ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದ ಶುಕ್ರವಾರ ಅಂತಿಮವಾಗಿ 26 ಅಭ್ಯರ್ಥಿಗಳು 46 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರುವ ಕ್ಷೇತ್ರದಲ್ಲಿ, ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ.
ಕಳೆದ ನಾಲ್ಕು ಅವಧಿಯಲ್ಲಿ ಕ್ಷೇತ್ರದಲ್ಲಿ ‘ಕಮಲ’ ಅರಳಿಸಿದ್ದ ಬಸವರಾಜ ಬೊಮ್ಮಾಯಿ, ಈ ಬಾರಿಯೂ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಹೊತ್ತುಕೊಂಡಿದ್ದಾರೆ. 20 ವರ್ಷಗಳ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ಕಾಂಗ್ರೆಸ್ ಮುಖಂಡರು, ಗೆಲ್ಲಲೇ ಬೇಕೆಂಬ ಹಠದೊಂದಿಗೆ ಸಂಘಟನೆ ಚುರುಕುಗೊಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪ್ರಬಲ ಸ್ಪರ್ಧೆ ನಡುವೆಯೂ ಕ್ಷೇತ್ರದ ಕೆಲವರು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆಆರ್‌ಎಸ್ ಪಕ್ಷ, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್, ಉತ್ತಮ ಪ್ರಜಾಕೀಯ ಪಕ್ಷ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಟಿಪ್ಪು ಸುಲ್ತಾನ್ ಪಾರ್ಟಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.
‘ಉಪ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಅಂತಿಮವಾಗಿ 26 ಅಭ್ಯರ್ಥಿಗಳು 46 ನಾಮಪತ್ರ ಸಲ್ಲಿಸಿದ್ದಾರೆ. ಅ. 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಅ. 30 ಕೊನೆಯ ದಿನವಾಗಿದೆ’ ಎಂದು ಚುನಾವಣಾಧಿಕಾರಿ ಮಹ್ಮದ್ ಖಿಜರ್ ತಿಳಿಸಿದರು.
‘ನಾಮಪತ್ರ ಪ್ರಕ್ರಿಯೆ ಮಹತ್ವದ್ದು. ಹೀಗಾಗಿ, ಕೆಲವರು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ್ದಾರೆ. ಪರಿಶೀಲನೆ ಸಂದರ್ಭದಲ್ಲಿ ಕ್ರಮಬದ್ಧ ನಾಮಪತ್ರಗಳನ್ನು ಮಾನ್ಯ ಮಾಡಲಾಗುವುದು. ಇದಾದ ನಂತರ, ನಾಮಪತ್ರ ವಾಪಸು ಪಡೆಯಲು ಅವಕಾಶವಿದೆ. ಅ. 30ರ ನಂತರ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು’ ಎಂದು ಹೇಳಿದರು.
ಬಿಜೆಪಿಗೆ ಲಾಭದ ಲೆಕ್ಕಾಚಾರ: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪ್ರಬಲ ಸಮುದಾಯಗಳ ಮುಖಂಡರಾದ ಸೈಯದ್ ಅಜ್ಜಂಪೀರ್ ಖಾದ್ರಿ ಹಾಗೂ ಮಂಜುನಾಥ ಕುನ್ನೂರು ಅವರು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಇವರು, ಕಾಂಗ್ರೆಸ್ ಮತಗಳನ್ನು ಪಡೆದರೆ ಬಿಜೆಪಿಗೆ ಲಾಭವಾಗುವ ಲೆಕ್ಕಾಚಾರವಿದೆ.
ಅಜ್ಜಂಪೀರ್ ಖಾದ್ರಿ ಹಾಗೂ ಮಂಜುನಾಥ್ ಕುನ್ನೂರು, ಇಬ್ಬರೂ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದರು. ಟಿಕೆಟ್ ಘೋಷಣೆಗಾಗಿ ಸರಣಿ ಸಭೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರು. ಟಿಕೆಟ್ ಕೈ ತಪ್ಪಿದ್ದರಿಂದ, ಬೆಂಗಳೂರಿನಿಂದ ಶಿಗ್ಗಾವಿಗೆ ದೌಡಾಯಿಸಿದ್ದರು. ಬೆಂಬಲಿಗರ ಸಭೆ ನಡೆಸಿ, ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್ ಮುಖಂಡರಿಗೆ ಆಘಾತ ನೀಡಿದೆ.
