ADVERTISEMENT

ರಾಣೆಬೆನ್ನೂರು ನಗರಸಭೆ | ಹೈಕೋರ್ಟ್ ಮೆಟ್ಟಿಲೇರಿದ ಸದಸ್ಯ: ನಡೆಯದ ಚುನಾವಣೆ

ಅಧ್ಯಕ್ಷ– ಉಪಾಧ್ಯಕ್ಷರಿಲ್ಲದ ರಾಣೆಬೆನ್ನೂರು ನಗರಸಭೆ: ಕಚೇರಿಗೆ ಸಾರ್ವಜನಿಕರ ಅಲೆದಾಟ

ಮುಕ್ತೇಶ ಕೂರಗುಂದಮಠ
Published 29 ಅಕ್ಟೋಬರ್ 2024, 5:07 IST
Last Updated 29 ಅಕ್ಟೋಬರ್ 2024, 5:07 IST
<div class="paragraphs"><p>ರಾಣೆಬೆನ್ನೂರು ನಗರಸಭೆ ಆಡಳಿತ ಕಚೇರಿ</p></div>

ರಾಣೆಬೆನ್ನೂರು ನಗರಸಭೆ ಆಡಳಿತ ಕಚೇರಿ

   

ರಾಣೆಬೆನ್ನೂರು: ಇಲ್ಲಿಯ ನಗರಸಭೆಯ ಅಧ್ಯಕ್ಷ– ಉಪಾಧ್ಯಕ್ಷ ಮೀಸಲಾತಿ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿದೆ. 18 ತಿಂಗಳಿನಿಂದ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳು ಖಾಲಿ ಇದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಹಿನ್ನೆಡೆ ಉಂಟಾಗುತ್ತಿದೆ.

ನಗರಸಭೆ ಅಧಿಕಾರಿಗಳ ನಿರ್ಧಾರವೇ ಅಂತಿಮವಾಗುತ್ತಿದ್ದು, ಜನಪರವಾಗಿ ನಿರ್ಧಾರ ತೆಗೆದುಕೊಳ್ಳುವ ಅಧ್ಯಕ್ಷ–ಉಪಾಧ್ಯಕ್ಷರ ಕೊರತೆ ಎದ್ದು ಕಾಣುತ್ತಿದೆ.

ADVERTISEMENT

ನಗರಸಭೆಯ ಮೊದಲ ಅವಧಿಯಲ್ಲಿ ಅಧ್ಯಕ್ಷ (ಹಿಂದುಳಿದ ಅ ವರ್ಗ) ಹಾಗೂ ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಆಡಳಿತ ನಡೆಸಿದ್ದರು. ಮೊದಲ ಅವಧಿ 2023ರ ಏಪ್ರಿಲ್‌ 30ರಂದು ಅಂತ್ಯಗೊಂಡಿತ್ತು. ವಿವಿಧ ಕಾರಣಗಳಿಂದ ಎರಡನೇ ಅವಧಿಯ ಮೀಸಲಾತಿ ಘೋಷಣೆ ವಿಳಂಬವಾಗಿತ್ತು.

ಹಲವು ತಿಂಗಳುಗಳ ನಂತರ, ಎರಡನೇ ಅವಧಿಗೆ 2024ರ ಆಗಸ್ಟ್ 5ರಂದು ಮೀಸಲಾತಿ ಪ್ರಕಟಿಸಲಾಗಿದೆ.‌ ಅಧ್ಯಕ್ಷ ಸ್ಥಾನಕ್ಕೆ ‘ಹಿಂದುಳಿದ ವರ್ಗ–ಅ’ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಎಂದು ಘೋಷಣೆಯಾಗಿದೆ. ಚುನಾವಣೆ ಪ್ರಕ್ರಿಯೆ ನಡೆಸಲು ಉಪವಿಭಾಗಾಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಮೀಸಲಾತಿ ಪುನರಾವರ್ತನೆ ಆಗಿರುವುದಾಗಿ ಆರೋಪಿಸುತ್ತಿರುವ ಕೆಲ ಸದಸ್ಯರು, ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ, ಚುನಾವಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ಮೊದಲ ಅವಧಿಯ ಮೀಸಲಾತಿಯೇ ಎರಡನೇ ಅವಧಿಗೂ ಪುನರಾವರ್ತನೆಗೊಂಡಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದೆ.
ಶಶಿಧರ ಬಸೆನಾಯಕ, ನಗರಸಭೆ ಸದಸ್ಯ

