ADVERTISEMENT

ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಸೋಲು–ಗೆಲುವಿನ ಲೆಕ್ಕಾಚಾರ, ಎತ್ತುಗಳ ‘ಬೆಟ್ಟಿಂಗ್’

ಮತ ಎಣಿಕೆ ನಾಡಿದ್ದು

ಸಂತೋಷ ಜಿಗಳಿಕೊಪ್ಪ
Published 21 ನವೆಂಬರ್ 2024, 6:10 IST
Last Updated 21 ನವೆಂಬರ್ 2024, 6:10 IST
ಕಾಂಗ್ರೆಸ್‌ ಮತ್ತು ಬಿಜೆಪಿ
ಕಾಂಗ್ರೆಸ್‌ ಮತ್ತು ಬಿಜೆಪಿ   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದ್ದು, ಬೆಟ್ಟಿಂಗ್ ಸಹ ಜೋರಾಗಿ ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಜನರು, ಹಣ ಹಾಗೂ ಇತರೆ ವಸ್ತುಗಳನ್ನು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಅವರು ಕಣದಲ್ಲಿದ್ದಾರೆ. ಉಪ ಚುನಾವಣೆ ಆಗಿದ್ದರಿಂದ, ಎರಡೂ ಪಕ್ಷಗಳಿಂದ ಪ್ರಚಾರವೂ ಜೋರಾಗಿತ್ತು. ನ. 13ರಂದು ಮತದಾನ ನಡೆದಿದ್ದು, ಅಂದಿನಿಂದಲೇ ಕ್ಷೇತ್ರದಲ್ಲಿ ಸೋಲು–ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.

‘ಬಸವರಾಜ ಬೊಮ್ಮಾಯಿ ಅವರು ನಾಲ್ಕು ಅವಧಿಯಲ್ಲಿ ಶಾಸಕರಾಗಿದ್ದರು. ಮುಖ್ಯಮಂತ್ರಿಯೂ ಆಗಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಇದೀಗ, ಮಗ ಭರತ್‌ನನ್ನು ಕ್ಷೇತ್ರದ ಜನರು ಗೆಲ್ಲಿಸಲಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು, ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ADVERTISEMENT

‘ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಜನರು, ಬದಲಾವಣೆ ಬಯಸಿದ್ದಾರೆ. ಈ ಬಾರಿ ಬೊಮ್ಮಾಯಿ ಅವರಿಗೆ ಸೋಲು ಆಗಲಿದೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ಪಠಾಣ ಗೆಲುವು ಸಾಧಿಸಲಿದ್ದಾರೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೆಟ್ಟಿಂಗ್ ಮೂಲಕ ಪ್ರತಿ ಸವಾಲು ಹಾಕುತ್ತಿದ್ದಾರೆ.

ಕ್ಷೇತ್ರದ ಗ್ರಾಮವೊಂದರಲ್ಲಿ ಇಬ್ಬರು ರೈತರು, ತಮ್ಮ ಎತ್ತುಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಬೆಟ್ಟಿಂಗ್‌ ಕಟ್ಟಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಎತ್ತುಗಳ ವಿಡಿಯೊ ಚಿತ್ರೀಕರಣ ಮಾಡಿರುವ ವ್ಯಕ್ತಿ, ‘ಇವು ಕಾಂಗ್ರೆಸ್ ಎತ್ತುಗಳು. ಅವು ಬಿಜೆಪಿ ಎತ್ತುಗಳು. ಇಬ್ಬರೂ ರೈತರು ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದಾಗಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ’ ಎಂದು ಮಾತನಾಡಿದ್ದರು.

ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಜನರು, ‘ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ–ಕಾಂಗ್ರೆಸ್ ನೇರ ಹಣಾಹಣಿ ಇದೆ. ಜನರು ಯಾವ ರೀತಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ನೋಡಿ’ ಎಂದು ಬರೆದುಕೊಂಡಿದ್ದಾರೆ.

ಮತಯಂತ್ರಗಳನ್ನು ಇರಿಸಿರುವ ಹಾವೇರಿ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿರುವುದು

ಹಣದ ಬೆಟ್ಟಿಂಗ್: ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಹಣವನ್ನೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

‘ಚುನಾವಣೆಯ ಗೆಲುವು–ಸೋಲಿನ ಬಗ್ಗೆಯೇ ನಿತ್ಯವೂ ಚರ್ಚೆ ನಡೆಯುತ್ತಿದೆ. ಬಸ್ ನಿಲ್ದಾಣ, ಅಂಗಡಿಗಳು, ಊರಿನ ಕಟ್ಟೆಗಳು, ಹೊಲಗಳಲ್ಲಿ ನಿತ್ಯವೂ ಚುನಾವಣೆಯದ್ದೇ ಮಾತುಕತೆ ಇದೆ. ತಮ್ಮ ಅಭ್ಯರ್ಥಿ ಗೆಲ್ಲುವುದಾಗಿ ವಾದಿಸುವ ಜನರು, ಹಣ, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಬೆಟ್ಟಿಂಗ್ ಕಟ್ಟುತ್ತಿದ್ದಾರೆ’ ಎಂದು ಮತದಾರರು ಹೇಳಿದರು.

‘ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ 10ಕ್ಕೂ ಹೆಚ್ಚು ಸಚಿವರು ಕ್ಷೇತ್ರಕ್ಕೆ ಬಂದಿದ್ದರು. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಹುದೆಂಬ ಲೆಕ್ಕಾಚಾರ ಕಾರ್ಯಕರ್ತರದ್ದು. ಅದೇ ಕಾರಣಕ್ಕೆ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಾಗಿ ಅವರೆಲ್ಲರೂ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ಮತ ಎಣಿಕೆ ನಾಡಿದ್ದು: ಉಪಚುನಾವಣೆಯ ಮತದಾನದ ಮತ ಎಣಿಕೆ ಪ್ರಕ್ರಿಯೆ ನ. 23ರಂದು ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಭದ್ರತಾ ಕೊಠಡಿಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ. ಕಾಲೇಜು ಹಾಗೂ ಕೊಠಡಿ ಸುತ್ತಮುತ್ತ ಬಿಎಸ್‌ಎಫ್‌ (ಗಡಿ ಭದ್ರತಾ ಪಡೆ) ಯೋಧರು ಭದ್ರತೆ ಒದಗಿಸಿದ್ದಾರೆ. ಮತ ಎಣಿಕೆ ದಿನವೂ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.

ಉಪ ಚುನಾವಣೆ ಮತದಾನದ ವಿವರ
  • 2,37,525: ಒಟ್ಟು ಮತಗಳು

  • 1,91,728: ಚಲಾವಣೆಯಾದ ಮತಗಳು

  • 99,241: ಮತದಾನ ಮಾಡಿದ ಪುರುಷರು

  • 92,485: ಮತದಾನ ಮಹಿಳೆಯರು

  • 2: ಲಿಂಗತ್ವ ಅಲ್ಪಸಂಖ್ಯಾತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.