ADVERTISEMENT

ಹಿರೇಕೆರೂರು | ವೇತನ ಬಾಕಿ: ಅಂಗನವಾಡಿ ನೌಕರರ ಸಂಕಷ್ಟ

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿವೆ 365 ಅಂಗನವಾಡಿ ಕೇಂದ್ರಗಳು

ಶಂಕರ ಕೊಪ್ಪದ
Published 31 ಆಗಸ್ಟ್ 2024, 6:55 IST
Last Updated 31 ಆಗಸ್ಟ್ 2024, 6:55 IST
ಹಿರೇಕೆರೂರು ಅಂಬೇಡ್ಕರ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯೊಬ್ಬರು ಮಕ್ಕಳಿಗೆ ಪಾಠ ಮಾಡಿದರು
ಹಿರೇಕೆರೂರು ಅಂಬೇಡ್ಕರ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯೊಬ್ಬರು ಮಕ್ಕಳಿಗೆ ಪಾಠ ಮಾಡಿದರು   

ಹಿರೇಕೆರೂರು: ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮೂರು ತಿಂಗಳಿನಿಂದ ಗೌರವ ವೇತನ ಸಂಧಾಯವಾಗಿಲ್ಲ. ಇದರಿಂದಾಗಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 365 ಅಂಗನವಾಡಿ ಕೇಂದ್ರಗಳಿದ್ದು, 354 ಕಾರ್ಯಕರ್ತೆಯರು ಹಾಗೂ 341 ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಮೇ, ಜೂನ್ ಹಾಗೂ ಜುಲೈ ತಿಂಗಳ ವೇತನ ನೀಡಿಲ್ಲ. 

ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ₹ 11,500 ಹಾಗೂ ಸಹಾಯಕಿಯರಿಗೆ ಪ್ರತಿ ತಿಂಗಳು ₹6,200 ವೇತನ ನೀಡಲಾಗುತ್ತದೆ. ಮೂರು ತಿಂಗಳಿನಿಂದ ವೇತನ ಬಾಕಿ ಇರುವುದರಿಂದ, ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಮಕ್ಕಳ ಪಾಲನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಪಾತ್ರ ಮಹತ್ವದ್ದು. ಮಕ್ಕಳ ಪಾಲನೆ ಜೊತೆಯಲ್ಲಿಯೇ ಮಾತೃಪೂರ್ಣ, ಮಾತೃವಂದನಾ ಯೋಜನೆ ಜಾರಿ ಜವಾಬ್ದಾರಿಯೂ ಅವರ ಮೇಲಿದೆ.

ಆಹಾರ ತಯಾರಿ, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ ಯೋಜನೆಯ ಅರ್ಹರ ಪಟ್ಟಿ ಸಿದ್ಧಪಡಿಸುವಿಕೆ ಹಾಗೂ ಇತರೆ ಕೆಲಸಗಳನ್ನೂ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಾಡುತ್ತಿದ್ದಾರೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದ ಎಲ್ಲ ಕೆಲಸ ಮಾಡಿದರೂ ಸಂಬಳ ಸಿಗದಿದ್ದರಿಂದ, ಹಿರೇಕೆರೂರು ವಿಧಾನಸಭಾ ಕ್ಷೇತ್ರದ 719 ಮಂದಿ ಅಂಗನವಾಡಿ ನೌಕರರು ಸಂಕಷ್ಟದಲ್ಲಿದ್ದಾರೆ. ಎಲ್ಲ ಕೆಲಸಗಳನ್ನು ನಮ್ಮಿಂದ ಮಾಡಿಸಿಕೊಂಡರೂ ಸರಿಯಾಗಿ ವೇತನ ನೀಡದೇ ಸತಾಯಿಸುತ್ತಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ದೂರಿದರು.

ವೈಯಕ್ತಿಕ ಹಣದಲ್ಲಿ ಮೊಟ್ಟೆ ಪೂರೈಕೆ: ಅಂಗನವಾಡಿಯಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮೊಟ್ಟೆ ಪೂರೈಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ತಮ್ಮ ವೈಯಕ್ತಿಕ ಹಣದಲ್ಲಿ ಮೊಟ್ಟೆಗಳನ್ನು ಖರೀದಿಸಿ ವಿತರಿಸುತ್ತಿದ್ದಾರೆ. ಮೊಟ್ಟೆ ಖರೀದಿ ಹಣವನ್ನೂ ಸರ್ಕಾರ ವಾಪಸು ನೀಡಿಲ್ಲವೆಂಬ ಆರೋಪವಿದೆ.

‘ಕೈಯಿಂದ ದುಡ್ಡು ಹಾಕಿ ಮೊಟ್ಟೆ ಖರೀದಿಸಿ ಫಲಾನುಭವಿಗಳಿಗೆ ಕೊಟ್ಟಿದ್ದೇವೆ. ಜುಲೈ ಹಾಗೂ ಆಗಸ್ಟ್ ತಿಂಗಳ ಮೊಟ್ಟೆಯ ಬಿಲ್‌ ಬಾಕಿ ಇದೆ’ ಎಂದು ಕಾರ್ಯಕರ್ತೆಯೊಬ್ಬರು ಹೇಳಿದರು.

‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕಳೆದ 3 ತಿಂಗಳಿನಿಂದ ಸಂಬಳ ಆಗಿಲ್ಲ. ಸಂಬಳ ನಂಬಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜೀವನ ನಡೆಸುವುದು ಕಷ್ಟವಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳ ಮೊಟ್ಟೆ ಬಿಲ್‌ ಸಹ ಬಾಕಿ ಉಳಿದಿದೆ. ಇದು ಮತ್ತಷ್ಟು ಸಂಕಷ್ಟ ತಂದಿದೆ. ಸರ್ಕಾರ ಶೀಘ್ರವಾಗಿ ಅನುದಾನ ನೀಡಿ, ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವೇತನ ಸಿಗುವಂತೆ ಮಾಡಬೇಕು’ ಎಂದು ಎಐಟಿಯುಸಿ ಹಿರೇಕೆರೂರು ತಾಲ್ಲೂಕು ಅಧ್ಯಕ್ಷೆ ಕುಸುಮಾ ಪಾಟೀಲ ಆಗ್ರಹಿಸಿದರು.‌

ಮೊಟ್ಟೆ ಖರೀದಿ ಹಣವೂ ಬಾಕಿ ಅಂಗನವಾಡಿ ನೌಕರರ ಜೀವನ ನಿರ್ವಹಣೆ ಕಷ್ಟ ಅನುದಾನ ಕೊರತೆ ನೆಪ
ಅನುದಾನ ಕೊರತೆಯಿಂದ ವೇತನ ಪಾವತಿ ತಡವಾಗಿದೆ. ಶೀಘ್ರದಲ್ಲೇ ಒಂದು ತಿಂಗಳ ವೇತನವನ್ನು ಪಾವತಿಸಲಾಗುವುದು
ಜಯಶ್ರೀ ಪಾಟೀಲ ಹಿರೇಕೆರೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.