ADVERTISEMENT

ಸ್ವಾವಲಂಬಿ ಹಾದಿಯಲ್ಲಿ ಗ್ರಾಮೀಣ ಮಹಿಳೆಯರು

ಕುಣಿಮೆಳ್ಳಹಳ್ಳಿಯಲ್ಲಿ ಆರ್‌ಸೆಟಿಯಿಂದ ‘ಸೆಣಬು ಉತ್ಪನ್ನಗಳ ಉದ್ಯಮಿ’ ತರಬೇತಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 15:16 IST
Last Updated 1 ಜೂನ್ 2022, 15:16 IST
ಹಾವೇರಿ ತಾಲ್ಲೂಕಿನ ದೇವಗಿರಿಯ ಬ್ಯಾಂಕ್‌ ಆಫ್‌ ಬರೋಡಾದ ಆರ್‌ಸೆಟಿ ಸಂಸ್ಥೆಯು ಕುಣಿಮೆಳ್ಳಹಳ್ಳಿ ಗ್ರಾಮದಲ್ಲಿ ಆಯೋಜಿಸಿರುವ ‘ಸೆಣಬು ಉತ್ಪನ್ನಗಳ ತಯಾರಿಕೆ’ ತರಬೇತಿಯನ್ನು ಪಡೆಯುತ್ತಿರುವ ಗ್ರಾಮೀಣ ಮಹಿಳೆಯರು  –ಪ್ರಜಾವಾಣಿ ಚಿತ್ರ 
ಹಾವೇರಿ ತಾಲ್ಲೂಕಿನ ದೇವಗಿರಿಯ ಬ್ಯಾಂಕ್‌ ಆಫ್‌ ಬರೋಡಾದ ಆರ್‌ಸೆಟಿ ಸಂಸ್ಥೆಯು ಕುಣಿಮೆಳ್ಳಹಳ್ಳಿ ಗ್ರಾಮದಲ್ಲಿ ಆಯೋಜಿಸಿರುವ ‘ಸೆಣಬು ಉತ್ಪನ್ನಗಳ ತಯಾರಿಕೆ’ ತರಬೇತಿಯನ್ನು ಪಡೆಯುತ್ತಿರುವ ಗ್ರಾಮೀಣ ಮಹಿಳೆಯರು  –ಪ್ರಜಾವಾಣಿ ಚಿತ್ರ    

ಹಾವೇರಿ: ‘ಸೆಣಬು ಉತ್ಪನ್ನಗಳ ಉದ್ಯಮಿ’ಯಾಗುವ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಸವಣೂರು ತಾಲ್ಲೂಕಿನ ಕುಣಿಮೆಳ್ಳಹಳ್ಳಿ ಮತ್ತು ಮೆಳ್ಳಾಗಟ್ಟಿಯ 35 ಗ್ರಾಮೀಣ ಮಹಿಳೆಯರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಹಾವೇರಿ ತಾಲ್ಲೂಕಿನ ದೇವಗಿರಿಯ ಬ್ಯಾಂಕ್‌ ಆಫ್‌ ಬರೋಡಾದ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ (ಆರ್‌ಸೆಟಿ) ಮೊದಲ ಬಾರಿಗೆ ಫಲಾನುಭವಿಗಳು ಇರುವ ಸ್ಥಳದಲ್ಲೇ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಿದೆ. ಕುಣಿಮೆಳ್ಳಹಳ್ಳಿಯಲ್ಲಿ ಮೇ 23ರಿಂದ ಜೂನ್‌ 4ರವರೆಗೆ 13 ದಿನಗಳ ‘ಸೆಣಬು ಉತ್ಪನ್ನಗಳ ಉದ್ಯಮಿ’ ತರಬೇತಿಯನ್ನು ನೀಡುತ್ತಿದೆ.

