ADVERTISEMENT

ರಾಣೆಬೆನ್ನೂರು | ಮಣ್ಣು ಮಾರಾಟ: ಹೊಂಡವಾಗುತ್ತಿರುವ ಕೃಷಿ ಭೂಮಿ

ಮುಕ್ತೇಶ ಕೂರಗುಂದಮಠ
Published 8 ಆಗಸ್ಟ್ 2024, 6:03 IST
Last Updated 8 ಆಗಸ್ಟ್ 2024, 6:03 IST
ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನಿನಲ್ಲಿ ಮಣ್ಣು ಅಗೆದಿದ್ದರಿಂದ, ಜಮೀನು ಹೊಂಡದಂತಾಗಿರುವುದು
ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನಿನಲ್ಲಿ ಮಣ್ಣು ಅಗೆದಿದ್ದರಿಂದ, ಜಮೀನು ಹೊಂಡದಂತಾಗಿರುವುದು   

ರಾಣೆಬೆನ್ನೂರು: ತುಂಗಭದ್ರಾ ಮತ್ತು ಕುಮದ್ವತಿ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನುಗಳ ಮಣ್ಣನ್ನು ಇಟ್ಟಿಗೆ ತಯಾರಿಕೆಗಾಗಿ ಕೆಲ ರೈತರು ಮಾರಾಟ ಮಾಡುತ್ತಿದ್ದು, ಇದರಿಂದಾಗಿ ಕೃಷಿ ಭೂಮಿಗಳು ಹೊಂಡಗಳಾಗಿ ಮಾರ್ಪಡುತ್ತಿವೆ.

ತಾಲ್ಲೂಕಿನ ಮಾಕನೂರು, ಮುದೇನೂರ, ಮಣಕೂರ, ನಾಗೇನಹಳ್ಳಿ, ಹೊಳೆ ಆನ್ವೇರಿ, ವಡೇರಾಯನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿಯನ್ನು ಅಗೆದು ಮಣ್ಣನ್ನು ಯಥೇಚ್ಛವಾಗಿ ಸಾಗಿಸಲಾಗುತ್ತಿದೆ.

ಇತ್ತೀಚೆಗೆ ತುಂಗಭದ್ರಾ ಹಾಗೂ ಕುಮದ್ವತಿ ನದಿಯ ನೀರು ಒಡಲು ಬಿಟ್ಟು ಅಚ್ಚುಕಟ್ಟು ಪ್ರದೇಶಕ್ಕೆ ವ್ಯಾಪಿಸಿತ್ತು. ಕೃಷಿ ಭೂಮಿಯಲ್ಲಿರುವ ಹೊಂಡಗಳಲ್ಲಿ ನೀರು ನಿಂತುಕೊಂಡಿತ್ತು. ಕೆಲ ಹೊಂಡಗಳಲ್ಲಿ ಮಾತ್ರ ನೀರು ಕಡಿಮೆಯಾಗಿದ್ದು, ಬಹುಪಾಲು ಹೊಂಡಗಳಲ್ಲಿ ಇಂದಿಗೂ ನೀರಿದೆ.

ADVERTISEMENT

ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಣ್ಣಿನಿಂದ ಇಟ್ಟಿಗೆಗಳನ್ನು ತಯಾರಿಸಲಾಗುತ್ತಿದ್ದು, ಇಂಥ ಇಟ್ಟಿಗೆಗಳಿಗೆ ಬೇಡಿಕೆ ಹೆಚ್ಚಿದೆ. ಇದೇ ಕಾರಣಕ್ಕೆ ಇಟ್ಟಿಗೆ ಭಟ್ಟಿ ನಡೆಸುವ ಜನರು, ಹರಿಹರ, ಐರಣಿ, ಹಿರೇಬಿದರಿ, ಕುಮಾರಪಟ್ಟಣ, ಕವಲೆತ್ತು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಣದ ಆಸೆ ತೋರಿಸಿ ಮಣ್ಣು ಖರೀದಿಸುತ್ತಿದ್ದಾರೆ.

ಕೃಷಿ ಚಟುವಟಿಕೆಗೆ ಫಲವತ್ತಾದ ಮೆಕ್ಕಲು ಮಣ್ಣನ್ನು ಮಾರಾಟ ಮಾಡಿದ ಪರಿಣಾಮ, ಸತತವಾಗಿ ಸುರಿಯುತ್ತಿರುವ ಮಳೆಯ ನೀರು ರೈತರ ಜಮೀನಿನಲ್ಲಿ 10ರಿಂದ 12 ಅಡಿಯಷ್ಟು ನಿಂತುಕೊಂಡಿದೆ. ಮಣ್ಣು ಮಾರಾಟ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಕೃಷಿ ಜಮೀನು ಸಂಪೂರ್ಣವಾಗಿ ಹೊಂಡವಾಗುವ ಆತಂಕವಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ.

