ADVERTISEMENT

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಸವಾರಿ!

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಿದ್ದಾರೆ ಕನ್ನಡ ಪ್ರೇಮಿ ಈರಣ್ಣ ಕುಂದರಗಿಮಠ

ಶಂಕರ ಕೊಪ್ಪದ
Published 30 ಡಿಸೆಂಬರ್ 2022, 19:30 IST
Last Updated 30 ಡಿಸೆಂಬರ್ 2022, 19:30 IST
ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಗಳನ್ನು ಕೈಗಳಲ್ಲಿ ಹಿಡಿದು, ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಈರಣ್ಣ ಕುಂದರಗಿಮಠ
ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಗಳನ್ನು ಕೈಗಳಲ್ಲಿ ಹಿಡಿದು, ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಈರಣ್ಣ ಕುಂದರಗಿಮಠ   

ಹಾವೇರಿ: ಏಲಕ್ಕಿ ಕಂಪಿನ ನಾಡಿನಲ್ಲಿ ಜ.6ರಿಂದ 8ರವರೆಗೆ ನಡೆಯುತ್ತಿರುವ ನುಡಿಜಾತ್ರೆಗಾಗಿ ಬಾಗಲಕೋಟೆಯಿಂದ ಹಾವೇರಿಗೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಬರಲು ಅಣಿಯಾಗಿದ್ದಾರೆಅಪ್ಪಟ ಕನ್ನಡ ಪ್ರೇಮಿ, ಬೈಕ್‌ ಸಾಹಸಿ ಈರಣ್ಣ ಜಿ.ಕುಂದರಗಿಮಠ.

ಒಂದು ಕೈಯಲ್ಲಿ ‘ಬಳಸಬೇಕು ಕನ್ನಡ, ಉಳಿಸಬೇಕು ಕನ್ನಡ, ಬೆಳೆಸಬೇಕು ಕನ್ನಡ’ ಎಂಬ ನಾಮಫಲಕ ಮತ್ತೊಂದು ಕೈಯಲ್ಲಿ ಕನ್ನಡ ಧ್ವಜ ಹಿಡಿದು, ಕಾಲಿನಲ್ಲೇ ಬೈಕನ್ನು ಬ್ಯಾಲೆನ್ಸ್‌ ಮಾಡುತ್ತಾ ಬರೋಬ್ಬರಿ 360 ಕಿ.ಮೀ. ದೂರವನ್ನು 10 ತಾಸಿನಲ್ಲಿ ಕ್ರಮಿಸಲು ಸಿದ್ಧತೆ ನಡೆಸಿದ್ದಾರೆ.

ಜನವರಿ 3ರಂದು ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಹ್ಯಾಂಡಲ್‌ ಇಲ್ಲದ ಬೈಕ್‌ ಸವಾರಿಗೆ ಚಾಲನೆ ನೀಡಲಿದ್ದಾರೆ.ಬಾಗಲಕೋಟ ನಗರದಿಂದ ಶಿರೂರ, ಅಮೀನಗಡ, ಹುನಗುಂದ, ಇಳಕಲ್‌, ಕುಷ್ಟಗಿ, ಗಜೇಂದ್ರಗಡ, ನರೇಗಲ್, ಬೆಟಗೇರಿ, ಗದಗ, ಹುಲಕೋಟಿ, ಹುಬ್ಬಳ್ಳಿ ಚನ್ನಮ್ಮ ಸರ್ಕಲ್, ಬಂಕಾಪೂರ ಚೌಕ್, ಗಬ್ಬೂರು ಬೈಪಾಸ್‌, ರಾಷ್ಟ್ರೀಯ ಹೆದ್ದಾರಿ–48ರ ಮೂಲಕ ಶಿಗ್ಗಾವಿ ಮಾರ್ಗವಾಗಿ ಹಾವೇರಿ ತಲುಪಲಿದ್ದಾರೆ.

ADVERTISEMENT

ಹಾವೇರಿಯ ಆರ್.ಟಿ.ಒ ಕಚೇರಿ ಮುಖಾಂತರ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳದವರೆಗೆ ವಿಶೇಷ ಬೈಕ್ ಸಾಹಸ ಕ್ರೀಡೆಯೊಂದಿಗೆ ಹ್ಯಾಂಡಲ್ ಇಲ್ಲದ ಬೈಕ್‌ ಅನ್ನು ಓಡಿಸಿಕೊಂಡು ನಾಡು– ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.

