ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಸಾಮಾನ್ಯ ಜನರ ಬದುಕಿಗೆ ಬಿಜೆಪಿ ಯಾವುದೇ ಸಹಾಯ ಮಾಡಿಲ್ಲ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಒಂದೇ ಒಂದು ಸಾಕ್ಷಿ ಸಹ ಇಲ್ಲ. ಇದ್ದರೆ ತಿಳಿಸಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸವಾಲು ಹಾಕಿದರು.
ಕ್ಷೇತ್ರದಲ್ಲಿರುವ ದುಂಡಶಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಬಾರಿ ಯಾಸೀರ ಅಹ್ಮದ್ ಖಾನ್ ಪಠಾಣ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಇಡೀ ಸರ್ಕಾರವೇ ನಿಮ್ಮ ಜೊತೆಗಿರುತ್ತದೆ’ ಎಂದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ, ಎಲ್ಲ ವರ್ಗದವರಿಗೂ ತಲುಪುತ್ತಿವೆ. ಬಿಜೆಪಿ ಕಾರ್ಯಕರ್ತರು ಸಹ ಯೋಜನೆ ಲಾಭ ಪಡೆಯುತ್ತಿದ್ದಾರೆ’ ಎಂದರು.
‘ಮಹದಾಯಿ ಯೋಜನೆಗೆ ಅನುಮತಿ ಸಿಕ್ಕಿತೆಂದು ಬೊಮ್ಮಾಯಿ ಸಂಭ್ರಮಿಸಿದ್ದರು. ಆದರೆ, ಜಾರಿಗೆ ತರಲಿಲ್ಲ. ನಮ್ಮ ಸರ್ಕಾರ, ಟೆಂಡರ್ ಕರೆದಿದೆ. ಈಗ, ಕೇಂದ್ರ ಪರಿಸರ ಇಲಾಖೆಯವರು ಅನುಮತಿ ಕೊಡುತ್ತಿಲ್ಲ. ದುಂಡಶಿಯಲ್ಲಿ ಉಗಮವಾಗುವ ಬೆಣ್ಣೆ ಹಳ್ಳದ ಅಭಿವೃದ್ಧಿಗೆ ₹ 200 ಕೋಟಿ ಕೊಟ್ಟಿದ್ದೇವೆ. ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಕೊಟ್ಟಿದ್ದರಾ’ ಎಂದು ಪ್ರಶ್ನಿಸಿದರು.
‘ಬಿಜೆಪಿ ಸರ್ಕಾರವಿದ್ದಾಗ, ಬಡವರ ಪರ ಯಾವುದೇ ಯೋಜನೆ ಮಾಡಲಿಲ್ಲ. ಕೋವಿಡ್ ಸಮಯದಲ್ಲೂ ಕಾರ್ಮಿಕರು, ಕೂಲಿ ಕೆಲಸ ಮಾಡುವವರು, ಬಡವರಿಗೆ ಸಹಾಯವನ್ನೂ ಮಾಡಲಿಲ್ಲ. ಇಂಥ ಬಿಜೆಪಿಗೆ ಮತ ಕೇಳುವ ಹಕ್ಕಿಲ್ಲ’ ಎಂದರು.
ಬೊಮ್ಮಾಯಿ ಭೇಟಿಗೆ ಏಜೆಂಟರು ಬೇಕಂತೆ: ‘ಜನರಿಂದ ಆಯ್ಕೆಯಾದ ಬಸವರಾಜ ಬೊಮ್ಮಾಯಿ, ಜನರಿಗಾಗಿ ಏನು ಮಾಡಿಲ್ಲ. ಅವರನ್ನು ಭೇಟಿ ಮಾಡಲು, ಏಜೆಂಟು ಹಾಗೂ ಮಧ್ಯವರ್ತಿಗಳು ಬೇಕಂತೆ. ಆದರೆ, ನಮ್ಮನ್ನು ಭೇಟಿಯಾಗಲು ಯಾವುದೇ ಏಜೆಂಟರು ಬೇಡ. ನಾವೇ ಜನರ ಮನೆ ಬಾಗಿಲಿಗೆ ಬರುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.