ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಯಾಸೀರ್‌ಅಹ್ಮದ್ ಖಾನ್ ಪಠಾಣ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಬಂಡಾಯದ ಬಿಸಿ ತಟ್ಟಿದೆ.
ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಡ ಹೆಚ್ಚಿತ್ತು. ಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾಗಿ ಕೆಲಸ ಮಾಡಿದ್ದ ಸೈಯದ್ ಅಜ್ಜಂಪೀರ್ ಖಾದ್ರಿ ಹಾಗೂ ಯಾಸೀರ್‌ಅಹ್ಮದ್ ಖಾನ್ ಪಠಾಣ ಇಬ್ಬರೂ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದರು. ಆದರೆ, ಈಗ ಯಾಸೀರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ, ಟಿಕೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಕೆಟ್‌ಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಅಜ್ಜಂಪೀರ್ ಖಾದ್ರಿ, ಶಿಗ್ಗಾವಿಗೆ ವಾಪಸು ಬರುತ್ತಿದ್ದಾರೆ. ಗುರುವಾರ ರಾತ್ರಿಯೇ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಬೆಂಬಲಿಗರ ಜೊತೆ ಚರ್ಚಿಸಿ, ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಬೇಕಾ ಅಥವಾ ಬೇರೆಯವರಿಗೆ ಬೆಂಬಲ ಸೂಚಿಸಬೇಕಾ? ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಆಪ್ತರು ತಿಳಿಸಿದ್ದಾರೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ನನಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಆದರೆ, ಟಿಕೆಟ್ ಕೈ ತಪ್ಪಿದೆ. ನನಗೆ ಆಗಿರುವ ಅನ್ಯಾಯವನ್ನು ಕಾರ್ಯಕರ್ತರ ಬಳಿ ಹೇಳಿಕೊಳ್ಳುತ್ತೇವೆ. ಅವರು ಏನು ತೀರ್ಮಾನ ತಿಳಿಸುತ್ತಾರೆಯೋ ಅದೇ ರೀತಿ ಮುಂದುವರಿಯುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.