‘ಕೈ’ ಅಭ್ಯರ್ಥಿ ಪರ ಸರ್ಕಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರ ರೋಡ್ ಶೋನಲ್ಲಿ ಸರ್ಕಾರದ ಘಟಾನುಘಟಿ ನಾಯಕರು ಭಾಗವಹಿಸಿದ್ದರು. ಸರ್ವ ಜನಾಂಗದ ಮತಗಳನ್ನು ಸೆಳೆಯುವ ರೀತಿಯಲ್ಲಿ ಭಾಷಣ ಮಾಡಿದರು. ‘ಇಡೀ ಸರ್ಕಾರವೇ ನಿಮ್ಮ ಪರವಿದೆ. ಧೈರ್ಯವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ’ ಎಂದು ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು. ರೋಡ್ ಶೋ ನಡೆಸಲು ಸಮಯ ಪಡೆದಿದ್ದ ಕಾಂಗ್ರೆಸ್ ನಿಗದಿತ ಸಮಯಕ್ಕೂ ತಡವಾಗಿ ಮೆರವಣಿಗೆ ಆರಂಭಿಸಿತು. ಸಮಯ ಮುಗಿಯುವ ಹಂತಕ್ಕೆ ಬಂದಿದ್ದರಿಂದ ತರಾತುರಿಯಲ್ಲಿ ಬಹಿರಂಗ ಸಭೆ ನಡೆಸಿ ಮೆರವಣಿಗೆ ಅಂತ್ಯಗೊಳಿಸಿತು. ಯಾಸೀರ್ ಅವರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ತೆರೆದ ವಾಹನದಲ್ಲಿ ಕುಳಿತಿದ್ದ ಯಾಸೀರ್ ಅಹ್ಮದ್ ಖಾನ್ ಪಠಾಣ ಜನರತ್ತ ಕೈ ಮುಗಿದು ಮತಯಾಚನೆ ಮಾಡಿದರು. ಸಚಿವರಾದ ಜಮೀರ್ ಅಹ್ಮದ್ ಖಾನ್ ಶಿವಾನಂದ ಪಾಟೀಲ ಶಾಸಕರಾದ ರುದ್ರಪ್ಪ ಲಮಾಣಿ ಪ್ರಕಾಶ ಕೋಳಿವಾಡ ಸಲಿಂ ಅಹ್ಮದ್ ಸಹ ತೆರೆದ ವಾಹನದಲ್ಲಿ ನಿಂತು ಮತಯಾಚಿಸಿದರು. ಕ್ಷೇತ್ರದ ಆಕಾಂಕ್ಷಿಗಳಾಗಿದ್ದ ಸೋಮಣ್ಣ ಬೇವಿನಮರದ ಸಂಜೀವಕುಮಾರ ನೀರಲಗಿ ಆರ್. ಶಂಕರ್ ಸಹ ಮೆರವಣಿಗೆಯಲ್ಲಿ ಪಾಲ್ಗೊಂಡು ಕೈ ಅಭ್ಯರ್ಥಿ ಪರ ಮತ ಕೇಳಿದರು. ತೆರೆದ ವಾಹನದ ಹಿಂದೆಯೇ ಮುಖಂಡರ ಐಷಾರಾಮಿ ಕಾರುಗಳು ಹಿಂಬಾಲಿಸಿದವು. ಮೆರವಣಿಗೆ ಮುಗಿಯುತ್ತಿದ್ದಂತೆ ಕಾರುಗಳನ್ನು ಏರಿ ಮುಖಂಡರು ಸ್ಥಳದಿಂದ ಹೊರಟರು.
