ADVERTISEMENT

ಬಿಜೆಪಿ ಶಾಸಕ ಮುಕ್ತ ಜಿಲ್ಲೆ ಹಾವೇರಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:07 IST
Last Updated 23 ನವೆಂಬರ್ 2024, 23:07 IST
<div class="paragraphs"><p>ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜೇತರಾದ ಯಾಸೀರ ಅಹಮದ್ ಖಾನ್ ಪಠಾಣ ಅವರಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ವಿತರಿಸಿದರು</p></div>

ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜೇತರಾದ ಯಾಸೀರ ಅಹಮದ್ ಖಾನ್ ಪಠಾಣ ಅವರಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ವಿತರಿಸಿದರು

   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ, ಹಾವೇರಿ ಜಿಲ್ಲೆ ಬಿಜೆಪಿ ಶಾಸಕ ಮುಕ್ತ ಜಿಲ್ಲೆ ಎನಿಸಿಕೊಂಡಿದೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಬಸವರಾಜ ಬೊಮ್ಮಾಯಿ ಒಬ್ಬರೇ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ, ಶ್ರೀನಿವಾಸ್ ಮಾನೆ, ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ, ಬಸವರಾಜ ಶಿವಣ್ಣನವರ ವಿಧಾನಸಭೆ ಪ್ರವೇಶಿಸಿದ್ದರು.

ADVERTISEMENT

ಇದೀಗ, ಶಿಗ್ಗಾವಿ ಕ್ಷೇತ್ರ ಸಹ ಕಾಂಗ್ರೆಸ್‌ ತೆಕ್ಕೆಗೆ ಬಂದಿದೆ. ಈ ಮೂಲಕ ಹಾವೇರಿ ಜಿಲ್ಲೆ, ‘ಬಿಜೆಪಿ ಶಾಸಕ ಮುಕ್ತ’ ಜಿಲ್ಲೆಯಾಗಿ ಮಾರ್ಪಟ್ಟಿದೆ.

ಜಿ.ಪಂ. ಸದಸ್ಯರ ಮಗ ಪಠಾಣ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್‌ನ ಯಾಸೀರ ಅಹಮದ್ ಖಾನ್ ಪಠಾಣ, ಅಖಂಡ ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಮೊಹಮ್ಮದ್ ಖಾನ್ ಪಠಾಣ ಅವರ ಮಗ.

ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಪಠಾಣ ಕುಟುಂಬ, ಕಾಂಗ್ರೆಸ್ ಪಕ್ಷದ ಕಟ್ಟಾಳು ಕುಟುಂಬ. ಬಿ.ಎ. ಪದವೀಧರ ಯಾಸೀರ, ರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಮೂರು ಬಾರಿ ಚಾಂಪಿಯನ್ ಆಗಿದ್ದರು. ಯಾಸೀರ್ ಕಾಂಗ್ರೆಸ್‌ ಪಕ್ಷಕ್ಕೆ ಸೇರಿ ಸಂಘಟನೆಯಲ್ಲಿ ತೊಡಗಿದ್ದರು.

ಕೆಪಿಸಿಸಿ ಕಿಸಾನ್ ಘಟಕದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಯಾಸೀರ್ ಕೆಲಸ ಮಾಡಿದ್ದರು. ಉದ್ಯಮ ಹಾಗೂ ಕೃಷಿಯಲ್ಲಿ ತೊಡಗಿರುವ ಯಾಸೀರ್ ಅವರ ಸಹೋದರಿ, ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿದ್ದರು.

ಬೂತ್ ಮಟ್ಟದಲ್ಲಿ ‘ಕೈ’ಗೆ ಭದ್ರ ಬುನಾದಿ

ಬಿಜೆಪಿ ಭದ್ರಕೋಟೆಯಾದ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದ ಕಾಂಗ್ರೆಸ್, ಉಪಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಕಾರ್ಯತಂತ್ರ ಶುರು ಮಾಡಿತ್ತು.

ಚುನಾವಣೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದರು. ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಸತೀಶ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ರಹೀಂಖಾನ್, ಲಕ್ಷ್ಮಿ ಹೆಬಾಳ್ಕರ್, ಯತೀಂದ್ರ ಸಿದ್ದರಾಮಯ್ಯ ಸಾಥ್ ನೀಡಿದ್ದರು. ಶಾಸಕರಾದ ಶ್ರೀನಿವಾಸ್ ಮಾನೆ ಸಹ ಕಾಲಿಗೆ ಚಕ್ರ ಕಟ್ಟಿಕೊಂಡು ಪಠಾಣ ಪರ ನಿಂತಿದ್ದರು.

