ರಟ್ಟೀಹಳ್ಳಿ: ರಟ್ಟೀಹಳ್ಳಿ ಪಟ್ಟಣ, ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆರಿ, ತಾಲ್ಲೂಕು ಕೇಂದ್ರವಾಗಿ, ಹಲವಾರು ವರ್ಷಗಳು ಸಂದಿವೆ. 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.
ಪಟ್ಟಣದ ಹೊಳಿಸಾಲು ದುರ್ಗಾದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಪಟ್ಟಣದಿಂದ ಸುಮಾರು 1.50 ಕಿ.ಮೀ. ದೂರದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ಮಶಾನ ಸ್ಥಳ ಕಳೆದ ಹಲವಾರು ವರ್ಷಗಳಿಂದ ಮೂಲ ಸೌಲಭ್ಯವಿಲ್ಲದೆ ಅಸ್ತವ್ಯಸ್ತಗೊಂಡಿದೆ. ಮೃತರ ಶವಸಂಸ್ಕಾರಕ್ಕೆ ಬರುವ ಸಂಬಂಧಿಕರು, ಬಂಧುಗಳು, ಸ್ಥಳೀಯ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಮುಳ್ಳು -ಗಿಡ, ಗಂಟೆಗಳನ್ನು ದಾಟಿ ಮೃತರ ದಹನ ಕ್ರಿಯೆಗೆ ಹೋಗಬೇಕು. ಮಾರ್ಗದುದ್ದಕ್ಕೂ ಸರಿಯಾದ ಬೀದಿದೀಪಗಳ ವ್ಯವಸ್ಥೆಯಿಲ್ಲ. ರಾತ್ರಿ ವೇಳೆಯಲ್ಲಿ ವಿಷಜಂತು, ಕಾಡುಪ್ರಾಣಿಗಳ ಹಾವಳಿ, ಇರುವುದು ಒಂದೇ ಸ್ಮಶಾನ ಕಟ್ಟೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಶವ ದಹನ ಮಾಡಬೇಕಾದ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿಯೇ ಶವ ಸಂಸ್ಕಾರ ಮಾಡಲಾಗುತ್ತಿದೆ. ಸ್ಮಶಾನ ಕಟ್ಟೆಯ ಚಾವಣಿ ಹಾಳಾಗಿದ್ದು, ಮಳೆಗಾಲದಲ್ಲಿ ಮಳೆನೀರಿನಲ್ಲಿಯೇ ಶವ ನೆನೆಯುವಂತಾಗುತ್ತದೆ.
ಸ್ಮಶಾನಕ್ಕೆ ತಡೆಗೋಡೆ ಇಲ್ಲದೆ ಹೊಳಿಸಾಲ ದುರ್ಗಾದೇವಿ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಇರುಸು -ಮುರುಸು ಉಂಟಾಗುತ್ತದೆ. ಅಲ್ಲಲ್ಲಿ ಮುರಿದು ಬಿದ್ದ ಬೊಂಬುಗಳು, ಅರ್ಧಕ್ಕೆ ಸುಟ್ಟ ಕಟ್ಟಿಗೆಗಳು, ಶವಸಂಸ್ಕಾರಕ್ಕೆ ಎಲ್ಲಂದರಲ್ಲಿ ಎಸೆದ ಹೂವು, ಚಟ್ಟ, ಪ್ಲಾಸ್ಟಿಕ್ ವಸ್ತುಗಳ ರಾಶಿ ಕೊಳೆತ ಸ್ಥಿತಿಯಲ್ಲಿಯೇ ಇದ್ದು, ವಾತಾವರಣವನ್ನು ಇನ್ನಷ್ಟು ಹಾಳುಗೆಡವುತ್ತದೆ.
ಶವಸಂಸ್ಕಾರಕ್ಕೆ ಬಂದ ಜನರಿಗೆ ಯಾವುದೇ ನೀರಿನ ಸೌಲಭ್ಯವಾಗಲಿ, ಮಳೆಯಿಂದ ಸಂರಕ್ಷಣೆ ಪಡೆಯಲು ಕೊಠಡಿಗಳಾಗಲಿ ಇರುವುದಿಲ್ಲ. ಉಪ್ಪಾರ, ಕುರುಬ ಬ್ರಾಹ್ಮಣ, ತಳವಾರ, ಎಸ್.ಸಿ. ಎಸ್.ಟಿ. ಸೇರಿದಂತೆ ಹಲವಾರ ಬಹುಸಂಖ್ಯಾತ ಸಮುದಾಯ ಇಲ್ಲಿ ಶವದ ದಹನ ಕ್ರಿಯೆ ನಡೆಸುತ್ತಾರೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ ಇನ್ನೂ ಮುಂದಾದರೂ ಸ್ಮಶಾನ ಅಭಿವೃದ್ಧಿಪಡಿಸುವತ್ತ ಅಧಿಕಾರಿಗಳು ಇಚ್ಚಾಶಕ್ತಿ ಹೊಂದಿ ಕಾರ್ಯಪ್ರವೃತ್ತರಾಗಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿ ಕೃಷ್ಣರಾಜ ವೇರ್ಣೇಕರ.
ಸ್ಮಶಾನ ಸ್ಥಳವನ್ನು ಸುಂದರವಾಗಿಟ್ಟು ಕೊಳ್ಳುವುದು, ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸುವುದು ಪಟ್ಟಣ ಪಂಚಾಯ್ತಿಯ ಪ್ರಮುಖ ಕರ್ತವ್ಯ. ಅದನ್ನು ಅಧಿಕಾರಿಗಳು ಸರಿಯಾಗಿ ನಿಭಾಯಿಸಬೇಕು ಶಿವಕುಮಾರ ಉಪ್ಪಾರ ಹೇಳುತ್ತಾರೆ.
ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿ 15ನೇ ಹಣಕಾಸು ಯೋಜನೆಯಡಿ ಹಾಗೂ ಶಾಸಕರ ಅನುದಾನದಡಿ ಒಟ್ಟು ಸರ್ಕಾರದಿಂದ ₹23 ಲಕ್ಷ ಹೊಳಿಸಾಲ ಸ್ಮಶಾನ ಅಭಿವೃದ್ಧಿಗೆ ಹಣ ಮಂಜೂರಾಗಿದ್ದು ಶೀಘ್ರದಲ್ಲಿಯೇ ಸ್ಮಶಾನ ಭೂಮಿ ಅಭಿವೃಧ್ದಿ ಪಡಿಸಲಾಗುವುದು–ಸಂತೋಷ ಚಂದ್ರಿಕೇರ ಪಟ್ಟಣ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.