ಕುಮಾರಪಟ್ಟಣ: ‘ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು’ ಎಂದೇ ಗುರುತಿಸಿಕೊಂಡಿರುವ ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ವಾಲ್ಮೀಕಿ ಪುತ್ಥಳಿಗೆ ಉದ್ಘಾಟನಾ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಮೂರು ವರ್ಷ ಕಳೆದರೂ ರಸ್ತೆ ಕಾಮಗಾರಿ ಮುಗಿಯುತ್ತಿಲ್ಲ.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಕುಮಾರಪಟ್ಟಣ ಹಾಗೂ ಹರಿಹರ ತುಂಗಭದ್ರಾ ನದಿ ಸೇತುವೆ ನಡುವಿನ 13.40 ಮೀಟರ್ ಉದ್ದದ ಬೀರೂರು-ಸಮ್ಮಸಗಿ (ಹಳೇ ಪಿ.ಬಿ.ರಸ್ತೆ) ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪ್ರಾರಂಭವಾಗಿತ್ತು. ಕಿರಿದಾಗಿದ್ದ ರಾಜ್ಯ ಹೆದ್ದಾರಿ ವಿಸ್ತರಣೆಗೆ ಅಂದಿನ ಶಾಸಕ ಅರುಣಕುಮಾರ ಪೂಜಾರ ಮುಂದಾದರು.
ಸುಮಾರು ₹14 ಕೋಟಿ ವೆಚ್ಚದ ಯೋಜನೆಯಾಗಿದ್ದು, ಎರಡು (4.50 ಮೀ. ಮತ್ತು 8.90 ಮೀ. ಉದ್ದ) ಹಂತಗಳಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಲಾಯಿತು. ಅರುಣಕುಮಾರ ಪೂಜಾರ ಅವರ ಒತ್ತಾಸೆಯಂತೆ 2020ರಲ್ಲಿ ಅಂದಿನ ಗೃಹ ಸಚಿವ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದ್ದರು.
ಸಂಚಾರಕ್ಕೆ ಅಡಚಣೆ: ವಾಲ್ಮೀಕಿ ವೃತ್ತದ ರಾಜನಹಳ್ಳಿ ರಸ್ತೆ ತಿರುವಿನಲ್ಲಿ ಹಣ್ಣು, ತರಕಾರಿ, ಮೀನು ಮಾರಾಟ ಮಾಡುತ್ತಿದ್ದು, ಬೈಕ್ ಸವಾರರು ಬೇಕಾ ಬಿಟ್ಟಿಯಾಗಿ ರಸ್ತೆಗೆ ನಿಲ್ಲಿಸುತ್ತಾರೆ. ಇದರಿಂದ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಲಿದೆ. ಮೀನು ಮಾರಾಟ ಮಾಡುವವರಿಗೆ ಸೂಕ್ತ ಜಾಗದ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಎನ್ನುತ್ತಾರೆ ಸ್ಥಳೀಯರು.
ಈಡೇರದ ಆಟೊ ಚಾಲಕರ ಬೇಡಿಕೆ: ವಾಲ್ಮೀಕಿ ವೃತ್ತದಲ್ಲಿ ಆಟೊ ರಿಕ್ಷಾಗಳನ್ನು ನಿಲ್ಲಿಸಲು ಯಾವುದೇ ನಿಗದಿತ ಆಟೊ ನಿಲ್ದಾಣವಿಲ್ಲ. ಒಂದೆಡೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಚಾರ ದಟ್ಟಣೆಯಿಂದಾಗಿ ಆಟೊಗಳನ್ನು ನಿಲುಗಡೆ ಮಾಡಲು ಚಾಲಕರು ಪರಿತಪಿಸುವಂತಾಗಿದೆ. ವೃತ್ತದ ಆಸು ಪಾಸಿನಲ್ಲಿ ಆಟೊ ನಿಲ್ಲಿಸದಂತೆ ಪೊಲೀಸರು ತಾಕೀತು ಮಾಡಿದರೆ, ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಕಿರಿಕಿರಿ ಉಂಟಾಗಲಿದೆ ಎನ್ನುತ್ತಾರೆ ಮಾಲೀಕರು.
‘200ಕ್ಕೂ ಹೆಚ್ಚು ಕುಟುಂಬಗಳು ಆಟೊ ದುಡಿಮೆಯಿಂದ ಉಸಿರಾಡುತ್ತಿವೆ. ಆಟೊ ನಿಲ್ದಾಣ ನಿರ್ಮಿಸಿ ಕೊಡುವಂತೆ ಜನಪ್ರತಿನಿಧಿಗಳ ಮುಂದೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾಲ್ಮೀಕಿ ವೃತ್ತದ ಒಂದು ಮೂಲೆಯಲ್ಲಿ ನಿಲ್ದಾಣ ನಿರ್ಮಿಸಿ ಕೊಡಿ’ ಎಂಬುದು ಆಟೊ ಚಾಲಕರ ಮನವಿ.
