ADVERTISEMENT

ಹಾವೇರಿ: 12 ವರ್ಷದ ಬಾಲಕನಿಗೆ ಇಲಿ ಜ್ವರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 10:44 IST
Last Updated 7 ಜುಲೈ 2024, 10:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾವೇರಿ: ಇಲ್ಲಿಯ 12 ವರ್ಷದ ಬಾಲಕ ಇಲಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಾಲ್ಲೂಕಿನ ಗ್ರಾಮವೊಂದರಲ್ಲಿ ವಾಸವಿದ್ದ ಬಾಲಕನಿಗೆ ಪದೇ ಪದೇ ಜ್ವರ ಬರುತ್ತಿತ್ತು. 15 ದಿನಗಳ ಹಿಂದೆಯಷ್ಟೇ ಜಿಲ್ಲಾಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆದುಕೊಂಡು, ವಾಪಸು ಊರಿಗೆ ಹೋಗಿದ್ದ. ಈತನ ವೈದ್ಯಕೀಯ ಪರೀಕ್ಷೆ ವರದಿ ಶುಕ್ರವಾರ (ಜುಲೈ 5) ವೈದ್ಯರ ಕೈ ಸೇರಿತ್ತು. ಹೀಗಾಗಿ, ಭಾನುವಾರ ಬಾಲಕನನ್ನು ಪುನಃ ಜಿಲ್ಲಾಸ್ಪತ್ರೆಗೆ ಕರೆಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ADVERTISEMENT

‘ಇಲಿಯ ಮೂತ್ರದಲ್ಲಿರುವ ಅಂಶದಿಂದ ಈ ಜ್ವರ ಬರುತ್ತದೆ. ಬಾಲಕನಿಗೆ ಇಲಿ ಜ್ವರವಿರುವುದು ದೃಢಪಟ್ಟಿದೆ. ಬಾಲಕನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಆರೋಗ್ಯ ಸುಧಾರಿಸುತ್ತಿದೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ. ಆರ್. ಹಾವನೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಿ ಜ್ವರ ಪ್ರಕರಣಗಳು ಪದೇ ಪದೇ ಕಂಡುಬರುತ್ತದೆ. ಇದಕ್ಕೆ ಪೂರ್ಣಪ್ರಮಾಣದಲ್ಲಿ ಚಿಕಿತ್ಸೆ ಲಭ್ಯವಿದೆ. ಇದುವರೆಗಿನ ಪ್ರಕರಣಗಳಲ್ಲಿ ಎಲ್ಲರೂ ಗುಣಮುಖರಾಗಿದ್ದಾರೆ’ ಎಂದರು.

ಬಾಲಕನ ತಾಯಿ, ‘ಮಗನಿಗೆ ಇಲಿ ಜ್ವರವಿರುವುದು ನಿನ್ನೆಯಷ್ಟೇ (ಶನಿವಾರ) ಗೊತ್ತಾಗಿದೆ. ವೈದ್ಯರು ಹೇಳಿದ್ದರಿಂದ ಆಸ್ಪತ್ರೆಗೆ ಮಗನನ್ನು ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದೇವೆ’ ಎಂದರು.

ಇಲಿ ಜ್ವರ ಬಗ್ಗೆ ಮಾಹಿತಿ ನೀಡಿದ ವೈದ್ಯೆ ಡಾ. ಭಾಗ್ಯ, ‘ಸಾಮಾನ್ಯ ಜ್ವರದ ರೀತಿಯಲ್ಲಿ ಆರಂಭದಲ್ಲಿ ಸುಸ್ತು, ಮೈ ಕೈ ನೋವು ಇರುತ್ತದೆ. ಈ ಜ್ವರ ಬಿಟ್ಟು ಬಿಟ್ಟು ಬರುತ್ತದೆ. ಮೈ ಕೈ ನೋವು, ವಾಂತಿ ಹಾಗೂ ಜಾಂಡೀಸ್ ಇರುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆಯೂ ಇದೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.