‘ಸಂಜೀವಿನಿ ಮಹಿಳಾ ಸ್ವ–ಸಹಾಯ ಸಂಘದ 35 ಬಿಪಿಎಲ್‌ ಕುಟುಂಬದ ಮಹಿಳೆಯರನ್ನು ಉಚಿತ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪರಿಸರ ಸ್ನೇಹಿಯಾದ ಸೆಣಬಿನ ಉತ್ಪನ್ನಗಳನ್ನು ಪ್ಲಾಸ್ಟಿಕ್‌ ವಸ್ತುಗಳಿಗೆ ಪರ್ಯಾಯವಾಗಿ ಬಳಸಬಹುದು. ಇವು ಸಾವಯವ ಉತ್ಪನ್ನಗಳಾಗಿರುವುದರಿಂದ ಸಹಜವಾಗಿಯೇ ಪರಿಸರದಲ್ಲಿಕ್ಷೀಣಿಸುತ್ತವೆ. ಸೆಣಬಿನ ಎಳೆಗಳನ್ನು ಮತ್ತೆ ಮತ್ತೆ ಬಳಸಬಹುದಾಗಿದೆ. ಸುಸ್ಥಿರ ಪರಿಸರಕ್ಕೆ ಪೂರಕವಾಗಿವೆ’ ಎನ್ನುತ್ತಾರೆಆರ್‌ಸೆಟಿ ನಿರ್ದೇಶಕ ಸಜಿತ್‌ ಎಸ್‌.

ADVERTISEMENT

ಮನಸೆಳೆಯುವ ಉತ್ಪನ್ನಗಳು:

ಮಹಿಳೆಯರು ತಯಾರಿಸಿದ ಸೆಣಬಿನ ಕೈಚೀಲ, ವ್ಯಾನಿಟಿ ಬ್ಯಾಗ್‌, ಲಂಚ್‌ ಬ್ಯಾಗ್‌, ಕ್ರಾಸ್‌ ಬ್ಯಾಗ್‌, ಹ್ಯಾಂಡ್‌ ಪರ್ಸ್‌, ವಾಲ್‌ ಹ್ಯಾಂಗಿಂಗ್‌, ಡೈನಿಂಗ್‌ ಟೇಬಲ್‌ ಮ್ಯಾಟ್‌ ಹಾಗೂ ಆಫೀಸ್‌ ಫೈಲ್‌ಗಳು ವಿವಿಧ ಬಣ್ಣ ಮತ್ತು ವಿನ್ಯಾಸದಿಂದ ನೋಡುಗರನ್ನು ಆಕರ್ಷಿಸುತ್ತವೆ.

‘ಸಮಯ ನಿರ್ವಹಣೆ, ಸ್ವ–ಉದ್ಯೋಗ, ಸ್ವಾವಲಂಬನೆ, ಮಾರುಕಟ್ಟೆ ವ್ಯವಸ್ಥೆ, ಬ್ಯಾಂಕಿಂಗ್‌ ಹಾಗೂ ಜೀವನ ಕೌಶಲಗಳ ಬಗ್ಗೆಯೂ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸುತ್ತಿದ್ದೇವೆ. ತರಬೇತಿ ಪಡೆದ ನಂತರ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯಲು ನೆರವು ನೀಡುತ್ತೇವೆ. ಆರ್‌ಸೆಟಿ ಬಜಾರ್‌ ಮತ್ತು ಇತರ ಬಜಾರ್‌ಗಳಲ್ಲಿ ಸೆಣಬು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತೇವೆ’ ಎಂದು ಆರ್‌ಸೆಟಿ ಸಂಸ್ಥೆಯ ಉಪನ್ಯಾಸಕಿ ಮಂಜುಳಾ ಯರಳ್ಳಿ ತಿಳಿಸಿದರು.

ಸ್ವ–ಉದ್ಯೋಗಕ್ಕೆ ದಾರಿ:

‘ಕುಣಿಮೆಳ್ಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 58 ಸಂಜೀವಿನಿ ಮಹಿಳಾ ಸಂಘಗಳು ಸಕ್ರಿಯವಾಗಿವೆ. ಜೀವನ ನಿರ್ವಹಣೆಗಾಗಿ ಮನೆಗೆಲಸ, ಹೊಲದ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಕೌಶಲಾಧಾರಿತ ತರಬೇತಿ ನೀಡಲಾಗುತ್ತಿದೆ. ತರಬೇತಿಯ ನಂತರ ಸ್ವ–ಉದ್ಯೋಗ ಆರಂಭಿಸಿ, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಕುಣಿಮೆಳ್ಳಹಳ್ಳಿ ಗ್ರಾ.ಪಂ. ಮಟ್ಟದ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ (ಎಂ.ಬಿ.ಕೆ) ಅನ್ನಪೂರ್ಣ ಬಿಜಾಪುರ.