ಗೂಡಂಗಡಿ ವ್ಯಾಪಾರಿಗಳಿಗೆ ಕುತ್ತು: ವಾಲ್ಮೀಕಿ ವೃತ್ತ ನಿರ್ಮಾಣಗೊಳ್ಳುವ ಪೂರ್ವದಲ್ಲಿ 30ಕ್ಕೂ ಹೆಚ್ಚು ಗೂಡಂಗಡಿ ವ್ಯಾಪಾರಿಗಳ ಬದುಕಿಗೆ ಆಸರೆಯಾಗಿತ್ತು. ವೃತ್ತ ನಿರ್ಮಾಣವಾದ ಬಳಿಕ ಜಾಗ ಇಲ್ಲದಂತಾಗಿದೆ. 30-40 ವರ್ಷಗಳಿಂದ ದುಡಿಮೆಗಾಗಿ ಇದೇ ಜಾಗವನ್ನು ನೆಚ್ಚಿಕೊಂಡಿದ್ದ ಚಿಲ್ಲರೆ ವ್ಯಾಪಾರಿಗಳ ಬದುಕು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ ಎನ್ನುತ್ತಾರೆ ವ್ಯಾಪಾರಿಗಳು.
‘ಗ್ರಾಮ ಪಂಚಾಯ್ತಿ ಹಾಗೂ ಜನಪ್ರತಿನಿಧಿಗಳು ನೀಡಿದ್ದ ಜಾಗದ ಭರವಸೆ ಹುಸಿಯಾಗಿದೆ. ಗ್ರಾಮ ಪಂಚಾಯ್ತಿ ಅನುಮತಿ ಮೇರೆಗೆ ತಾತ್ಕಾಲಿಕವಾಗಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಾಗ ಮತ್ತು ಕಸ ಸಂಗ್ರಹಣೆಗಾಗಿ ಪ್ರತ್ಯೇಕವಾಗಿ ಜಕಾತಿ ಕಟ್ಟುತ್ತಿದ್ದೇವೆ. ಮೊದಲಿನಂತೆ ವ್ಯಾಪಾರ ಆಗುತ್ತಿಲ್ಲ, ಅತಂತ್ರ ಪರಿಸ್ಥಿತಿಯಲ್ಲಿದ್ದೇವೆ. ದುಡಿಮೆಯನ್ನೇ ನಂಬಿರುವ ನಮ್ಮ ಕುಟುಂಬಗಳು ಬೀದಿಗೆ ಬರಲಿವೆ. ವಾಲ್ಮೀಕಿ ವೃತ್ತದ ಯಾವುದಾದರೂ ಮೂಲೆ ಇಲ್ಲವೇ ರಸ್ತೆ ಪಕ್ಕದ ಫುಟ್‌ಪಾತ್ ಜಾಗದಲ್ಲಿ ನಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಿ’ ಎಂದು ಗೂಡಂಗಡಿ ವ್ಯಾಪಾರಿಗಳು ಮೊರೆಯಿಡುತ್ತಾರೆ.
