ADVERTISEMENT

ಚಿಕ್ಕೇರೂರ: ಪಾಳುಬಿದ್ದ ಸೀತೆಕೊಂಡ ಯಾತ್ರಿ ನಿವಾಸ

ಮೂಲಸೌಕರ್ಯಗಳಿಲ್ಲದೇ ಸೊರಗಿರುವ ಚಿಕ್ಕೇರೂರ ಗ್ರಾಮ

ರಾಜೇಂದ್ರ ನಾಯಕ
Published 22 ಏಪ್ರಿಲ್ 2024, 7:14 IST
Last Updated 22 ಏಪ್ರಿಲ್ 2024, 7:14 IST
<div class="paragraphs"><p>ಚಿಕ್ಕೇರೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತೆಕೊಂಡದಲ್ಲಿ ನಿರ್ಮಾಣ ಮಾಡಿದ ಯಾತ್ರಿ ನಿವಾಸ ಪಾಳು ಬಿದ್ದಿರುವುದು</p></div>

ಚಿಕ್ಕೇರೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತೆಕೊಂಡದಲ್ಲಿ ನಿರ್ಮಾಣ ಮಾಡಿದ ಯಾತ್ರಿ ನಿವಾಸ ಪಾಳು ಬಿದ್ದಿರುವುದು

   

ಹಂಸಬಾವಿ: ಚಿಕ್ಕೇರೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀತೆಕೊಂಡ ಗ್ರಾಮದ ಉಜನೇಶ್ವರ ದೇವಸ್ಥಾನದ ಆವರಣದಲ್ಲಿ 2015-16ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಯಾತ್ರಿ ನಿವಾಸ ಕಟ್ಟಡವು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದ್ದು, ಇದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೇ ಕಿಡಿಗೇಡಿಗಳು ಕಟ್ಟಡದ ಕಿಟಕಿ, ಗಾಜುಗಳನ್ನು ಒಡೆದಿದ್ದು, ಕಟ್ಟಡದ ಒಳಗೆ ಗಲೀಜು ಮಾಡಿದ್ದಾರೆ.

‘ನಮ್ಮೂರಿನಲ್ಲಿ ಉಜನೇಶ್ವರ ದೇವಸ್ಥಾನದ ದರ್ಶನಕ್ಕೆ ಭಕ್ತರು ವರ್ಷವಿಡೀ ಬರುತ್ತಾರೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಈ ಕಟ್ಟಡವನ್ನು ಕಟ್ಟಿದ್ದಾರೆ. ಆದರೆ, ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ. ಇಲ್ಲಿಗೆ ಬಂದ ಭಕ್ತರು ಉಳಿಯಲು ಅನುಕೂಲವಿಲ್ಲದೇ ಹಿಂದಿರುಗಬೇಕಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇದರ ನಿರ್ವಹಣೆಯನ್ನು ಮಾಡಿ ಭಕ್ತರ ಅನುಕೂಲಕ್ಕೆ ಅನುವು ಮಾಡಿಕೊಡಬೇಕು’ ಎಂದು ಗ್ರಾಮದ‌ ಪರುಶರಾಮ ತಿಳಿಸಿದರು.

ADVERTISEMENT

ಚಿಕ್ಕೇರೂರ ಗ್ರಾಮದಲ್ಲಿ ಮೂಲಸೌಲಭ್ಯಗಳ ಕೊರತೆಯಿದ್ದು, ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಈ ಗ್ರಾಮದಲ್ಲಿ ಆಸ್ಪತ್ರೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಸೌಕರ್ಯಗಳ ಕೊರತೆ ಇದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನ ನೀರಿಗಾಗಿ ರೈತರ ಜಮೀನಿಗೆ ಅಲೆದಾಡಬೇಕಾಗಿದೆ.

‘ನಮ್ಮೂರಿನ ರಸ್ತೆ ಸುಮಾರು 3 ಕಿ.ಮೀ ಉದ್ದ ಇದ್ದು, ಇದು ಅನೇಕ ವರ್ಷಗಳಿಂದ ಹದಗೆಟ್ಟಿದೆ. ಅಲ್ಲದೇ ಗ್ರಾಮದ ಚರಂಡಿ ನೀರು ಇದಕ್ಕೆ ಸೇರುವು ದರಿಂದ ವರ್ಷವಿಡೀ ಕೊಳಚೆ ತುಂಬಿ ಕೊಂಡು ಗಬ್ಬೆದ್ದು ನಾರುತ್ತಿದೆ. ಮಳೆಗಾ ಲದಲ್ಲಿ ಚರಂಡಿ ನೀರು ಮನೆಗಳಿಗೂ ನುಗ್ಗುತ್ತದೆ. ಈ ಕಾಲುವೆಯ ಹೂಳು ತೆಗೆದರೆ ನಮ್ಮ ಗ್ರಾಮದ ದೊಡ್ಡ ಕೆರೆ ತುಂಬಲು ಬೇಕಾಗುವ ನೀರು ಇದರಿಂದಲೇ ಹರಿದು ಬರುತ್ತದೆ’ ಎನ್ನುತ್ತಾರೆ ಗ್ರಾಮದ ಜಮೀರ್‌ ಚಿಕ್ಕೊಣ್ತಿ.

