ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರನಗಿರಿ ಗ್ರಾಮದ ರೈತ ರುದ್ರಪ್ಪ ಬಾಳಿಕಾಯಿ (24) ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ‘ನಮ್ಮ ಜಮೀನು, ವಕ್ಫ್ ಆಸ್ತಿ ಆಯಿತು ಎಂಬ ಕಾರಣಕ್ಕೆ ಮಗ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡ’ ಎಂದು ರುದ್ರಪ್ಪ ತಂದೆ ಚನ್ನಪ್ಪ ಬಾಳಿಕಾಯಿ ಆರೋಪಿಸಿದ್ದಾರೆ.
‘ಅಲ್ಲಾಪುರ ಗ್ರಾಮದಲ್ಲಿದ್ದ ಮೊಹಮ್ಮದ್ ಯೂಸೂಫ್ ಎಂಬುವರಿಗೆ ಸೇರಿದ್ದ 4 ಎಕರೆ 36 ಗುಂಟೆ ಜಮೀನನ್ನು ನಮ್ಮ ತಂದೆ 1964ರಲ್ಲಿ ಖರೀದಿಸಿದ್ದರು. ಎಲ್ಲ ದಾಖಲೆಗಳು ತಂದೆ ಹೆಸರಿಗೆ ವರ್ಗಾವಣೆಯಾಗಿದ್ದವು. ಅವರ ನಂತರ, ನನ್ನ ಹೆಸರಿಗೆ ಜಮೀನು ಬಂದಿತ್ತು. 2015ರಲ್ಲಿ ಯಾವುದೇ ನೋಟಿಸ್ ನೀಡದೇ ಪೊಲೀಸರ ಸಮೇತ ಜಮೀನಿಗೆ ಬಂದಿದ್ದ ಉಪವಿಭಾಗಾಧಿಕಾರಿ ಹಾಗೂ ಇತರರು, ಹತ್ತಿ, ಕಬ್ಬು ಹಾಗೂ ಗೋವಿನ ಜೋಳವನ್ನು ನಾಶಪಡಿಸಿದರು. ನಮ್ಮನ್ನು ಹೊರಗೆ ತಬ್ಬಿದರು. ಜಮೀನು ಸುಪರ್ದಿಗೆ ಪಡೆದು, ‘ವಕ್ಪ್ ಆಸ್ತಿ ಮೊಕಾಶಿ ಟ್ರಸ್ಟ್’ ಅವರಿಗೆ ನೀಡಿದ್ದಾರೆ. ಪಹಣಿಯಲ್ಲೂ ಇದೇ ಹೆಸರಿಗೆ ಖಾತೆ ಬದಲಾವಣೆ ಮಾಡಿದ್ದಾರೆ. ಈ ಆಸ್ತಿಯನ್ನು ಟ್ರಸ್ಟ್ ನಿರ್ವಹಣೆ ಮಾಡುತ್ತಿಲ್ಲ. ಒಬ್ಬನೇ ವ್ಯಕ್ತಿ ವೈಯಕ್ತಿಕವಾಗಿ ಬಳಸುತ್ತಿದ್ದಾನೆ. ಅಲ್ಲಾಪುರದಲ್ಲಿರುವ ಹಜರತಲಿ ಎಂಬುವರ 2 ಎಕರೆ 11 ಗುಂಟೆ ಜಾಗವನ್ನೂ ವಕ್ಫ್ ಆಸ್ತಿಯೆಂದು ಪಹಣಿ ತಿದ್ದುಪಡಿ ಮಾಡಲಾಗಿದೆ’ ಎಂದು ಚನ್ನಪ್ಪ ಬಾಳಿಕಾಯಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಜಮೀನು ತೆರವಿಗೆ ನಮ್ಮ ಒಪ್ಪಿಗೆ ಇರಲಿಲ್ಲ. ಪಂಚನಾಮೆಯಲ್ಲಿ ಮಗನ ನಕಲಿ ಸಹಿ ಮಾಡಲಾಗಿದೆ. ಜಮೀನು ವಾಪಸು ಪಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವಕ್ಫ್ ಆಸ್ತಿ ಆಯಿತೆಂದು ಮಾನಸಿಕವಾಗಿ ನೊಂದಿದ್ದ ಮಗ ರುದ್ರಪ್ಪ, ಅದೇ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ’ ಎಂದು ಅವರು ದೂರಿದರು.
