ಬ್ಯಾಡಗಿ (ಹಾವೇರಿ ಜಿಲ್ಲೆ): ತಾಲ್ಲೂಕಿನ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ರಸ್ತೆ ದುರಸ್ತಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರೋಡ್ ರೋಲರ್ ಮೈ ಮೇಲೆ ಹರಿದು ಇಬ್ಬರು ಕಾರ್ಮಿಕರು ಶನಿವಾರ ಮೃತಪಟ್ಟಿದ್ದಾರೆ.
‘ತಾಲ್ಲೂಕಿನ ಅಳಲಗೇರಿ ಗ್ರಾಮದ ಸಿದ್ದು ಕಿಳ್ಳಿಕ್ಯಾತರ (24) ಮತ್ತು ಪ್ರೀತಮ ಕಿಳ್ಳಿಕ್ಯಾತರ (24) ಮೃತರು. ಅವಘಡ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಬ್ಯಾಡಗಿ ಪೊಲೀಸರು ಹೇಳಿದರು.
‘ಒಂದೇ ಗ್ರಾಮದ ನಿವಾಸಿಗಳಾಗಿದ್ದ ಸಿದ್ದು ಹಾಗೂ ಪ್ರೀತಮ, ಸೋದರ ಸಂಬಂಧಿಕರು. ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆಡೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರಿಬ್ಬರು ಸಮೇತ ಹಲವು ಕಾರ್ಮಿಕರನ್ನು ರಾಷ್ಟ್ರೀಯ ಹೆದ್ದಾರಿ ದುರಸ್ತೆ ಕೆಲಸಕ್ಕೆ ಕರೆತರಲಾಗಿತ್ತು.’
‘ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಇದೇ ಸಂದರ್ಭದಲ್ಲಿ ಚಾಲಕ, ರೋಡ್ ರೋಲರ್ ಅಡ್ಡಾದಿಡ್ಡಿಯಾಗಿ ನಿರ್ಲಕ್ಷ್ಯದಿಂದ ಚಲಾಯಿಸಿದ್ದ. ಇದರಿಂದಾಗಿ ಸಿದ್ದು ಹಾಗೂ ಪ್ರೀತಮ್ ಅವರಿಗೆ ಡಿಕ್ಕಿ ಹೊಡೆದಿದ್ದ. ರೋಡ್ ರೋಲರ್‌ನ ಚಕ್ರ, ಅವರಿಬ್ಬರ ಮೈ ಮೇಲೆ ಹರಿದಿತ್ತು. ತೀವ್ರ ರಕ್ತಸ್ರಾವದಿಂದ ಅವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ: ಇಬ್ಬರೂ ಕಾರ್ಮಿಕರ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.