ಹಾವೇರಿ: 'ಬಿಗ್ಬಾಸ್' ಖ್ಯಾತಿಯ ಚಿಲ್ಲೂರು ಬಡ್ನಿ ಹನುಮಂತ ಅವರ ತಂದೆ-ತಾಯಿ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬುಧವಾರ ಮತದಾನ ಮಾಡಿದರು.
ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಹನುಮಂತ ಅವರು ಚುನಾವಣೆ ರಾಯಭಾರಿ ಆಗಿದ್ದರು. ಎರಡೂ ಚುನಾವಣೆಯಲ್ಲಿ ಹನುಮಂತ ಅವರು ತಮ್ಮೂರಿನ ಚಿಲ್ಲೂರು ಬಡ್ನಿಯಲ್ಲಿರುವ ಮತಗಟ್ಟೆಗೆ ಬಂದು ಮತದಾನ ಮಾಡಿದ್ದರು. ಈ ಈ ಬಾರಿ ಅವರು 'ಬಿಗ್ಬಾಸ್' ರಿಯಾಲಿಟಿ ಶೋ ಮನೆಯಲ್ಲಿದ್ದಾರೆ. ಹೀಗಾಗಿ, ಅವರು ಮತದಾನ ಮಾಡಲು ಬಂದಿಲ್ಲ. ಗೈರಾಗಿದ್ದಾರೆ. ಅವರ ತಂದೆ ಮೇಗಪ್ಪ, ತಾಯಿ ಶೀಲವ್ವ ಹಾಗೂ ಸಹೋದರಿ ಅವರು ಮತಗಟ್ಟೆಗೆ ಬಂದು ಮತದಾನ ಮಾಡಿದರು.
'ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹನುಮಂತ ಹೆಸರಿದೆ. ಈಗ ಆತ, ಬಿಗ್ಬಾಸ್ನಲ್ಲಿ ಇದ್ದಾನೆ. ಅವನನ್ನು ಸಂಪರ್ಕಿಸಲು ನಮಗೆ ಆಗುವುದಿಲ್ಲ. ಅವನ ಮೊಬೈಲ್ ನಮ್ಮ ಬಳಿಯೇ ಇದೆ. ಅಷ್ಟು ಜ್ಞಾನವೂ ನಮಗಿಲ್ಲ. ನಾವಷ್ಟೇ ಚಿಲ್ಲೂರು ಬಡ್ನಿ ತಾಂಡಾದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಗೆ ಬಂದು ಮತದಾನ ಮಾಡಿದ್ದೇವೆ' ಎಂದು ಹನುಮಂತ ತಂದೆ ಮೇಗಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.