ಮಗನ ರಥಕ್ಕೆ ಅಪ್ಪನೇ ಸಾರಥಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ದೊಡ್ಡ ಮಟ್ಟದಲ್ಲಿ ರೋಡ್ ಶೋ ನಡೆಸಿದರು. ರೋಡ್ ಶೋ ಮಾಡುವುದಕ್ಕಾಗಿ ಹೂವಿನಿಂದ ಅಲಂಕರಿಸಿದ್ದ ಹಾಗೂ ಬಿಜೆಪಿ ಧ್ವಜ ಕಟ್ಟಿದ್ದ ವಾಹನವನ್ನು ಸಿದ್ಧಪಡಿಸಲಾಗಿತ್ತು. ಇದೇ ವಾಹನದಲ್ಲಿ ಭರತ್ ಬೊಮ್ಮಾಯಿ ಜೊತೆ ತಂದೆ ಬಸವರಾಜ ಬೊಮ್ಮಾಯಿ ಅವರು ಸಾರಥಿಯಾಗಿ ನಿಂತಿದ್ದರು. ತೆರೆದ ವಾಹನದಲ್ಲಿ ಬಸವರಾಜ ಬೊಮ್ಮಾಯಿ ಅವರೇ ಮುಂದಿದ್ದರು. ಅವರ ಪಕ್ಕದಲ್ಲಿ ಭರತ್ ನಿಂತಿದ್ದರು. ತಂದೆ ಜನರಿಗೆ ಕೈ ಮುಗಿದು ಮತಯಾಚಿಸುತ್ತಿದ್ದರು. ಅವರ ರೀತಿಯಲ್ಲಿಯೇ ಭರತ್ ಸಹ ಮತಯಾಚನೆ ಮಾಡಿದರು. ರಸ್ತೆಯುದ್ದಕ್ಕೂ ಅಕ್ಕ–ಪಕ್ಕದ ಮನೆಗಳು ಕಚೇರಿಗಳಲ್ಲಿ ನಿಂತಿದ್ದ ಜನರತ್ತ ಕೈ ಮುಗಿದು ಮತ ಕೇಳಿದರು. ಮೆರವಣಿಗೆಗಾಗಿ ಶಿಗ್ಗಾವಿ ಮಾರುಕಟ್ಟೆ ರಸ್ತೆಯನ್ನು ಬಿಜೆಪಿ ಬಾವುಟ ಹಾಗೂ ಕೇಸರಿ ಶಾಲುಗಳಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಭರತ್ ಬೊಮ್ಮಾಯಿ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರ ಕಟೌಟ್‌ಗಳು ಕಂಡುಬಂದವು. ಬಿಜೆಪಿ ಹಾಗೂ ನರೇಂದ್ರ ಮೋದಿ ಪರ ಹಾಡುಗಳು ಟ್ರ್ಯಾಕ್ಟರ್‌ಗಳಲ್ಲಿ ಸದ್ದು ಮಾಡಿದವು. ಬಿಜೆಪಿ ಬಾವುಟ ಹಿಡಿದ ಕಾರ್ಯಕರ್ತರು ಹುರುಪಿನಿಂದ ಕುಣಿದರು. ಜೈಶ್ರೀರಾಮ್ ಘೋಷಣೆಗಳೂ ಮೊಳಗಿದವು. ಚನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದ ಭರತ್ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದ ಅಭಿವೃದ್ಧಿ ಮುಂದುವರಿಸಲು ಮತ ನೀಡುವಂತೆ ಕೋರಿದರು. ಸಭೆಯ ನಂತರ ಸೇಬು ಹಣ್ಣಿನ ಹಾರವನ್ನು ಮುಖಂಡರಿಗೆ ಹಾಕಲಾಯಿತು. ಇದೇ ಸಂದರ್ಭದಲ್ಲಿ ಸೇಣು ಹಣ್ಣು ಕಿತ್ತುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದರು. ಸೇಬು ಹಣ್ಣಿನ ಕಿತ್ತಾಟದಲ್ಲಿ ಕೆಲವರು ಚಪ್ಪಲಿಗಳನ್ನು ಸ್ಥಳದಲ್ಲೇ ಬಿಟ್ಟು ದಿಕ್ಕಾಪಾಲಾದರು. ತೆರೆದ ವಾಹನದ ಹಿಂದೆಯೇ ಮುಖಂಡರ ಐಷಾರಾಮಿ ಕಾರುಗಳ ಸಾಲು ದೊಡ್ಡದಿತ್ತು. ಮೆರವಣಿಗೆ ಮುಗಿಯುತ್ತಿದ್ದಂತೆ ತೆರೆದ ವಾಹನದಿಂದ ಇಳಿದ ಮುಖಂಡರು ತಮ್ಮ ಕಾರುಗಳನ್ನು ಹತ್ತಿ ಸ್ಥಳದಿಂದ ಹೊರಟು ಹೋದರು.