ಟಿಪ್ಪರ್‌ಗಳ ಮೂಲಕ ಮಣ್ಣು ಸಾಗಣೆ ಮಾಡಲಾಗುತ್ತಿದ್ದು, ಇದರಿಂದಾಗಿ ರಸ್ತೆಗಳೂ ಹಾಳಾಗುತ್ತಿವೆ. ಕುಡಿಯುವ ನೀರಿನ ಪೈಪ್‌ಗಳು ಒಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದರು.

ಒಬ್ಬ ರೈತರು ತಮ್ಮ ಜಮೀನಿನ ಮಣ್ಣು ಮಾರಿದ್ದರಿಂದ, ಅಕ್ಕ–ಪಕ್ಕದ ಜಮೀನುಗಳ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

‘ನಮ್ಮ ಹೊಲದ ಪಕ್ಕದ ರೈತರು, ಮಣ್ಣು ಅಗೆಸಿ ಇಟ್ಟಿಗೆ ಭಟ್ಟಿಯವರಿಗೆ ಮಾರಾಟ ಮಾಡಿದ್ದಾರೆ. ಅವರ ಜಮೀನಿನಲ್ಲಿ ದೊಡ್ಡ ಹೊಂಡ ಬಿದ್ದಿದೆ. ಹೊಂಡದಲ್ಲಿ ಈಗ ನೀರು ನಿಂತುಕೊಂಡಿದೆ. ನಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದಂತಾಗಿದೆ’ ಎಂದು ರೈತರೊಬ್ಬರು ಹೇಳಿದರು.

‘ಅಕ್ರಮ ಮಣ್ಣು ಮಾರಾಟ ತಡೆಯಬೇಕೆಂದು ರೈತ ಸಂಘದ ಮುಖಂಡರು ಹಾಗೂ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ಇದುವರೆಗೂ ಮಣ್ಣು ಮಾರಾಟ ತಡೆದಿಲ್ಲ’ ಎಂದು ಹೊಳೆ ಆನ್ವೇರಿಯ ರೈತರು ಆರೋಪಿಸಿದರು.

‘ತುಂಗಭದ್ರಾ ನದಿ ತೀರದ ಪ್ರದೇಶದ ಕೆಲ ರೈತರು, ಸರ್ಕಾರದ ಪರವಾನಗಿ ಪಡೆಯದೇ ಮಣ್ಣು ಮಾರಾಟ ಮಾಡುತ್ತಿದ್ದಾರೆ. ಮಣ್ಣು ಸಾಗಣೆ ಮಾಡಿದ್ದರಿಂದ, ಫಲತ್ತಾದ ರೈತರ ಕೃಷಿ ಭೂಮಿ ಬರಡಾಗುವ ಭೀತಿಯೂ ಇದೆ’ ಎಂದರು.

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಣ್ಣು ಮಾರಾಟ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ಈ ಸಮಸ್ಯೆ ಬಗ್ಗೆ ಗಮನ ಹರಿಸಿ, ಅಕ್ರಮ ಮಣ್ಣು ಮಾರಾಟ ತಡೆಯಬೇಕು. ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು’ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಆಗ್ರಹಿಸಿದರು.

ಮಣ್ಣು ಮಾರಾಟದ ಬಗ್ಗೆ ಉಪತಹಶೀಲ್ದಾರ್‌ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಆರ್‌.ಎಚ್‌. ಭಾಗವಾನ, ರಾಣೆಬೆನ್ನೂರು ತಹಶೀಲ್ದಾರ್‌

‘ಹಣ ವಸೂಲಿಗಾಗಿ ಆರೋಪ’

‘ರಾಣೆಬೆನ್ನೂರು ಹಾಗೂ ಹರಿಹರ ತಾಲ್ಲೂಕಿನ ಹಲವರು ಇಟ್ಟಿಗೆ ಭಟ್ಟಿಗಳನ್ನು ನಡೆಸುತ್ತಿದ್ದಾರೆ. ಇದರಿಂದ ನೂರಾರು ಕಾರ್ಮಿಕರಿಗೆ ಕೆಲಸ ಸಿಕ್ಕಿದೆ. ಇಟ್ಟಿಗೆ ಭಟ್ಟಿಯವರಿಂದ ಹಣ ವಸೂಲಿ ಮಾಡಲು ಕೆಲವರು ಮಣ್ಣು ಮಾರಾಟದ ಆರೋಪ ಮಾಡುತ್ತಿದ್ದಾರೆ’ ಎಂದು ಇಟ್ಟಿಗೆ ಭಟ್ಟಿಯೊಂದರ ಸಿಬ್ಬಂದಿ ಹೇಳಿದರು. ‘ಸರ್ಕಾರ ಸೂಚಿಸುವ ನಿಯಮಗಳನ್ನು ಪಾಲಿಸಲು ಭಟ್ಟಿಯವರು ಸಿದ್ಧರಾಗಿದ್ದಾರೆ. ಸಂಘಟನೆ ಹೆಸರಿನಲ್ಲಿ ಕೆಲವರು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಟಿಪ್ಪರ್‌ಗಳನ್ನು ತಡೆದು ಬೆದರಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.