ವಾಲ್ಮೀಕಿ ವೃತ್ತದಿಂದ ತುಂಗಭದ್ರಾ ನದಿ ಸೇತುವೆವರೆಗೂ ರಸ್ತೆ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇನ್ನಾದರೂ ವಿಳಂಬ ಮಾಡದೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಸುಗಮಗೊಳಿಸಿಜಿ.ಜೆ.ಮೆಹೆಂದಳೆ ಸ್ಥಳೀಯ ನಿವಾಸಿ
ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಶೀಘ್ರವೇ ₹1 ಕೋಟಿ ವೆಚ್ಚದಲ್ಲಿ ರಸ್ತೆಯುದ್ದಕ್ಕೂ 65ಕ್ಕೂ ಹೆಚ್ಚು ಸೋಲಾರ್ ದೀಪದ ಕಂಬಗಳನ್ನು ಡಿವೈಡರ್ ಮಧ್ಯದಲ್ಲಿ ಅಳವಡಿಸಲಾಗುವುದುಎಸ್.ರವಿ ಗುತ್ತಿಗೆದಾರ
ಫೆಬ್ರುವರಿಯಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣ! ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಕುಮಾರಪಟ್ಟಣ (ಚೆಕ್‌ಪೋಸ್ಟ್)ದಲ್ಲಿ ತ್ರಿಕೋನ ಮಾದರಿಯಲ್ಲಿ ವಿಶಾಲವಾಗಿ ವಾಲ್ಮೀಕಿ ವೃತ್ತ ನಿರ್ಮಿಸಲಾಗಿದೆ. ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಅಂದಾಜು 7.5 ಅಡಿ ಎತ್ತರದ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈಗಾಗಲೇ ವೃತ್ತದ ಮಧ್ಯ ಭಾಗದಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ‘ಪ್ರತಿಮೆಯ ಸುರಕ್ಷತೆಗಾಗಿ ಮಂಟಪ ಹಾಗೂ ವೃತ್ತದ ಸುತ್ತಲೂ ಕಬ್ಬಿಣ ಸಲಾಕೆಗಳ ತಡೆಗೋಡೆ ನಿರ್ಮಿಸಲಾಗಿದೆ. ವೃತ್ತದ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು ಬೆಳಕಿನ ದೀಪಗಳ ಅಳವಡಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಬರುವ ಫೆಬ್ರುವರಿ ತಿಂಗಳಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಚಿವ ಸತೀಶ ಜಾರಕಿಹೊಳಿ ವಾಲ್ಮೀಕಿ ಪ್ರತಿಮೆ ಹಾಗೂ ವೃತ್ತವನ್ನು ಅನಾವರಣ ಮಾಡಲಿದ್ದಾರೆ’ ಎನ್ನುತ್ತಾರೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಹಾವೇರಿ ಜಿಲ್ಲಾ ಧರ್ಮದರ್ಶಿ ನಾಗರಾಜ ಹಳ್ಳೆಳ್ಳಪ್ಪನವರ.
ಕಳಪೆ ಕಾಮಗಾರಿ: ಸ್ಥಳೀಯರ ಆರೋಪ ‘ಕಾಮಗಾರಿಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬರೋಬ್ಬರಿ 3 ವರ್ಷ ಸಮಯ ವ್ಯರ್ಥ ಮಾಡಿರುವುದಲ್ಲದೆ ಕಾಮಗಾರಿಯಲ್ಲಿ ಲೋಪ ಎಸಗಿದ್ದಾರೆ. ಉದ್ಘಾಟನೆಗೆ ಮುನ್ನವೇ ಅಲ್ಲಲ್ಲಿ ಕಾಂಕ್ರಿಟ್ ಕಿತ್ತು ಹೋಗಿದೆ. ವಾಲ್ಮೀಕಿ ವೃತ್ತದ ತಡೆಗೋಡೆಗೆ ಕಳಪೆ ಕಬ್ಬಿಣ ಮತ್ತು ಪೈಪ್ ಬಳಸಿದ್ದು 3-4 ವರ್ಷಗಳಿಗೆ ಕಳಚಿ ಬೀಳಲಿದೆ’ ಎಂದು ಸ್ಥಳೀಯರು ದೂರಿದರು. ‘ಇನ್ನು ರಸ್ತೆಯ ಎರಡು ಬದಿಯ ಚರಂಡಿಗಳು ಅಪೂರ್ಣಗೊಂಡಿದ್ದು ಪೂರ್ಣ ಪ್ರಮಾಣದಲ್ಲಿ ಸ್ಲ್ಯಾಬ್ ಅಳವಡಿಸಲು ಆಗಿಲ್ಲ. ಪಾದಚಾರಿಗಳು ಓಡಾಡುವ ರಸ್ತೆಗೆ ಈವರೆಗೂ ಗ್ರಾವೆಲ್ ತುಂಬಿ ಸಮತಟ್ಟು ಮಾಡಿಲ್ಲ. ಮೊಳಕಾಲುದ್ದ ಗುಂಡಿಗಳಿದ್ದು ಅಪಾಯ ತಂದೊಡ್ಡುವ ಸ್ಥಿತಿಯಲ್ಲಿವೆ. ಡಿವೈಡರ್ ತಿರುವುಗಳನ್ನು ಪೂರ್ಣಗೊಳಿಸಿಲ್ಲ. ದೀಪದ ಕಂಬಗಳನ್ನು ಅಳವಡಿಸುವ ಕೆಲಸ ಬಾಕಿ ಇದೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಸ್ಥಳೀಯ ಶಾಸಕರಾದ ಪ್ರಕಾಶ ಕೋಳಿವಾಡ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಬೇಕು’ ಎಂಬುದು ಸ್ಥಳೀಯರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.