ತುಮ್ಮಿನಕಟ್ಟಿ: ಗ್ರಾಮದ ವಿವಿಧ ರಸ್ತೆಗಳ ಅಕ್ಕ-ಪಕ್ಕದಲ್ಲಿ ಸುರಿದಿರುವ ಕಸದ ರಾಶಿ, ಬೆಳೆದು ನಿಂತಿರುವ ಮುಳ್ಳಿನ ಪೊದೆಗಳು, ಹೂಳು ತುಂಬಿದ ಕಚ್ಚಾ ಚರಂಡಿಗಳು, ದುರಸ್ತಿ ಕಾಣದ ರಸ್ತೆ, ಅವೈಜ್ಞಾನಿಕ ಚರಂಡಿ ನಿರ್ಮಾಣ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ಇಲ್ಲಿನ ನಿವಾಸಿಗಳು ರೋಸಿ ಹೋಗಿದ್ದಾರೆ.
ಇಲ್ಲಿನ 3 ಮತ್ತು 4ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ರಟ್ಟೀಹಳ್ಳಿ ರಸ್ತೆ ಇಕ್ಕೆಲಗಳಲ್ಲಿ ಕಚ್ಚಾ ಚರಂಡಿ ವ್ಯವಸ್ಥೆ ಇದ್ದು, ಮೇಲ್ಭಾಗದ ಚರಂಡಿಗಳಿಂದ ಬಂದ ಕೊಳಚೆ ನೀರು ಮುಂದೆ ಹರಿದು ಹೋಗಲು ಪಕ್ಕಾ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಗಲೀಜು ನೀರಿನಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜತೆಗೆ ದುರ್ನಾತ ಸೇವಿಸುತ್ತ ನಿತ್ಯವೂ ಹಿಂಸೆ ಅನುಭವಿಸುವಂತಾಗಿದೆ.
‘ಪಕ್ಕಾ ಚರಂಡಿ ನಿರ್ಮಾಣ ಮಾಡಿ ಸಮಸ್ಯೆ ಪರಿಹರಿಸುವಂತೆ ಪಂಚಾಯ್ತಿ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಲ್ಲಿ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸುಳ್ಳು ಭರವಸೆ ನೀಡುವ ಅವರಿಗೆ ಇಲ್ಲಿನ ನಿವಾಸಿಗಳ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ’ ಎಂದು ಸ್ಥಳೀಯ ಮುಖಂಡ ಮಂಜಪ್ಪ ಧರ್ಮಪ್ಪ ಜಂಗಳಿ ಬೇಸರ ವ್ಯಕ್ತಪಡಿಸಿದರು.
ರಸ್ತೆ ತುಂಬ ತಗ್ಗು– ದಿನ್ನೆ:ಹೊನ್ನಾಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಈಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮಣ್ಣಿನ ರಸ್ತೆ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯುವುದರಿಂದ ರಸ್ತೆ ಚರಂಡಿಯಾಗಿ ಮಾರ್ಪಡುತ್ತದೆ. ರಸ್ತೆ ತುಂಬೆಲ್ಲ ತಗ್ಗು, ದಿನ್ನೆಗಳು ನಿರ್ಮಾಣವಾಗಿವೆ. ಇಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತದೆ. ಮಕ್ಕಳು, ವೃದ್ದರು ಮತ್ತು ಮಹಿಳೆಯರು ಓಡಾಡಲು ಭಯ ಪಡುವಂತಾಗಿದೆ.
ಚರಂಡಿ ದುರಸ್ತಿಗೊಳಿಸಿ:ಅವೈಜ್ಞಾನಿಕವಾಗಿ ನಿರ್ಮಾಣವಾದ ಪಕ್ಕಾ ಹಾಗೂ ಕಚ್ಚಾ ಚರಂಡಿಯಲ್ಲಿ ಗಿಡ, ಗಂಟಿ ಬೆಳೆದು ಹೂಳು ತುಂಬಿದ್ದು, ಕಲುಷಿತ ಕೊಳಚೆ ನೀರು ನಿಂತ ಪರಿಣಾಮ ವಿಷ ಜಂತುಗಳು ಸೇರಿದಂತೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯವರು ಇತ್ತ ಗಮನ ಹರಿಸದೇ ಇರುವುದರಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುವಂತಾಗಿದೆ ಎಂದು ಇಲ್ಲಿನ ನಿವಾಸಿಗಳಾದ ಇಬ್ರಾಹಿಂಸಾಬ್ ನೂರಸಾಬ್ ಹಾಗೂ ಲಕ್ಷ್ಮವ್ವ ಮಿರಾಲಿ ಆರೋಪಿಸಿದ್ದಾರೆ.
ಗ್ರಾಮದ ಸರ್ವ ಸದಸ್ಯರು ವಾರ್ಡ್‌ವಾರು ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆ ಮೂಲಕ ಗ್ರಾಮಸ್ಥರ ಅಗತ್ಯಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುವತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಸ್ಥಳೀಯ ನಿವಾಸಿ ಮಂಜುನಾಥ ಕೂಲಂಬಿ ಮನವಿ ಮಾಡಿದರು.
‘ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ನಾಗರಿಕರ ಸಹಕಾರ ಪಡೆದು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಮಾಜಿ ಗ್ರಾ.ಪಂ ಅಧ್ಯಕ್ಷ ಜನಾರ್ದನಪ್ಪ ಮೊಹರೆ ಸಲಹೆ ನೀಡಿದ್ದಾರೆ.
**
ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿ ಸೇರಿದಂತೆ ಉತ್ತಮ ಪರಿಸರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು
- ಜ್ಯೋತಿ ಉಪ್ಪಿನ, ಗ್ರಾ.ಪಂ ಅಧ್ಯಕ್ಷೆ, ತುಮ್ಮಿನಕಟ್ಟಿ
**
ಅಮೃತ ಗ್ರಾಮ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇವೆ
- ವಿಜಯಕುಮಾರ ಹನಗೋಡಿಮಠ, ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.