‘ಎರಡನೇ ಅವಧಿಗೆ ಮೀಸಲಾತಿ ಪ್ರಕಟಿಸಿದ್ದನ್ನು ಬದಲಾವಣೆ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ನಗರಸಭೆ ಸದಸ್ಯ ಶಶಿಧರ ಬಸೆನಾಯಕ ಅವರು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ.

ನಗರಸಭೆ ಕಚೇರಿಗೆ ಸಾರ್ವಜನಿಕರ ಅಲೆದಾಟ: ‘ಸದಸ್ಯರಿಗೆ ಅಧಿಕಾರ ಇಲ್ಲದ ಕಾರಣ, ನಗರದಲ್ಲಿರುವ ಮೂಲ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರೆಯುತ್ತಿಲ್ಲ. ನಗರಸಭೆಯಲ್ಲಿ ವಿವಿಧ ಸೇವೆ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಕೆಲಸಗಳಿಗೆ ಜನತೆಯನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದರು. 

‘ಕೆಲ ದಿನಗಳ ಹಿಂದೆಯಷ್ಟೇ ಜೋರು ಮಳೆಯಿಂದಾಗಿ ನೆಹರು ಮಾರುಕಟ್ಟೆಯ ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಆಗಿತ್ತು. ಈ ಬಗ್ಗೆ ಅಧಿಕಾರಿಗಳು ಅಳಲು ಕೇಳಲಿಲ್ಲ. ಪರಿಹಾರ ನೀಡಲು ಸಹ ಕ್ರಮ ಕೈಗೊಂಡಿಲ್ಲ’ ಎಂದು ವ್ಯಾಪಾರಸ್ಥರು ದೂರಿದರು.

‘ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ, ನಿವೇಶನಗಳಿಗೆ ಇ- ಸ್ವತ್ತು, ಕಂಪ್ಯೂಟರ್‌ ಉತಾರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿರುವ ಆರೋಪವಿದೆ. ನಿವೇಶನದ ಇ -ಸ್ವತ್ತು ಪಡೆಯಲು ವರ್ಷಗಟ್ಟಲೇ ಕಚೇರಿಗೆ ಅಲೆದಾಡಿಸುವ ಅಧಿಕಾರಿಗಳಿದ್ದಾರೆ’ ಎಂದು ಜನರು ಆರೋಪಿಸಿದರು.

ನಡೆಯದ ತುರ್ತು ಕಾಮಗಾರಿಗಳು:

ನಗರದಲ್ಲಿ ಚರಂಡಿ, ಬೀದಿ ದೀಪ, ನೀರಿನ ಸೋರಿಕೆ ಹಾಗೂ ಇತರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ.  ಎಂ.ಜಿ.ರಸ್ತೆ, ದುರ್ಗಾ ವೃತ್ತ, ನೆಹರು ಮಾರುಕಟ್ಟೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದನ್ನು ತಡೆಯಲು ನಗರಸಭೆ ಸಿಬ್ಬಂದಿ ಸ್ಪಂದಿಸುತ್ತಿಲ್ಲವೆಂದು ಜನರು ದೂರಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇತೃತ್ವದಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ, ಹೊಸ ಯೋಜನೆಗಳಿಗೆ ಅನುಮೋದನೆ ಸಿಗುತ್ತಿಲ್ಲ. ಬುತೇಕ ಕೆಲಸಗಳು, ಸದಸ್ಯರ ಗಮನಕ್ಕೆ ಬಾರದಂತೆ ನಡೆಯುತ್ತಿರುವ ಆರೋಪಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.