ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪೀರ ಖಾದ್ರಿ ಬೆಂಗಳೂರಿನಲ್ಲಿಯೇ ಮೊಕ್ಕಾಂ ಹೂಡಿದ್ದು, ಅವರನ್ನು ಕ್ಷೇತ್ರಕ್ಕೆ ವಾಪಸು ಕಳುಹಿಸುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಶಿಗ್ಗಾವಿಯಲ್ಲಿ ಸೋಮವಾರ ಸಭೆ ನಡೆಸಿದ ಬೆಂಬಲಿ ಗರು, ಪ್ರತಿಭಟನೆ ಎಚ್ಚರಿಕೆ ಸಹ ನೀಡಿದ್ದಾರೆ.
ಖಾದ್ರಿ ಅವರು ಕ್ಷೇತ್ರಕ್ಕೆ ವಾಪಸು ಬರಲು ಪ್ರಯತ್ನ ನಡೆಸಿದ್ದಾರೆ. ನಾಮಪತ್ರ ವಾಪಸು ಪಡೆಯಲು ಕೊನೆಯ ದಿನವಾದ ಅಕ್ಟೋಬರ್ 30ರಂದು ಕ್ಷೇತ್ರಕ್ಕೆ ಹೋಗಲು ಪಕ್ಷದ ವರಿಷ್ಠರು ತಾಕೀತು ಮಾಡಿದ್ದಾರೆಂದು ಮೂಲಗಳು ಹೇಳಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಖಾದ್ರಿ ಆಪ್ತರು, ‘ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿ ಸುವಂತೆ ವರಿಷ್ಠರು, ಖಾದ್ರಿ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಆದರೆ, ಅವರು ಏಕೆ ಕ್ಷೇತ್ರಕ್ಕೆ ವಾಪಸು ಬರುತ್ತಿಲ್ಲವೆಂಬುದು ಗೊತ್ತಾಗುತ್ತಿಲ್ಲ’ ಎಂದರು.
ನಾಮಪತ್ರ ವಾಪಸ್ ಪಡೆಯುವ ಬಗ್ಗೆ ತೀರ್ಮಾನ ಮಾಡಿಲ್ಲ. ಸಚಿವರಾಗಿರುವ ಜಮೀರ್ ನಿವಾಸದಲ್ಲಿದ್ದೇನೆ. ನನಗೆ ಕಾವಲು ಹಾಕಿದ್ದಾರೆ. ನನ್ನ ಜೊತೆ ಇಬ್ಬರನ್ನು ಬಿಟ್ಟಿದ್ದಾರೆ.ಅಜ್ಜಂಪೀರ್ ಖಾದ್ರಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ
ಖಾದ್ರಿಯವರನ್ನು ಕ್ಷೇತ್ರಕ್ಕೆ ಕಳುಹಿಸದಿದ್ದರೆ ಪ್ರತಿಭಟನೆ: ‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡ ಸೈಯದ್ ಅಜ್ಜಂಪೀರ್ ಖಾದ್ರಿ ಅವರನ್ನು, ಕ್ಷೇತ್ರಕ್ಕೆ ವಾಪಸು ಕಳುಹಿಸಿಕೊಡಿ’ ಎಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಬೆಂಬಲಿಗರು ಸೋಮವಾರ ದಿಢೀರ್ ಸಭೆ ನಡೆಸಿದರು.
ಕೊಕ್ಕೊ ಆಡಿದ ಭರತ್ ಬೊಮ್ಮಾಯಿ
ಶಿಗ್ಗಾವಿ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಪ್ರಚಾರ ಚುರುಕುಗೊಳಿಸಿದ್ದಾರೆ. ಅವರ ಪರ ತಂದೆ ಬಸವರಾಜ ಬೊಮ್ಮಾಯಿ ಹಾಗೂ ತಾಯಿ ಚನ್ನಮ್ಮ ಸಹ ಪ್ರಚಾರದ ಕಣಕ್ಕೆ ಇಳಿದಿದ್ದಾರೆ.
ಕ್ಷೇತ್ರದಲ್ಲಿ ಸೋಮವಾರ ಪ್ರಚಾರ ನಡೆಸಿದ ಭರತ್, ಶಾಲಾ ವಿದ್ಯಾರ್ಥಿಗಳ ಜೊತೆಯಲ್ಲಿ ಕೊಕ್ಕೊ ಆಡಿದರು. ನಂತರ, ಗ್ರಾಮಗಳಲ್ಲಿ ಮತಯಾಚಿಸಿದರು.
ಭರತ್ ಬೊಮ್ಮಾಯಿ ಮಾತನಾಡಿ, ‘ಪ್ರತಿ ಗ್ರಾಮಗಳ ಹಿರಿಯರು, ಮುಖಂಡರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿರುವೆ. ತಂದೆ–ತಾಯಿ ಮಾರ್ಗದರ್ಶನದಂತೆ ಜನರ ಸೇವೆ ಮಾಡಲು ಸಿದ್ದನಾಗಿರುವೆ. ಜನರ ಅಪಾರ ಬೆಂಬಲವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.