ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ, ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು – ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ‘ಕಮಲ’ದ ಭದ್ರಕೋಟೆಯಲ್ಲಿ ಈ ಬಾರಿಯಾದರೂ ‘ಕೈ’ ಬಾವುಟ ಹಾರಾಡುತ್ತಾ ಅಥವಾ ಅಪ್ಪನ ಕ್ಷೇತ್ರವನ್ನು ಮಗ ಉಳಿಸಿಕೊಳ್ಳುತ್ತಾರಾ ಎಂಬ ಚರ್ಚೆಗಳು ನಡೆಯುತ್ತಿವೆ.
ಬುಧವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಮತದಾನ ಪ್ರಕ್ರಿಯೆ ನಡೆದಿದ್ದು, 1.91 ಲಕ್ಷ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 80.72ರಷ್ಟು ಮತದಾನ ಪ್ರಮಾಣ ದಾಖಲಾಗಿದ್ದು, ಮತದಾರರ ಅಂತಿಮ ತೀರ್ಪು ಏನು ಎಂಬುದು ನವೆಂಬರ್ 23ರಂದು ನಡೆಯುವ ಎಣಿಕೆಯಿಂದ ಗೊತ್ತಾಗಬೇಕಿದೆ.
ಮತದಾನ ಮುಗಿಯುತ್ತಿದ್ದಂತೆ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಫಲಿತಾಂಶದ ಬಗ್ಗೆಯೇ ಮಾತುಕತೆ ನಡೆಯುತ್ತಿದೆ. ಅಕ್ಕ–ಪಕ್ಕದ ತಾಲ್ಲೂಕು ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಜನರು, ಶಿಗ್ಗಾವಿ ಕ್ಷೇತ್ರದ ಜನರಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ‘ಯಾರು ಗೆಲ್ಲುತ್ತಾರೆ’ ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ಚುನಾವಣೆಯ ಫಲಿತಾಂಶದ ಬಗ್ಗೆಯೇ ಸುದ್ದಿಗಳು ಹರಿದಾಡುತ್ತಿವೆ.
‘ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಹಣಾಹಣಿ ಇದೆ. ಮತದಾನದ ಪ್ರಮಾಣ ಗಮನಿಸಿದರೆ, ಕನಿಷ್ಠ 4 ಸಾವಿರ ಹಾಗೂ ಗರಿಷ್ಠ 8 ಸಾವಿರ ಮತಗಳ ಅಂತರದಲ್ಲಿ ಅಭ್ಯರ್ಥಿ ಗೆಲ್ಲಬಹುದು’ ಎಂಬುದು ಮತದಾರರ ಲೆಕ್ಕಾಚಾರ.
ಮತಗಟ್ಟೆವಾರು ಲೆಕ್ಕಾಚಾರ: ಕ್ಷೇತ್ರದ 241 ಮತಗಟ್ಟೆಯಲ್ಲಿ ದಾಖಲಾಗಿರುವ ಮತದಾನದ ಪ್ರಮಾಣವನ್ನು ಸಂಗ್ರಹಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್, ಪರಿಶೀಲನೆ ನಡೆಸುತ್ತಿದೆ. ಮತಗಟ್ಟೆ ವ್ಯಾಪ್ತಿಯಲ್ಲಿ ವಾಸವಿರುವ ಮತದಾರರ ಜಾತಿ ಹಾಗೂ ಇತರೆ ಅಂಶಗಳನ್ನು ಆಧರಿಸಿ ಮತಗಳ ಲೆಕ್ಕಾಚಾರ ನಡೆದಿದೆ.
‘ಶಿಗ್ಗಾವಿ ತಾಲ್ಲೂಕಿನ ತಡಸ ಹಾಗೂ ದುಂಡಶಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳಿವೆ. ಹುಲಗೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತಗಳು ಹೆಚ್ಚಿವೆ. ಸವಣೂರು ತಾಲ್ಲೂಕಿನಲ್ಲಿ ಕಾರಡಗಿಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ಹುರುಳಿಕುಪ್ಪಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿಗೆ ಅವಕಾಶಗಳು ಹೆಚ್ಚಿವೆ. ಬಂಕಾಪುರ, ಶಿಗ್ಗಾವಿ ಹಾಗೂ ಸವಣೂರು ಪುರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಭಾವವಿದೆ’ ಎಂಬ ಚರ್ಚೆಗಳು ನಡೆಯುತ್ತಿವೆ.