ಹಣ ಕೊಟ್ಟು ಜನರ ಕರೆತಂದ ಮುಖಂಡರು: ಜಟಾಪಟಿ ಶಿಗ್ಗಾವಿ ಕ್ಷೇತ್ರದಲ್ಲಿ ರೋಡ್ ಶೋ ನಡೆದ ಸಂದರ್ಭದಲ್ಲಿ ಹಣದ ಹಂಚಿಕೆ ವಿಚಾರಕ್ಕಾಗಿ ಗುಂಪುಗಳ ನಡುವೆ ಜಟಾಪಟಿ ನಡೆಯಿತು. ಕೆಲ ಮುಖಂಡರು ಹಣ ಕೊಟ್ಟು ಜನರನ್ನು ಮೆರವಣಿಗೆಗೆ ಕರೆತಂದಿದ್ದರು. ಆದರೆ ಹಣ ತಮಗೆ ತಲುಪಿಲ್ಲವೆಂದು ಜನರು ಆಕ್ಷೇಪ ವ್ಯಕ್ತಪಡಿಸಿ ಜಗಳಕ್ಕೆ ಇಳಿದಿದ್ದರು. ರಾಣಿ ಚನ್ನಮ್ಮ ವೃತ್ತದ ಬಳಿ ಸೇರಿದ್ದ ಕೆಲವರು ‘ಪ್ರತಿಯೊಬ್ಬರಿಗೆ ತಲಾ ₹200 ಹಾಗೂ ಪೆಟ್ರೋಲ್ ಖರ್ಚು ₹ 100 ಕೊಡುವುದಾಗಿ ನಮ್ಮೂರಿನ ಮುಖಂಡರು ಹೇಳಿದ್ದರು. ಕೆಲವರಿಗೆ ಹಣ ನೀಡಿದ್ದಾರೆ. ನಮಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು. ಇನ್ನೊಂದು ಗುಂಪು ‘₹200 ಕೊಡುವುದಾಗಿ ಹೇಳಿ ಇಲ್ಲಿಗೆ ಕರೆತಂದಿದ್ದಾರೆ. ಈಗಲೇ ಹಣ ಕೊಟ್ಟರೆ ಎಲ್ಲರಿಗೂ ಗೊತ್ತಾಗುತ್ತದೆ ಎಂದು ತಿಳಿದು ಚೀಟಿ ಕೊಟ್ಟಿದ್ದಾರೆ. ರಾತ್ರಿ ಚೀಟಿ ಕೊಟ್ಟರೆ ಹಣ ಕೊಡಲಿದ್ದಾರೆ. ಗಲಾಟೆ ಮಾಡಬೇಡಿ’ ಎಂದು ಹೇಳಿತು. ಮುಖಂಡರೊಬ್ಬರು ಕೆಲ ಮಹಿಳೆಯರನ್ನು ಮೆರವಣಿಗೆಗೆ ಕರೆತಂದಿದ್ದರು. ಕೆಲ ಮಹಿಳೆಯರು ‘ಹಣ ಕೊಡಿ’ ಎಂದು ಸಹ ಮಹಿಳೆಯರನ್ನು ಒತ್ತಾಯಿಸಿದ್ದರು. ಆದರೆ ಮುಖಂಡ ಬಂದಿಲ್ಲವೆಂದು ಸಹ ಮಹಿಳೆಯರು ಹೇಳಿದ್ದಕ್ಕೆ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.