‘ವಕ್ಪ್ ಕಾಯ್ದೆ (ತಿದ್ದುಪಡಿ) ಮಸೂದೆ ಬಗ್ಗೆ ಮಾಹಿತಿ ಸಂಗ್ರಹಿಸಲು ಸಂಸದ ಜಗದಂಬಿಕಾ ಪಾಲ್ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಗೆ ಮನವಿ ಸಲ್ಲಿಸಿದ್ದೇವೆ.ನಮ್ಮ ಪರ ಧ್ವನಿ ಎತ್ತಿದ್ದಕ್ಕೆ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಸರಿಯಲ್ಲ. ಇದನ್ನು ವಾಪಸು ಪಡೆಯಬೇಕು’ ಎಂದು ಅವರು ಆಗ್ರಹಿಸಿದರು.
ಪೊಲೀಸರ ಒತ್ತಾಯಕ್ಕೆ ಮಣಿದು ಸಹಿ: ‘ಮಗ ತೀರಿಕೊಂಡ ದುಃಖದಲ್ಲಿದ್ದೆ. ₹ 7 ಲಕ್ಷ ಸಾಲ ತೀರಿಸಲಾಗದೇ ಮಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರೇ ದೂರು ಸಿದ್ಧಪಡಿಸಿದ್ದರು. ಅವರ ಒತ್ತಾಯಕ್ಕೆ ಮಣಿದು ಸಹಿ ಮಾಡಿದೆ. ಇದಾದ ನಂತರ, ವಕ್ಫ್ ಆಸ್ತಿ ವಿಷಯವನ್ನು ದೂರಿನಲ್ಲಿ ದಾಖಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ’ ಎಂದರು.
‘ರೈತ ಆತ್ಮಹತ್ಯೆ ಎಂಬುದಾಗಿ ಪೊಲೀಸರು ದಾಖಲೆಗಳನ್ನು ಸಿದ್ಧಪಡಿಸಿದ್ದರಿಂದ, ಸರ್ಕಾರದಿಂದ ₹ 5 ಲಕ್ಷ ಪರಿಹಾರ ಬಂದಿದೆ. ಆದರೆ, ಮಗನ ಆತ್ಮಹತ್ಯೆ ನೋವು ಹೋಗಿಲ್ಲ. ಈಗ ಹಲವು ರೈತರ ಜಮೀನು ವಕ್ಫ್ ಆಸ್ತಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ನನಗೂ ನ್ಯಾಯ ಸಿಗಬಹುದೆಂದು ಜಂಟಿ ಸಮಿತಿಗೆ ಅರ್ಜಿ ಕೊಟ್ಟಿದ್ದೇನೆ’ ಎಂದು ತಿಳಿಸಿದರು.
ಬೆಂಗಳೂರಿನ 175 ಎಕರೆಯಲ್ಲಿರುವ ಮೆಜೆಸ್ಟಿಕ್ ಬಸ್ ನಿಲ್ದಾಣ ಸಹ ವಕ್ಫ್ ಆಸ್ತಿ ಎಂಬುದಾಗಿ ವಕ್ಫ್ ಮಂಡಳಿ ಹೇಳುತ್ತಿದೆ. ವಿಧಾನಸೌಧ ವಕ್ಫ್ ಆಸ್ತಿಯಾದರೂ ಆಶ್ಚರ್ಯವಿಲ್ಲಪ್ರಲ್ಹಾದ ಜೋಶಿ ಕೇಂದ್ರ ಸಚಿವ
ವಕ್ಫ್ ಆಸ್ತಿ ರಕ್ಷಿಸುವುದಾಗಿ ಬಿಜೆಪಿಯವರೇ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಅವರ ಕಾಲದಲ್ಲೂ ನೋಟಿಸ್ ನೀಡಲಾಗಿದೆ. ಸದ್ಯ ನೋಟಿಸ್ ಹಿಂಪಡೆಯಲು ರೈತರನ್ನು ಒಕ್ಕಲೆಬ್ಬಿಸದಂತೆ ಸೂಚಿಸಲಾಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.