‘ಸಮುದಾಯ ಬಂಡವಾಳ ನಿಧಿ ಬಳಸಿಕೊಂಡು ಬಳೆ ವ್ಯಾಪಾರ ಮಾಡುತ್ತಿದ್ದೆ. ಈಗ ಸೆಣಬು ಉತ್ಪನ್ನಗಳನ್ನು ತಯಾರಿಸುವುದನ್ನು ಕಲಿಯುತ್ತಿದ್ದೇನೆ. ಕಲಿತ ವಿದ್ಯೆ ಕೈ ಹಿಡಿಯುತ್ತದೆ ಎಂಬ ನಂಬಿಕೆಯಿದೆ. ನನ್ನ ಬಳಿ ಹೊಲಿಗೆ ಯಂತ್ರ ಇರುವುದರಿಂದ ಸೆಣಬಿನ ಉತ್ಪನ್ನಗಳ ಉದ್ಯಮ ಆರಂಭಿಸುವ ಕನಸಿದೆ’ ಎನ್ನುತ್ತಾರೆ ಕುಣಿಮೆಳ್ಳಹಳ್ಳಿಯ ನೇತ್ರಾವತಿ ಸೂರ್ಯವಂಶಿ.

ಸೆಣಬು ಉತ್ಪನ್ನಕ್ಕೆ ಪ್ರೋತ್ಸಾಹ

ಹಣಕಾಸು ವಿದ್ಯಮಾನಗಳ ಸಮಿತಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೆಣಬು ವರ್ಷ 2021–22ರಿಂದ ಸೆಣಬಿನ ಪ್ಯಾಕೇಜಿಂಗ್‌ಗೆ ಹಲವು ನೀತಿ ನಿಯಮಗಳನ್ನು ರೂಪಿಸಿದೆ. ದವಸ–ಧಾನ್ಯಗಳನ್ನೆಲ್ಲ ಸಂಪೂರ್ಣವಾಗಿ ಶೇ 100ರಷ್ಟು ಸೆಣಬಿನ ಚೀಲದಲ್ಲಿಯೇ ಪ್ಯಾಕ್‌ ಮಾಡಬೇಕು. ಶೇ 20ರಷ್ಟು ಸಕ್ಕರೆಯ ಚೀಲಗಳೂ ಸೆಣಬಿನಿಂದಲೇ ತಯಾರಾಗಿರಬೇಕು ಎಂಬುದನ್ನು ಕಡ್ಡಾಯಗೊಳಿಸಿ ಮಸೂದೆಗೆ ಸಚಿವ ಸಂಪುಟವು ಅನುಮೋದನೆ ತೋರಿರುವುದು ಸೆಣಬು ಉತ್ಪನ್ನಗಳ ಉದ್ಯಮಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ ಎನ್ನುತ್ತಾರೆ ದೇವಗಿರಿಯ ಆರ್‌ಸೆಟಿ ಸಿಬ್ಬಂದಿ.

ಮೊದಲು ಮನೆಗೆಲಸಕ್ಕೆ ಹೋಗುತ್ತಿದ್ದೆ. ಉಚಿತ ತರಬೇತಿ ಸಿಕ್ಕಿರುವುದರಿಂದ ‘ಜೂಟ್‌ ಪ್ರಾಡೆಕ್ಟ್‌ ಉದ್ಯಮ’ ಆರಂಭಿಸುವ ಕನಸು ಮೂಡಿದೆ.
– ಲೀಲಾದೇವಿ ಸೂರದ್‌, ಕುಣಿಮೆಳ್ಳಹಳ್ಳಿ

₹45 ಸಾವಿರ ಮೌಲ್ಯದ ಸೆಣಬು ಸಾಮಗ್ರಿ ತರಿಸಿ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇವೆ. ಮುದ್ರಾ ಯೋಜನೆಯಡಿ ಸಾಲ ಕೊಡಿಸಲು ನೆರವಾಗುತ್ತೇವೆ.
– ಸಜಿತ್‌ ಎಸ್‌., ಆರ್‌ಸೆಟಿ ನಿರ್ದೇಶಕ, ದೇವಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.