ತಡಸ: ರೈತಾಪಿ ವರ್ಗದ ಜೀವಾಳ ಮತ್ತು ಆರಾಧಿಸುವ ಹಬ್ಬವೆಂದರೆ ಸೀಗೆ ಹುಣ್ಣಿಮೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರಿಗಿದು ಹಬ್ಬವೇ ಸರಿ. ಈ ಬಾರಿ ಅ.27 ರಂದು ಸೀಗೆ ಹುಣ್ಣಿಮೆಯಿದ್ದು ಅಂದು ಗ್ರಹಣ ಇರುವ ಕಾರಣ ಬಹುತೇಕರು ಶುಕ್ರವಾರ ಆಚರಿಸುತ್ತಿದ್ದಾರೆ.
ಎಲ್ಲವನ್ನೂ ಕರುಣಿಸುವ ಭೂಮಿ ತಾಯಿಗೆ ಸೀಗೆ ಹುಣ್ಣಿಮೆಯಂದು ಚರಗ ಚೆಲ್ಲುವ (ಬಗೆಬಗೆ ಖಾದ್ಯ) ಮೂಲಕ ಆಕೆಯನ್ನು ಸಂತುಷ್ಟಪಡಿಸಲಾಗುವುದು ಎಂದು ನಂಬಲಾಗಿದೆ. ಮತ್ತೊಂದು ಕಡೆ ಇದು ಭೂಮಿ ತಾಯಿಗೆ ಸೀಮಂತದ ಕ್ಷಣವೂ ಎಂದೂ ಹೇಳಲಾಗುತ್ತದೆ.
ಸೀಗಿ ಹುಣ್ಣಿಮೆಗೆ ಒಂದು ವಾರ ಇರುವ ಮೊದಲೇ ರೈತರ ಮನೆಯಲ್ಲಿ ಹಬ್ಬದ ಸಡಗರ ಮನೆಮಾಡಿರುತ್ತದೆ. ಕೆಮ್ಮಣ್ಣು ಸುಣ್ಣದ ಚಿತ್ತಾರದ ಸೀಗಿ ಹುಣ್ಣಿಮೆ ಬುಟ್ಟಿ ಎಂದೇ ಕರೆಯುವ ಬಿದಿರಿನ ಬುಟ್ಟಿಯ ಮೇಲೆ ಚಿತ್ತಾಕರ್ಷಕ ಚಿತ್ತಾರ ಬರೆಯಲಾಗುತ್ತದೆ. ಆ ಬುಟ್ಟಿಯಲ್ಲಿಯೇ ಭೂತಾಯಿಗೆ ಬಗೆಬಗೆ ಖಾದ್ಯಗಳನ್ನು ಹೊತ್ತೊಯ್ಯಲಾಗುತ್ತದೆ.
ಸೀಗೆ ಹುಣ್ಣಿಮೆಯ ಹಿಂದಿನ ದಿನವೇ ಪಾಂಡವರನ್ನು ಪ್ರತಿಷ್ಠಾಪಿಸಲಾಗುತ್ತೆ. ಕಳ್ಳನ ಕಲ್ಲು ಎಂದೂ ಇನ್ನೊಂದು ಕಲ್ಲನ್ನು ಇರಿಸಲಾಗುತ್ತದೆ. ಐದು ಕಲ್ಲುಗಳನ್ನು ಕ್ರಮವಾಗಿ ಹೊಂದಿಸಿ, ಅವುಗಳನ್ನೇ ಪಂಚ ಪಾಂಡವರು ಎಂಬರ್ಥದಲ್ಲಿ ಪೂಜಿಸಲಾಗುತ್ತದೆ. ಆ ಕಲ್ಲುಗಳಿಗೆ ಸುಣ್ಣ ಬಳಿದು, ಕೆಮ್ಮಣ್ಣಿನ ಚುಕ್ಕೆ ಇಡಲಾಗುತ್ತದೆ. ಮಾರನೇ ದಿನ ಅವುಗಳ ಪೂಜೆ ಮಾಡಲಾಗುತ್ತದೆ. ಈ ಪಾಂಡವರ ಜತೆಗೆ ಕಳ್ಳನನ್ನೂ ಕೂರಿಸುವ ಆಚರಣೆ ಇದೆ. ಬನ್ನಿ ಎಲೆಯಲ್ಲಿ ಇವರೆಲ್ಲರಿಗೂ ನೈವೇದ್ಯ ಮಾಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಇದು ಸಂಪ್ರದಾಯವೂ ಹೌದು.
ಜಮೀನಿನ ಫಸಲು ಚೆನ್ನಾಗಿ ಬರಲಿ, ಕೀಟಗಳಿಂದ ರಕ್ಷಣೆ ಸಿಗಲಿ, ನಷ್ಟ ಸಂಭವಿಸದಿರಲಿ ಎಂಬರ್ಥದಲ್ಲಿ ಪಂಚ ಕಲ್ಲುಗಳನ್ನು ಆರಾಧಿಸಲಾಗುತ್ತದೆ. ಮತ್ತೊಂದೆಡೆ ಮಹಾಭಾರತದ ಪಾಂಡವರಿಗೆ ಬಂದ ಸ್ಥಿತಿಯನ್ನೂ ಈ ಹಬ್ಬ ಸೂಚಿಸುತ್ತದೆ.
ಸೀಗೆ ಹುಣ್ಣಿಮೆ ದಿನ ಚರಗ ಚೆಲ್ಲುವುದೇ ವಿಶೇಷ. ಬೆಳಗಿನ ಜಾವ, ಭೂತಾಯಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಬೇಕಾದ ಖಾದ್ಯಗಳನ್ನು ಒಂದು ಮಣ್ಣಿನ ಮಡಕೆಯಲ್ಲಿ ಹಸಿ ಹಸಿಯಾಗಿಯೇ ಹಾಕಿ, ಅಂದರೆ, ತರಕಾರಿ, ಹಿಟ್ಟು, ಧಾನ್ಯ, ಹಸಿ ಎಣ್ಣೆ ಹೀಗೆ ಎಲ್ಲವನ್ನು ಮಿಶ್ರಣ ಮಾಡಿ, ಹೊಲಕ್ಕೆ ಹೋಗಿ, ‘ಹೂಲಿಗೋ ಹೂಲಿಗೋ ಹೂಲಿಗೋ..’ ಎಂದು ಹೇಳುತ್ತ ಚರಗವನ್ನು ಚೆಲ್ಲಲಾಗುತ್ತದೆ. ಚರಗ ಚೆಲ್ಲುವಾಗ ಗುಳ್ಳಗಾಯಿಯನ್ನೂ ಬಳಸಲಾಗುತ್ತದೆ ಎನ್ನುತ್ತಾರೆ ರೈತರು.
Highlights - ಚರಗ ಚೆಲ್ಲಿ ಸಂಭ್ರಮಿಸುವ ರೈತರು ಪಾಂಡವರಿಗೆ ಪೂಜೆ ಸಲ್ಲಿಕೆ ಬನ್ನಿ ಎಲೆಯಲ್ಲಿ ನೈವೇದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.