ಹಾವೇರಿ: ‘ಲಿಂ.ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವದ ಅಂಗವಾಗಿ ‘ಶರಣ ಸಂಸ್ಕೃತಿ ಉತ್ಸವ–2020’ ಕಾರ್ಯಕ್ರಮವನ್ನು ನಗರದ ಹೊಸಮಠದ ಬಸವಕೇಂದ್ರದಲ್ಲಿ ಡಿ.20ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹೊಸಮಠವು 35 ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ.ಪ್ರತಿ ವರ್ಷ ಮೂರ್ನಾಲ್ಕು ದಿನಗಳು ನಡೆಯುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಒಂದೇ ದಿನ ಆಚರಿಸಲು ನಿರ್ಧರಿಸಿದ್ದೇವೆ. ಹಾವೇರಿ ಹೊಸಮಠವು ಹಲವು ಮಠಗಳಿಗೆ ವೈಚಾರಿಕತೆಯ ಸ್ಫೂರ್ತಿ ನೀಡಿದೆ’ ಎಂದರು.
ಸಹಜ ಶಿವಯೋಗ:
ಬೆಳಿಗ್ಗೆ 7ಕ್ಕೆ ಹೊಸಮಠದ ಆವರಣದಲ್ಲಿ ‘ಸಹಜ ಶಿವಯೋಗ’ ಕಾರ್ಯಕ್ರಮವಿದೆ. ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದು, ಹೋತನಹಳ್ಳಿಯ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ ಮತ್ತು ದಾವಣಗೆರೆಯ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಬೆಳಿಗ್ಗೆ 10.30ಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಬಸವತತ್ವ ಧ್ವಜಾರೋಹಣ ನೆರವೇರಿಸಲಿದ್ದು, ಡಾ.ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ. ಅಗಡಿ–ಗುತ್ತಲದ ಪ್ರಭುಸ್ವಾಮಿಮಠದ ಗುರುಸಿದ್ಧ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಶಸ್ತಿ ಪ್ರದಾನ:
ಸಂಜೆ 6.30ಕ್ಕೆ ‘ವಿಚಾರ ಕೂಟ’ದಲ್ಲಿ ‘21ನೇ ಶತಮಾನಕ್ಕೆ ಬಸವತತ್ವ’ ಕುರಿತು ರಂಜಾನ ದರ್ಗಾ ವಿಷಯ ಮಂಡಿಸಲಿದ್ದಾರೆ. ಡಾ.ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಲಿದ್ದು, ಸವಣೂರಿನ ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬಸವ ಶಾಂತಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ಈ ಬಾರಿಯ ‘ಡಾ.ಶಿಮುಶ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.
ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಧಾರವಾಡ ಕೆ.ಎಂ.ಎಫ್. ಅಧ್ಯಕ್ಷ ಬಸವರಾಜ ಅರಬಗೊಂಡ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಂದ್ರ ಕಟಕೋಳ, ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಎಪಿಎಂಸಿ ಸದಸ್ಯ ರುದ್ರೇಶ ಚಿನ್ನಣ್ಣನವರ, ಬಸವಕೇಂದ್ರ ಅಧ್ಯಕ್ಷರಾದ ಚಂದ್ರಶೇಖರ ಶಿಶುನಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.