ADVERTISEMENT

ಶಿಗ್ಗಾವಿ ಉಪಚುನಾವಣೆ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಬಂಕಾಪುರ ತಾಲ್ಲೂಕು ಕೇಂದ್ರವಾಗಿ ಘೋಷಿಸಲು ತಾಲ್ಲೂಕು ಪುನರುತ್ಥಾನ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:41 IST
Last Updated 25 ಅಕ್ಟೋಬರ್ 2024, 15:41 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿದರು 
ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿದರು    

ಶಿಗ್ಗಾವಿ: ಉಪಚುನಾವಣೆ ಪ್ರಕ್ರಿಯೆ ಚುರುಕುಗೊಂಡಂತೆ ಇತ್ತ ಬಂಕಾಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂಬ ಒತ್ತಾಯಕ್ಕೆ ಶುಕ್ರವಾರ ನಡೆದ ತಾಲ್ಲೂಕು ಪುನರುತ್ಥಾನ ಸಮಿತಿ ಸಭೆಯಲ್ಲಿ ಒಮ್ಮತ ವ್ಯಕ್ತಪಡಿಸಲಾಯಿತು. ತಾಲ್ಲೂಕು ರಚನೆ ಘೋಷಣೆ ಮಾಡದಿದ್ದರೆ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಶಿಗ್ಗಾವಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ಬಂಕಾಪುರ ಪಟ್ಟಣ ಕಳೆದ 1953ರ ವರೆಗೆ ತಾಲ್ಲೂಕು ಕೇಂದ್ರವಾಗಿತ್ತು. ನಂತರ ಶಿಗ್ಗಾವಿ ತಾಲ್ಲೂಕುವನ್ನು ರಚನೆಯಾಗಿದೆ. ಸುಮಾರು 39 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಅದರಲ್ಲಿ ಸವಣೂರ ತಾಲ್ಲೂಕಿನ 6 ಗ್ರಾಮಗಳು, ಹಾನಗಲ್ ತಾಲ್ಲೂಕಿನ 4 ಗ್ರಾಮಗಳನ್ನು ಒಳಗೊಂಡಿದ್ದು, ಅವುಗಳೊಂದಿಗೆ ತಾಲ್ಲೂಕು ರಚನೆ ಮಾಡುವಂತೆ ಹೋರಾಟಕ್ಕೆ ಸಾರ್ವಜನಿಕರು ಅಣಿಯಾಗಿದ್ದಾರೆ.

ಹೋರಾಟ ಸಮಿತಿ ಅ.26ರಿಂದ ಪುರಸಭೆ ಆವರಣ ಮತ್ತು ನಾಡಕಚೇರಿ ಮುಂದೆ ಸತತ ಹೋರಾಟ ಹಮ್ಮಿಕೊಂಡಿದೆ. ಅಲ್ಲದೆ ಪಟ್ಟಣದ ಪ್ರತಿ ಮನೆಗಳ ಮುಂದೆ ಕಪ್ಪು ಬಾವುಟ ಹಾರಿಸಬೇಕು. ಚುನಾವಣೆ ಪ್ರಚಾರಕ್ಕೆ ಬರುವ ಪ್ರತಿಯೊಬ್ಬ ಅಭ್ಯರ್ಥಿಗೆ ತಾಲ್ಲೂಕು ಘೋಷಣೆ ಯಾರು ಮಾಡುತ್ತೇನೆಂಬ ಭರವಸೆ ನೀಡಿದರೆ ಮಾತ್ರ ಅವರಿಗೆ ಮತದಾನ ಮಾಡುವುದು. ಇಲ್ಲವಾದಲ್ಲಿ ಮತದಾನವನ್ನು ಸಂಪೂರ್ಣ ಬಹಿಷ್ಕಾರ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿ, ‘ತಾಲ್ಲೂಕು ಕೇಂದ್ರ ರಚನೆಗೆ ಯಾವುದೇ ಧರ್ಮಜಾತಿಗಳು ಅಡ್ಡಿ ತರಬಾರದು. ಕಳೆದ 20 ವರ್ಷಗಳ ಹೋರಾಟಕ್ಕೆ ಬೆಲೆ ಸಿಗಬೇಕು. ಬಂಕಾಪುರ ವೈಭವದ ಕಾಲ ಮತ್ತೆ ಮರುಕಳಿಸಬೇಕು. ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಆಗ್ರಹಿಸಿದರು.

ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಿಗೇರಿ, ಸಮಾಜ ಸೇವಕ ಮಂಜುನಾಥ ಕೂಲಿ ಮಾತನಾಡಿದರು.

ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಕಾರ್ಯದರ್ಶಿ ಅಬ್ದುಲ್‌ರಜಾಕ್‌ ತಹಸೀಲ್ದಾರ್, ಪಿ.ಡಿ.ಪುಕಾಳೆ, ಶರಣ ಕಿವುಡನವರ, ನಾರಾಯಣ ಟೋಪಣ್ಣವರ, ಶಿವು ಮಾಗಿ, ಗುರು ಚಲವಾದಿ, ದೇವಣ್ಣ ಹಳವಳ್ಳಿ, ದೇವರಾಜ ಅರಳಿಕಟ್ಟಿ, ಮಂಜುನಾಥ ವಳಗೇರಿ, ರಾಮಕೃಷ್ಣ ಆಲದಕಟ್ಟಿ, ರವಿ ಕುರಗೋಡಿ, ಪುರಸಭೆ ಸದಸ್ಯರಾದ ನಾಸಿರಹ್ಮದ ಹಲ್ಡೆವಾಲೆ, ರಾಜಶೇಖರ ಬಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.