ಮುಖಂಡರ ಜೊತೆ ಹೆಚ್ಚು ಓಡಾಡದ ಮಯೂರ್ ಜಯಕುಮಾರ್, ಸಾಮಾನ್ಯ ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿದರು. ಬೂತ್ ಮಟ್ಟದಲ್ಲಿ ಯುವಕರು ಹಾಗೂ ಮಹಿಳೆಯರ ತಂಡ ಕಟ್ಟಿದರು. ಮನೆ ಮನೆಗೆ ಕಳುಹಿಸಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿ ನೀಡಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್, ಬೂತ್ ಮಟ್ಟದಲ್ಲಿಯೇ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಯಿತು.

ಜಾತಿವಾರು ಮತಗಳ ಮೇಲೂ ಕಣ್ಣಿಟ್ಟಿದ್ದ ಕಾಂಗ್ರೆಸ್, ಆಯಾ ಜಾತಿ ನಾಯಕರನ್ನೇ ಕ್ಷೇತ್ರಕ್ಕೆ ಕರೆತಂದು ಜವಾಬ್ದಾರಿ ವಹಿಸಿತ್ತು. ಸಚಿವ ಸತೀಶ ಜಾರಕಿಹೊಳಿ ಹಾಗೂ ಆರ್‌.ವಿ. ತಿಮ್ಮಾಪುರ, ತಮ್ಮ ಸಮುದಾಯದ ಮುಖಂಡರ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದರು. ಯತೀಂದ್ರ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ರೇವಣ್ಣ, ಕುರುಬ ಸಮುದಾಯದವರು ವಾಸವಿರುವ ಗ್ರಾಮಗಳಿಗೆ ಹೋಗಿ ಮತ ಕೋರಿದ್ದರು. ಮಠ, ದರ್ಗಾ, ದೇವಸ್ಥಾನಗಳಿಗೆ ಕಾಂಗ್ರೆಸ್ ನಾಯಕರ ತಂಡವೇ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಇದೆಲ್ಲವೂ ಗೆಲುವಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.

ಟಿಕೆಟ್ ವಿಚಾರವಾಗಿ ಉಂಟಾಗಿದ್ದ ಗೊಂದಲವನ್ನು ಸೂಕ್ಷ್ಮವಾಗಿ ಬಗೆಹರಿಸಿದ ಕಾಂಗ್ರೆಸ್ ವರಿಷ್ಠರು, ‘ಪಕ್ಷವನ್ನು ಗೆಲ್ಲಿಸಿದವರಿಗೆ ಸೂಕ್ತ ಸ್ಥಾನಮಾನ ಕೊಡುತ್ತೇವೆ’ ಎಂಬ ಭರವಸೆ ನೀಡಿದರು. ಇದೇ ಕಾರಣಕ್ಕೆ, ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ.

ಬಂಡಾಯ ಎದ್ದಿದ್ದ ಸೈಯದ್ ಅಜ್ಜಂಪೀರ ಖಾದ್ರಿ, ಸಿದ್ದರಾಮಯ್ಯ ಹಾಗೂ ಪಕ್ಷದ ಮೇಲಿನ ಅಭಿಮಾನದಿಂದ ನಾಮಪತ್ರ ವಾಪಸು ಪಡೆದಿದ್ದರು. ಒಳ ಒಪ್ಪಂದದ ಸುಳಿವು ಅರಿತಿದ ನಾಯಕರು, ಖಾದ್ರಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಖಾದ್ರಿ ಅವರ ದಿನಚರಿ ಮೇಲೆ ಕಣ್ಣಿಟ್ಟು, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಸೂಚಿಸಿದ್ದರೆಂಬ ಮಾಹಿತಿಯೂ ಇದೆ.

‘ಹಣ ಹಂಚಿದ್ದು ಯಾರೆಂಬುದು ಜನರಿಗೆ ಗೊತ್ತಿದೆ’

‘ಕ್ಷೇತ್ರದ ಜನರು ಪ್ರಜ್ಞಾವಂತರು. ನನ್ನಂಥ ಸಾಮಾನ್ಯ ಕುಟುಂಬದ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಹಣ ಹಂಚಿದ್ದು ಯಾರು ಎಂಬುದು ಜನರಿಗೆ ಗೊತ್ತಿದೆ’ ಎಂದು ವಿಜೇತ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ತಿಳಿಸಿದರು.