ಕಳೆದ 15 ವರ್ಷಗಳಿಂದ ಬೈಕ್‌ ಮತ್ತು ಕಾರಿನ ಸಾಹಸ ಕ್ರೀಡೆಯಲ್ಲಿತೊಡಗಿಕೊಂಡಿದ್ದು, ಹಲವಾರು ದಾಖಲೆ ಮಾಡಿದ್ದಾರೆ. ಎರಡು ಬಾರಿ ‘ಲಿಮ್ಕಾ ದಾಖಲೆ’ ಹಾಗೂ ಇಂಡಿಯಾದ ‘ಬುಕ್ ಆಫ್ ರೆಕಾರ್ಡ್‌’ನಲ್ಲಿ ಇವರ ಸಾಧನೆ ದಾಖಲಾಗಿದೆ. ಇವರ ಸಾಹಸ ಕ್ರೀಡೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮುಡಿಗೇರಿವೆ.

ಬೈಕ್ ಮೇಲೆ ದಾರ್ಶನಿಕರ ಚಿತ್ರ

ಬೈಕ್‌ಗೆ ನಾಡದೇವಿ ಭುವನೇಶ್ವರಿ ದೇವಿ ಭಾವಚಿತ್ರವನ್ನು ಅಳವಡಿಸಿದ್ದಾರೆ. ಅಲ್ಲದೆ, ಬಾಳೆಹೊನ್ನೂರು ರಂಭಾಪುರಿ ಪೀಠದ ಶಿವಸ್ವರೂಪಿ ವೀರಗಂಗಾಧರ ಜಗದ್ಗುರುಗಳ ಭಾವಚಿತ್ರ, ಇಳಕಲ್ಲಿನ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಭಾವಚಿತ್ರ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ಭಾವಚಿತ್ರ ಹಾಗೂ ತುಮಕೂರು ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ, ಗದುಗಿನ ಡಾ.ಪಂ.ಪುಟ್ಟರಾಜ ಗವಾಯಿಗಳ ಭಾವಚಿತ್ರವನ್ನು ಅಳವಡಿಸಿದ್ದಾರೆ.

‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಹಾಗೂ ಡಾ.ಪುನೀತ್ ರಾಜಕುಮಾರ್‌ ಅವರ ಭಾವಚಿತ್ರವನ್ನು ಅಂಟಿಸಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್‌ ಇಲ್ಲದ ಬೈಕ್‌ ಮೇಲೆ ಬರುತ್ತಿದ್ದೇನೆ. ಎಷ್ಟೇ ಟ್ರಾಫಿಕ್‌ ಇದ್ದರೂ, ಲೀಲಾಜಾಲವಾಗಿ ಬೈಕ್‌ ಬ್ಯಾಲೆನ್ಸ್‌ ಮಾಡುವ ಕಲೆ ರೂಢಿಸಿಕೊಂಡಿದ್ದೇನೆ. ಕನ್ನಡ ನಾಡು–ನುಡಿಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬುದುಈರಣ್ಣ ಜಿ. ಕುಂದರಗಿಮಠ ಅವರ ಮನದಾಳದ ಮಾತು.

ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ 2500 ಕಿ.ಮೀ. ಸವಾರಿ!

ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದ ನಿವಾಸಿಯಾದ ಕುಂದರಗಿಮಠ ಅವರು ಮೂಲತಃ ಕೃಷಿ ಕುಟುಂಬದವರು. ಪಿಯುಸಿವರೆಗೆ ಓದಿದ್ದಾರೆ. 15ನೇ ವಯಸ್ಸಿನಲ್ಲೇ ಕಾರು ಮತ್ತು ಬೈಕ್‌ ಓಡಿಸುವ ಹವ್ಯಾಸ ರೂಢಿಸಿಕೊಂಡು, ಅದರಲ್ಲೇ ಸಾಹಸ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. 2008ರಲ್ಲಿ ಬಾಗಲಕೋಟೆಯಿಂದ ಬೆಂಗಳೂರುವರೆಗೆ ಎರಡು ಕೈಗಳನ್ನು ಬಿಟ್ಟು, 500 ಕಿ.ಮೀ. ಬೈಕ್‌ ಓಡಿಸಿ ಸಾಹಸ ಮೆರೆದಿದ್ದಾರೆ. 2009ರಲ್ಲಿ ಬೆಂಗಳೂರಿನಿಂದ ದೆಹಲಿವರೆಗೆ 2500 ಕಿ.ಮೀ. ಅನ್ನು 5 ದಿನಗಳಲ್ಲಿ ತಲುಪಿದ ದಾಖಲೆ ಇವರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.