ಪಠಾಣ ಪರ ನಿಂತಿದ್ದ ರಾಜ್ಯ ಸರ್ಕಾರ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಪರವಾಗಿ ಇಡೀ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ಪ್ರಚಾರ ಮಾಡಿದೆ. ಕಳೆದ ಬಾರಿ ಸೋಲು ಅನುಭವಿಸಿದ್ದ ಪಠಾಣ, ಈ ಬಾರಿ ಗ್ಯಾರಂಟಿ ಯೋಜನೆ ಹಾಗೂ ಅನುಕಂಪದ ಮೇಲೆ ಮತ ಕೇಳಿದ್ದರು.
ಸಚಿವರು, ತಮ್ಮ ಜಾತಿಯ ಜನರಿರುವ ಪ್ರದೇಶಗಳಲ್ಲಿ ಸುತ್ತಾಡಿ ‘ಕೈ’ ಬಲಪಡಿಸಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪಠಾಣ ಅವರು ನೆಪಕ್ಕಷ್ಟೇ ಅಭ್ಯರ್ಥಿಯಾಗಿದ್ದರು. ಅವರ ಗೆಲುವಿನ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡಿತ್ತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು (ಮತದಾನದ ಮುನ್ನಾದಿನವೇ ಮಹಿಳೆಯರ ಖಾತೆಗೆ ₹ 2,000 ಜಮೆ) ಕ್ಷೇತ್ರದಲ್ಲಿ ಕಾಂಗ್ರೆಸ್ ಕೈ ಹಿಡಿಯುವ ಲಕ್ಷಣಗಳಿವೆ. ಜೊತೆಗೆ, ಕ್ಷೇತ್ರದಲ್ಲಿ ಬದಲಾವಣೆ ಗಾಳಿಯೂ ಬೀಸುತ್ತಿರುವುದು ಕಾಂಗ್ರೆಸ್‌ಗೆ ಲಾಭ ತರುವ ಅಭಿಪ್ರಾಯವಿದೆ.
ಭರತ್ ಗೆಲುವಿಗೆ ಹೆಚ್ಚು ಅವಕಾಶ: ತಂದೆಯ ಅಭಿವೃದ್ಧಿ ಕೆಲಸಗಳು ಹಾಗೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಈ ಬಾರಿ ಭರತ್ ಬೊಮ್ಮಾಯಿ ಅವರಿಗೆ ಗೆಲುವಿನ ಅವಕಾಶಗಳು ಹೆಚ್ಚಿವೆ. ನಾಲ್ಕು ಬಾರಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಕ್ಷೇತ್ರದ ಪ್ರಮುಖ ಮುಖಂಡರ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ.
ಬಂಡಾಯದ ನಡುವೆಯೂ ಮುಖಂಡರ ಮನವೊಲಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಬಂಕಾಪುರದಲ್ಲಿ ಮುಸ್ಲಿಂ ಸಮುದಾಯದವರ ಸಭೆ ನಡೆಸಿದ್ದ ಅವರು, ‘ನಿಮ್ಮೊಂದಿಗೆ ನಾನಿದ್ದೇನೆ. ಮಗನನ್ನು ಗೆಲ್ಲಿಸಿ’ ಎಂದು ಕೋರಿದ್ದರು.
ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕೆಲಸಗಳು ಕಣ್ಣ ಮುಂದಿವೆ. ಅವರ ಕೆಲಸವನ್ನು ಮೆಚ್ಚಿ ಜನರು ಭರತ್ ಅವರಿಗೆ ಹೆಚ್ಚು ಮತ ಹಾಕಿದ್ದಾರೆ. ಬಿಜೆಪಿ ಗೆಲ್ಲಲಿದೆ.–ಅರುಣಕುಮಾರ ಪೂಜಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಶಿಗ್ಗಾವಿ ಕ್ಷೇತ್ರದಲ್ಲಿ ಬದಲಾವಣೆ ಬಯಸುತ್ತಿರುವ ಜನರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕೈ ಅಭ್ಯರ್ಥಿ ಗೆಲುವು ನಿಶ್ಚಿತ.–ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಕುರುಡಾಗಿ ಕುಣಿದ ಕಾಂಚಾಣ?
‘ಉಪಚುನಾವಣೆ ಕಣದಲ್ಲಿ ಕುರುಡು ಕಾಂಚಾಣದ ಹಾವಳಿ ಜೋರಾಗಿ ನಡೆದಿದೆ’ ಎಂದು ಮತದಾರರು ಆರೋಪಿಸುತ್ತಿದ್ದಾರೆ.