ನಗರದಲ್ಲಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ತಂದೆ–ತಾಯಿ, ಗುರು–ಹಿರಿಯ ಆಶೀರ್ವಾದ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಿರಂತರ ಶ್ರಮದಿಂದ ಗೆಲುವು ನನ್ನದಾಗಿದೆ. ಧರ್ಮ, ಜಾತಿ ಮರೆತು ಮತ ಹಾಕಿದ ಸರ್ವಜನಾಂಗದ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

‘ಹಣದ ಹೊಳೆ ಹರಿಸಿ ಕಾಂಗ್ರೆಸ್‌ ಗೆದ್ದಿದೆ’ ಎಂಬುದಾಗಿ ಸಂಸದ ಬಸವರಾಜ ಬೊಮ್ಮಾಯಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಪಠಾಣ, ‘ಹಣ ಹಂಚಿದ್ದು ಯಾರು ಎಂಬುದು ಜನರಿಗೆ ಗೊತ್ತಿದೆ. ನಾವು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ. ಮುಂದೆಯೂ ಜನರ ಸೇವೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.

‘ಸೂಫಿ ಸಂತರು ಹಾಗೂ ಶರಣರ ನಾಡು ನಮ್ಮದು. ಶಿಶುನಾಳ ಷರೀಫರು, ಗುರು ಗೋವಿಂದ ಭಟ್ಟರು, ಕನಕದಾಸರು ಜನಿಸಿದ ಪುಣ್ಯಭೂಮಿ ಇದು. ಸರ್ವ ಸಮಾಜದ ಜನರು, ಕಾಂಗ್ರೆಸ್‌ ಗೆಲ್ಲಿಸುವ ಮೂಲಕ ಭಾವೈಕ್ಯ ಸಂದೇಶ ರವಾನಿಸಿದ್ದಾರೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿ ಸಮಸ್ಯೆ ಇದೆ. ಪ್ರಚಾರಕ್ಕೆ ಬಂದಿದ್ದ ರಾಜ್ಯದ ನಾಯಕರು, ಎಲ್ಲ ಸಮಸ್ಯೆಗಳನ್ನು ಗಮನಿಸಿದ್ದಾರೆ. ಅನುಭವಿ ಶಾಸಕರು ನಮ್ಮಲ್ಲಿದ್ದಾರೆ. ಅವರೆಲ್ಲರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸುವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಮುಖಂಡ ಸೈಯದ್ ಅಜ್ಜಂಪೀರ ಖಾದ್ರಿ ಮಾತನಾಡಿ, ‘ಬಿಜೆಪಿ ಸೋಲಿಸುವುದು ನನ್ನ ಕನಸಾಗಿತ್ತು. ಅದು ಇಂದು ಈಡೇರಿದೆ. ಪಠಾಣ ಗೆಲುವಿನಲ್ಲಿ ನನ್ನ ಗೆಲುವು ಹಾಗೂ ಪಕ್ಷದ ಗೆಲುವು ನೋಡುತ್ತಿದ್ದೇನೆ’ ಎಂದರು.

‘ನಾನೊಬ್ಬ ಕಾಂಗ್ರೆಸ್‌ ಪಕ್ಷದ ಸಾಮಾನ್ಯ ಕಾರ್ಯಕರ್ತರು. ಯಾವುದೇ ಬೇಡಿಕೆ ಇರಿಸದೇ, ನನ್ನ ನಾಮಪತ್ರ ವಾಪಸು ಪಡೆದುಕೊಂಡಿದ್ದೆ. ನನ್ನ ಜೀವ ಇರುವವರೆಗೂ ಬಡವರ ಪರವಾಗಿರುತ್ತೇನೆ. ಲಿಂಗಾಯತರು, ಬ್ರಾಹ್ಮಣರು ಸೇರಿ ಎಲ್ಲ ಸಮುದಾಯದಲ್ಲಿ ಶೋಷಿತರಿದ್ದಾರೆ. ಅವರ ಪರವಾಗಿ ನಾನು ಧ್ವನಿಯಾಗುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.