ADVERTISEMENT

ಶಿಗ್ಗಾವಿ ಉಪಚುನಾವಣೆ | ಹಣ ಹಂಚಲು ಕಾಂಗ್ರೆಸ್ ಶಾಸಕರ ಮಧ್ಯೆಯೇ ಪೈಪೋಟಿ; ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 7:40 IST
Last Updated 10 ನವೆಂಬರ್ 2024, 7:40 IST
<div class="paragraphs"><p>ಬಸವರಾಜ ಬೊಮ್ಮಾಯಿ</p></div>

ಬಸವರಾಜ ಬೊಮ್ಮಾಯಿ

   

ಹುಬ್ಬಳ್ಳಿ: 'ಶಿಗ್ಗಾವಿ ಉಪ ಚುನಾವಣೆಯಲ್ಲಿ ಹಣ ಹಂಚುವುದರಲ್ಲಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಸಮುದಾಯವಾರು ಶಾಸಕರು ಹಣ ಹಂಚಿಕೆ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಂಚುವುದನ್ನು ನೋಡಿರಲಿಲ್ಲ‌' ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸರ್ಕಾರದಿಂದ ಲೂಟಿ ಮಾಡಿದ ಹಣವನ್ನು ಶಿಗ್ಗಾವಿ ಕ್ಷೇತ್ರದ ಮತದಾರರಿಗೆ ಹಂಚುತಿದ್ದಾರೆ' ಎಂದು ಆರೋಪಿಸಿದರು.

ADVERTISEMENT

'ಹಾನಗಲ್ ರೈತ ಆತ್ಮಹತ್ಯೆ ಪ್ರಕರಣ ಬಿಜೆಪಿ ರಾಜಕಾರಣ ಮಾಡುತ್ತಿದೆ' ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ರೈತರ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದಾಗಿದೆ. ಅದನ್ನು ತೆಗೆಸಲು ಆ ರೈತ ನಾಲ್ಕು-ಐದು ವರ್ಷ ಅಲೆದಾಡಿದ್ದಾರೆ‌. ವಕ್ಪ್‌ಗೆ ಹೋದರೂ ನ್ಯಾಯ ಸಿಗುವುದಿಲ್ಲ‌ ಎಂದು ಅರಿವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಅವರ ಕುಟುಂಬದವರು ಸಹ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬರೆದುಕೊಟ್ಟಿದ್ದಾರೆ' ಎಂದು ಹೇಳಿದರು.

'ರೈತರಿಗೆ ನೊಟಿಸ್ ಕೊಟ್ಟಿರುವುದನ್ನು ವಾಪಸ್ ಪಡೆಯುವುದು ಕಣ್ಣೊರೆಸುವ ತಂತ್ರ. ಎಲ್ಲಿಯವರೆಗೆ ಗೆಜಟ್ ನೊಟಿಫಿಕೇಷನ್ ವಾಪಸ್ ಪಡೆಯುವುದಿಲ್ಲವೋ ಅಲ್ಲಿಯವರೆಗೆ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ' ಎಂದು ಸಂಸದ ಬೊಮ್ಮಾಯಿ ಹೇಳಿದರು.

'ಕಾನೂನು‌ ಪ್ರಕಾರ ಖರೀದಿ'

'ಕೊವಿಡ್ ಸಂದರ್ಭ ಬಿಜೆಪಿ ಹಗರಣ ನಡೆಸಿದೆ' ಎನ್ನುವ ಕಾಂಗ್ರೆಸ್ ಪ್ರತಿಕ್ರಿಯಿಸಿದ ಅವರು, 'ಕೊವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಇಲ್ಲದ ಕಾರಣ, ಸೋಂಕು ತಗುಲಿ ಜನ ಮೃತಪಡುತ್ತಿದ್ದರು. ತುರ್ತುಪರಿಸ್ಥಿತಿ ಎದುರಾಗಿತ್ತು, ವೈದ್ಯರು ಪಿಪಿಇ ಕಿಟ್ ಇಲ್ಲದಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪಿಪಿಇ ಕಿಟ್ ಇಲ್ಲದಿದ್ದರೆ ಸಾಯುತ್ತಾರೆ ಎನ್ನುವ ಭಯ ಸಹ ಇತ್ತು. ಆಗ ಅವುಗಳನ್ನು ಕಾನೂನು ಪ್ರಕಾರವೇ ಖರೀದಿ ಮಾಡಿದ್ದೆವು. ರಾಷ್ಟ್ರೀಯ ವಿಪತ್ತು ಅಂತ ಘೊಷಣೆ ಮಾಡಲಾಗಿತ್ತು. ಜನರ ಪ್ರಾಣ ಉಳಿಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷದ ನಾಯಕರ ಧ್ವನಿ ಕುಗ್ಗಿಸುವ ಹೀಗೆ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.