‘ಹಣ– ಹೆಂಡ ಹಂಚಿ ಶಾಸಕರಾಗಿ ಆಯ್ಕೆಯಾದರು’ ಎಂದು ಕಾಂಗ್ರೆಸ್ ಅಭ್ಯರ್ಥಿ ಪಠಾಣ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಸವರಾಜ ಬೊಮ್ಮಾಯಿ ‘ಕ್ಷೇತ್ರಕ್ಕೆ ತಂಡೋಪತಂಡವಾಗಿ ಬಂದಿರುವ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಬರಿಗೈಯಲ್ಲಿ ಬರುತ್ತಾರಾ? ಹಣ ಹಂಚಿಕೆ ಮಾಹಿತಿ ನಮಗಿದೆ’ ಎಂದಿದ್ದರು.
‘ಮತದಾನಕ್ಕೂ ಎರಡು ದಿನಗಳ ಮುನ್ನವೇ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಹಣದ ಕಂತೆಗಳು ತಲುಪಿವೆ. ಎಲ್ಲರೂ ಪ್ರತಿ ಮತಕ್ಕೆ ₹ 2000 ನೀಡಿದ್ದಾರೆ. ಜನರು ಎರಡೂ ಕಡೆಯಿಂದಲೂ ಹಣ ಪಡೆದುಕೊಂಡಿದ್ದಾರೆ. ಮತದಾನ ಕೇಂದ್ರದಲ್ಲೂ ಹಣದ ಬಗ್ಗೆ ಬಹಿರಂಗವಾಗಿಯೇ ಚರ್ಚೆ ನಡೆಯುತ್ತಿತ್ತು. ಇಂಥ ಚುನಾವಣೆಯನ್ನು ನಾವು ಹಿಂದೆ ನೋಡಿಲ್ಲ. ಮುಂದೆಯೂ ನೋಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಅಭ್ಯರ್ಥಿಗಳು ನಿರಾಳ; ಹೀಗಿತ್ತು ದಿನಚರಿ
ಉಪಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ರೀತಿಯಲ್ಲಿ ಅಭ್ಯರ್ಥಿಗಳು ಪ್ರಚಾರ ಶುರು ಮಾಡಿದ್ದರು. ಬುಧವಾರ ಮತದಾನ ಮುಗಿದ ನಂತರ ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗುರುವಾರ ಹಲವೆಡೆ ಭೇಟಿ ನೀಡಿ ಕಾಲ ಕಳೆದರು. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಬೆಳಿಗ್ಗೆ ದಿನಪತ್ರಿಕೆಗಳನ್ನು ಓದಿ ಕುಟುಂಬದವರ ಜೊತೆ ಕಾಲ ಕಳೆದರು.
ರಾಣೆಬೆನ್ನೂರಿನ ಗುಡ್ಡದ ಆನ್ವೇರಿಯಲ್ಲಿರುವ ಕುರವತ್ತಿ ಬಸವೇಶ್ವರ ಸ್ಟೋನ್ ಕ್ರಷರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ನಂತರ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಮತದಾನದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಅವರು ಸ್ವಂತ ಊರಾದ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಕುಟುಂಬಸ್ಥರ ಜೊತೆ ಕಾಲ ಕಳೆದರು. ಮನೆಗೆ ಬಂದ ಕಾರ್ಯಕರ್ತರನ್ನು ಭೇಟಿಯಾದರು. ಅವರ ಜೊತೆ ಮತಗಳ ಲೆಕ್ಕಾಚಾರದ ಬಗ್ಗೆ ಚರ್ಚಿಸಿದರು.
ಮಗನ ಪರ ಪ್ರಚಾರ ನಡೆಸಿದ್ದ ಸಂಸದ ಬಸವರಾಜ ಬೊಮ್ಮಾಯಿ ಅವರು ಹಾವೇರಿಯಲ್ಲಿ ಪರಿಚಯಸ್ಥರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಶಿಗ್ಗಾವಿಯಲ್ಲಿ ಆಪ್ತರ ಸಭೆ ನಡೆಸಿ ಮತಗಟ್ಟೆವಾರು ಮಾಹಿತಿ ಪಡೆದುಕೊಂಡರು.
ಉಪ ಚುನಾವಣೆ; ಮತದಾನದ ವಿವರ
2,37,525 ಒಟ್ಟು ಮತಗಳು
1,91,728 ಚಲಾವಣೆಯಾದ ಮತಗಳು
99,241 ಮತದಾನ ಮಾಡಿದ ಪುರುಷರು
92,485 ಮತದಾನ ಮಹಿಳೆಯರು
2 ಲಿಂಗತ್ವ ಅಲ್ಪಸಂಖ್ಯಾತರು
ಚುನಾವಣೆವಾರು ಮತದಾನ ಪ್ರಮಾಣ
2024ರ ಉಪಚುನಾವಣೆ; ಶೇ 80.78
2023ರ ಚುನಾವಣೆ; ಶೇ 80.46
2018ರ ಚುನಾವಣೆ; ಶೇ 80.35
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.