ADVERTISEMENT

ರಟ್ಟೀಹಳ್ಳಿ | ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:30 IST
Last Updated 25 ಅಕ್ಟೋಬರ್ 2024, 15:30 IST
ರಟ್ಟೀಹಳ್ಳಿ ಪಟ್ಟಣದ ಪಡಿತರ ವಿತರಣೆ ಕೇಂದ್ರದಲ್ಲಿ ರೇಷನ್ ಪಡೆಯಲು ಜನರು ಸರತಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿರುವುದು 
ರಟ್ಟೀಹಳ್ಳಿ ಪಟ್ಟಣದ ಪಡಿತರ ವಿತರಣೆ ಕೇಂದ್ರದಲ್ಲಿ ರೇಷನ್ ಪಡೆಯಲು ಜನರು ಸರತಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿರುವುದು    

ರಟ್ಟೀಹಳ್ಳಿ: ಪಟ್ಟಣದಲ್ಲಿರುವ ಜನತಾ ಬಜಾರ ಹಾಗೂ ಅಕ್ಕಿಪೇಟೆಯಲ್ಲಿರುವ ಸೊಸೈಟಿ ಮೂಲಕ ಅ.18ರಿಂದ ಪಡಿತರ ನೀಡಲು ಪ್ರಾರಂಭಿಸಿದ್ದರೂ ಇದುವರೆಗೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಪಡಿತರ ವಿತರಣೆಯಾಗಿದೆ.  

ಜನರು ಬೆಳಿಗ್ಗೆ 6 ಗಂಟೆಗೆ ಸರತಿಯಲ್ಲಿ ಬಂದು ನಿಲ್ಲುತ್ತಿದ್ದು ರಾತ್ರಿವರೆಗೂ ಕಾಯುವ ಪರಿಸ್ಥಿತಿ ಇದೆ. ಕಾರಣವೇನೆಂದರೆ ಸರ್ವರ್ ಸಮಸ್ಯೆ ನಿತ್ಯ ರೇಷನ್ ಕೇಂದ್ರಗಳಿಗೆ ಬಂದು ರೇಷನ್ ಪಡೆಯದೆ ಮರುಳುತ್ತಿರುವ ಜನ ಆಹಾರ ಇಲಾಖೆಯ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟ ಆಹಾರ ನಿರೀಕ್ಷಕರು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮವಹಿಸಿ ಪಡಿತರಕ್ಕಾಗಿ ಅಲೆದಾಡುವುದನ್ನು ತಪ್ಪಿಸಬೇಕು ಎನ್ನುವುದು ಜನಸಾಮಾನ್ಯರ ಆಗ್ರಹವಾಗಿದೆ.

‘ಕಳೆದ ಐದಾರು ದಿನಗಳಿಂದ ರೇಷನ್ ಪಡೆಯಲು ಮನೆಯ ಕೆಲಸ, ಹೊಲ, ಮನೆ ಕೆಲಸ ಬಿಟ್ಟು ಅಲೆದಾಡುತ್ತಿದ್ದೇನೆ. ಗಂಟೆ ಗಟ್ಟಲೆ ಕಾದರೂ ಸರ್ವರ್ ಸಮಸ್ಯೆ ಇದೆ ಎನ್ನುತ್ತಾರೆ ಹೀಗಾಗಿ ರೇಷನ್ ಪಡೆಯಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಶಾಂತಮ್ಮ ಉಪ್ಪಾರ.

ADVERTISEMENT

‘ಮುಂಜಾನೆ 9 ಗಂಟೆಗೆ ಬಂದು ಸರದಿಯಲ್ಲಿ ನಿಂತಿರುವ ಮಧ್ಯಾಹ್ನ 2 ಗಂಟೆಯಾದರೂ ಸರ್ವರ್ ಇಲ್ಲ ಎನ್ನುತ್ತಿದ್ದಾರೆ. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಜನರ ಸಮಸ್ಯೆಯನ್ನು ಬಗೆಹರಿಸಬೇಕು’ ಎನ್ನುತ್ತಾರೆ ಇಲ್ಲಿನ ನಿವಾಸಿ ಜಗದೀಶ ದೊಡ್ಡಮನಿ.

ಸಮಸ್ಯೆ ಕುರಿತು ರಟ್ಟೀಹಳ್ಳಿ ಆಹಾರ ನಿರೀಕ್ಷಕ ಸಿ.ಕೆ. ಹೆದ್ದಳ್ಳಿ ಮಾತನಾಡಿ, ‘ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರಿಗೆ ಈ ತಿಂಗಳಲ್ಲಿ ಪಡಿತರ ಪಡೆಯಲು ತೊಂದರೆಯಾಗಿದೆ. ಹೀಗಾಗಿ ಇಲಾಖೆಯಿಂದ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ವಿತರಣೆ ಮಾಡಲು ಇಲಾಖೆಯವರು ಆದೇಶಿಸಿಸಿರುತ್ತಾರೆ. ಅದರಂತೆ ಪಡಿತರ ವಿತರಣಾ ಕೇಂದ್ರಗಳಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.