ಸಂಚಾರಕ್ಕೆ ಮುಕ್ತವಾಗದ ರಾಜ್ಯ ಹೆದ್ದಾರಿ: ‘ಚಿಕ್ಕೇರೂರ ಗ್ರಾಮದ ಹೊರವಲ ಯದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಅಪೂರ್ಣ ವಾಗಿದ್ದು, ಹೀಗಾಗಿ ಈ ರಸ್ತೆ ವಾಹನ ಸಂಚಾರಕ್ಕೆ ಮುಕ್ತ ವಾಗದ ಕಾರಣ ರೈತರ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಈ ರಸ್ತೆಯಲ್ಲಿ ನಿರ್ಮಾಣದ ಸಮಯದಲ್ಲಿ ಚಿಕ್ಕ ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದು, ಅದು ನಿರ್ಮಾಣ ಹಂತದಲ್ಲಿಯೇ ಕಳಪೆಯಾಗಿದೆ. ನಂತರ ಅದರ ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸವಾರರಿಗೆ ತೊಡಕಾಗಿದೆ’ ಎನ್ನುತ್ತಾರೆ ಭರಮಪ್ಪ ಡಮ್ಮಳ್ಳಿ.

ಕಾಲುವೆ ಹೂಳು: ‘ಹಿರೇಕಾಲುವೆ ಹೂಳು ತೆಗೆಯಲು ನರೇಗಾ ಯೋಜನೆಯಲ್ಲಿ ಕ್ರಿಯಾಯೋಜನೆ ಸಿದ್ಧವಿದೆ. ಆದರೆ ಇದು ಯಂತ್ರಗಳಿಂದ ಮಾತ್ರ ಸಾಧ್ಯ. ಆದರೆ ಯಂತ್ರದಿಂದ ಕಾಮಗಾರಿ ಮಾಡುವಂತಿಲ್ಲ. ಹೀಗಾಗಿ ಶಾಸಕರ ಅನುದಾನದ ಕಾಮಗಾರಿಯಲ್ಲಿ ಈ ಕಾಲುವೆ ಹೂಳೆತ್ತಲಾಗುವುದು’ ಎಂದು ಪಿಡಿಒ ವೀರನಗೌಡ ಪಾಟೀಲ ಹೇಳುತ್ತಾರೆ.

ಆರೋಗ್ಯ ಕೇಂದ್ರಕ್ಕಿಲ್ಲ ಆಂಬುಲೆನ್ಸ್‌!

‘ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದುವರೆಗೂ ಆಂಬುಲೆನ್ಸ್‌ ವಾಹನ ಇಲ್ಲ. ಹೀಗಾಗಿ ಇಲ್ಲಿನ ರೋಗಿಗಳಿಗಳು ತುರ್ತು ಚಿಕಿತ್ಸೆ ಪಡೆಯಲು ಖಾಸಗಿ ವಾಹನ ಅಥವಾ ತಾಲ್ಲೂಕು ಕೇಂದ್ರದ ಆಂಬುಲೆನ್ಸ್‌ ಬರುವವರೆಗೂ ಕಾಯಬೇಕಾಗಿದೆ. ಆರೋಗ್ಯ ಇಲಾಖೆ ಕೂಡಲೇ ನಮ್ಮ ಗ್ರಾಮದ ಆಸ್ಪತ್ರೆಗೆ ಆಂಬುಲೆನ್ಸ್‌ ವಾಹನ ಒದಗಿಸಬೇಕು’ ಎಂದು ಗ್ರಾಮದ ರವಿ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಚ್ಚಾ ರೂಪದಲ್ಲಿದೆ. ಮಳೆಗಾಲದಲ್ಲಿ ಇಲ್ಲಿಗೆ ಬರುವವರಿಗೆ ಸಮಸ್ಯೆಯಾಗುತ್ತಿದ್ದು, ಉತ್ತಮ ರಸ್ತೆ ಶೀಘ್ರ ನಿರ್ಮಾಣ ಮಾಡಬೇಕು
–ಚಂದ್ರುಗೌಡ ಜೋಗಿಹಳ್ಳಿ,ಆಸ್ಪತ್ರೆ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.