ಬೆಳೆದು ನಿಂತಿದೆ.
ಶಿವಾಜಿನಗರದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ, ಜನರು ಕೆರೆಯ ಸುತ್ತಲಿನ ಪ್ರದೇಶವನ್ನೇ ಬಹಿರ್ದೆಸೆಗೆ ಬಳಸುತ್ತಿದ್ದಾರೆ. ಹಳೇ ಬಟ್ಟೆ ಗಂಟು ಹಾಗೂ ಕಸವನ್ನೂ ತಂದು ಎಸೆದು ಹೋಗುತ್ತಿದ್ದಾರೆ. ಕೆರೆ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಜನರು ಆಗ್ರಹಿಸುತ್ತಿದ್ದಾರೆ.
‘ಮಳೆಗಾಲ ಚೆನ್ನಾಗಿ ಆಗಿ ಕೆರೆ ತುಂಬುವ ನಿರೀಕ್ಷೆ ಇತ್ತು. ಕೆರೆ ತುಂಬಿದ್ದರೆ, ಸುತ್ತಮುತ್ತಲು ಅಂತರ್ಜಲ ಮಟ್ಟ ಏರಿಕೆಯಾಗುತ್ತಿತ್ತು. ಈಗ ನೀರು ಇಲ್ಲದಿದ್ದರಿಂದ, ಅಂತರ್ಜಲ ಮಟ್ಟ ತೀರಾ ಕುಸಿದಿದೆ’ ಎಂದು ನಿವಾಸಿಗಳಾದ ನವೀನ ಸೂರ್ವೆ ಹಾಗೂ ಪರಶುರಾಮ ಮೂಕಮ್ಮನವರ ಅಳಲು ತೋಡಿಕೊಂಡರು.
ತಾಲ್ಲೂಕಿನ ಅಸುಂಡಿ ಕೆರೆಯ ಮೇಲ್ಬಾಗದ ಗ್ರಾಮಗಳಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ಮಳೆ ಹೆಚ್ಚಾಗಿದ್ದರಿಂದ ಕೆರೆಗೆ ಸ್ಪಲ್ಪ ನೀರು ಬಂದಿತ್ತು. ಮತ್ತೆ ಮಳೆ ಹೋದ ಮೇಲೆ ಕೆರೆ ನೀರು ಕಡಿಮೆಯಾಗಿದ್ದರಿಂದ ಈಗ ತುಂಗಭದ್ರಾ ನದಿ ತೀರದ ಕೋಟಿಹಾಳದಿಂದ ಅಸುಂಡಿ ಕೆರೆಗೆ ನೀರು ಹರಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ತಕ್ಕ ಮಟ್ಟಿಗೆ ನೀರು ಬರುತ್ತಿದೆ ಎಂದು ರೈತತರು ಹೇಳಿದರು.
ತಾಲ್ಲೂಕಿನ ಮೇಡ್ಲೇರಿ ಕೆರೆಯಲ್ಲಿ ನರೇಗಾ ಯೋಜನೆ ಮೂಲಕ ಹೂಳು ತೆಗೆಯಲಾಗುತ್ತಿತ್ತು. ಈ ಕೆಲಸ ಕುಂಟುತ್ತಾ ಸಾಗಿದೆ. ಕೆರೆಗಳ ಅತಿಕ್ರಮಣ ಒಂದು ಕಡೆಯಾದರೆ, ಹೂಳು ಸಮಸ್ಯೆ ಬಗೆಹರಿಯದ ಸಮಸ್ಯೆಯಾಗಿ ನಿಂತಿದೆ. ಹೂಳು ತುಂಬಿಕೊಂಡಿದ್ದರಿಂದ ಕೆರೆಗಳಲ್ಲಿ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.
‘ಮೆಡ್ಲೇರಿ, ಹನುಮನಮಟ್ಟಿ, ರಾಣೆಬೆನ್ನೂರು ಮತ್ತು ಕುಪ್ಪೇಲೂರ ಮಳೆ ಮಾಪನ ಸುತ್ತಮುತ್ತ ಮಳೆಯಾಗಿದೆ. ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿಲ್ಲ. ಕೆರೆ ಕಟ್ಟೆ ತುಂಬಿ ನೀರು ಹರಿದಾಡುವಷ್ಟು ಮಳೆಯಾಗಿಲ್ಲ. ಕೆರೆ ಕಟ್ಟೆ ತುಂಬಿಲ್ಲ’ ಎಂದು ಕೃಷಿ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ ಹೇಳಿದರು.
ಆರೇಮಲ್ಲಾಪುರ ಗ್ರಾಮದ ಗುಡ್ಡದ ಬಳಿ ಹೊಸಕೆರೆ ತುಂಬಿದರೆ ಮಾತ್ರ ಶಿವಾಜಿನಗರ ಕೆರೆಗೆ ನೀರು ಬರುತ್ತದೆ. ಈ ವರ್ಷ ಮಳೆ ಕೊರೆತೆಯಿಂದಾಗಿ ಯಾವ ಕೆರೆಗೂ ನೀರು ಬಂದಿಲ್ಲರಾಜಕುಮಾರ ಮರಿಯಪ್ಪ ನಲವಾಗಲ ಆರೇಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ
ರೈತರಿಗೆ ಬಿತ್ತನೆಗೆ ಅನುಕೂಲವಾಗುವ ರೀತಿಯಲ್ಲಿ ಜಮೀನು ತೇವಾಂಶವಾಗುವಷ್ಟು ಮಾತ್ರ ಮಳೆಯಾಗಿದೆ. ಆದರೆ ಕೆರೆ ಕಟ್ಟೆಗಳು ತುಂಬಿಲ್ಲ. ಇಲಾಖೆ ವ್ಯಾಪ್ತಿಯ 14 ಕೆರೆಗಳಲ್ಲಿ ನೀರಿಲ್ಲರೇವಣೆಪ್ಪ ಟಿ.ಆರ್. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.