ADVERTISEMENT

Shiggaon bypolls: ಸಭೆ ಕರೆದ ದುಂಡಿಗೌಡ್ರ; ಬಂಡಾಯ ಇಲ್ಲ ಎಂದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:54 IST
Last Updated 23 ಅಕ್ಟೋಬರ್ 2024, 15:54 IST
ಶ್ರೀಕಾಂತ ದುಂಡಿಗೌಡ್ರ
ಶ್ರೀಕಾಂತ ದುಂಡಿಗೌಡ್ರ   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಭರತ್‌ ಬೊಮ್ಮಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಪಕ್ಷದ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಬಂಡಾಯದ ಕಾವು ಹೆಚ್ಚುತ್ತಿದೆ.

ಕ್ಷೇತ್ರದ ಬಿಜೆಪಿ ಪ್ರಮುಖ ಮುಖಂಡ ಶ್ರೀಕಾಂತ ದುಂಡಿಗೌಡ್ರ, ‘ರಾಜಕೀಯ ಗುರು ಬಸವರಾಜ ಬೊಮ್ಮಾಯಿ ಅವರು ನನಗೆ ಅನ್ಯಾಯ ಮಾಡಿದರು. ಟಿಕೆಟ್ ಕೊಡಿಸುವುದಾಗಿ ಹೇಳುತ್ತ, ತಮ್ಮ ಮಗನಿಗೆ ಟಿಕೆಟ್ ಕೊಡಿಸಿದರು. ನನಗೆ ಹಾಗೂ ಕಾರ್ಯಕರ್ತರಿಗೆ ನೋವಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಮುಂದಿನ ನಡೆ ಬಗ್ಗೆ ಚರ್ಚಿಸಲು ಅಕ್ಟೋಬರ್ 24ರಂದು ಸಂಜೆ ಹಿರಿಯರು ಮತ್ತು ಹಿತೈಷಿಗಳ ಸಭೆ ಕರೆದಿರುವೆ. ಅವರ ಅಭಿಪ್ರಾಯ ಪಡೆದು ನನ್ನ ನಿರ್ಧಾರ ಪ್ರಕಟಿಸುವೆ’ ಎಂದು ಅವರು ತಿಳಿಸಿದರು.

ADVERTISEMENT

ಬಂಡಾಯವಿಲ್ಲ: ‘ಶಿಗ್ಗಾವಿ ಕ್ಷೇತ್ರದಲ್ಲಿ ಯಾವುದೇ ಬಂಡಾಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಇಂಥ ಬೆಳವಣಿಗೆಗಳು ಸಹಜ. ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿಯ ಹಿರಿಯ ನಾಯಕರು ಭಾಗವಹಿಸುವರು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ಕೈ ಟಿಕೆಟ್‌ಗಾಗಿ ಬೆಂಬಲಿಗರ ಪ್ರತಿಭಟನೆ

‘ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾದ ಮಾಜಿ ಶಾಸಕ ಸೈಯದ್ ಅಜ್ಜಂಪೀರ ಖಾದ್ರಿ ಅವರಿಗೆ ಟಿಕೆಟ್ ನೀಡಬೇಕು’ ಎಂದು ಆಗ್ರಹಿಸಿ ಅವರ 50ಕ್ಕೂ ಹೆಚ್ಚು ಬೆಂಬಲಿಗರು ಶಿಗ್ಗಾವಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ್ದ ಬೆಂಬಲಿಗರು ‘ಖಾದ್ರಿ ಅವರ ಬಗ್ಗೆ ಕೆಲ ಮಾಜಿ ಶಾಸಕರು ಅಪಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ವರಿಷ್ಠರು ಕಿವಿಗೂಡಬಾರದು’ ಎಂದರು.

ಮುಖಂಡ ಜಾಫರ್‌ಸಾಬ್ ಭಾಗವಾನ್ ‘ಮುಸ್ಲಿಂ ಸಮುದಾಯದವರು ಕೇವಲ ಮತ ಹಾಕುವುದಕ್ಕಷ್ಟೇ ಬೇಕಾ’ ಎಂದು ಪ್ರಶ್ನಿಸಿದರು.

ಪುರಸಭೆ ಸದಸ್ಯ ಮುಕ್ತಿಯಾರ್ ತಿಮ್ಮಾಪೂರ ‘ಖಾದ್ರಿ ಅವರ ನೇತೃತ್ವದಲ್ಲಿ ಶಿಗ್ಗಾವಿ ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ವಿರುದ್ಧ ಗೆಲುವು ಸಾಧಿಸಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.