ADVERTISEMENT

ಶಿಗ್ಗಾವಿ ಉಪ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್– ಕೈ ಸುಟ್ಟುಕೊಂಡ ಬೊಮ್ಮಾಯಿ!

ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಜಯಭೇರಿ ಬಾರಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2024, 11:29 IST
Last Updated 23 ನವೆಂಬರ್ 2024, 11:29 IST
<div class="paragraphs"><p>ಶಿಗ್ಗಾವಿ ಉಪ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್– ಕೈ ಸುಟ್ಟುಕೊಂಡ ಬೊಮ್ಮಾಯಿ!</p></div>

ಶಿಗ್ಗಾವಿ ಉಪ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್– ಕೈ ಸುಟ್ಟುಕೊಂಡ ಬೊಮ್ಮಾಯಿ!

   

ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಜಯಭೇರಿ ಬಾರಿಸಿದ್ದಾರೆ.

ಈ ಹಿಂದಿನ ಸತತ ನಾಲ್ಕು ಅವಧಿಯಲ್ಲಿ‌ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಕೈ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.

ADVERTISEMENT

ಕ್ಷೇತ್ರದಲ್ಲಿ ತಮ್ಮದೇಯಾದ ಹಿಡಿತ ಹೊಂದಿದ್ದ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಗನಾದ ಬಿಜೆಪಿಯ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು 86,960 ಮತ ಪಡೆದು ಪರಾಭವಗೊಂಡಿದ್ದಾರೆ.

ಕಾಂಗ್ರೆಸ್‌ಗೆ 13,448 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಗೆಲುವು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್‌ನ ಯಾಸೀರ್ ಅಹಮದ್ ಖಾನ್ ಪಠಾಣ ಅವರು 1,00,587 ಮತ ಪಡೆದಿದ್ದಾರೆ.

ಮತ ಎಣಿಕೆ ಆರಂಭವಾದ ಐದಾರು ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿನ ಮತ ಪೆಟ್ಟಿಗೆಗಳು ತೆರೆದುಕೊಂಡಾಗ ಸಹಜವಾಗಿ ಪಠಾಣ್ ಅವರು ಮುನ್ನಡೆ ಕಾಯ್ದುಕೊಂಡು ಬಂದು ಗೆಲುವಿನ ಕೇಕೆ ಹಾಕಿದರು.

ಅಂತಿಮ 18ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಚುನಾವಣಾಧಿಕಾರಿಗಳು ಹಾವೇರಿಯಲ್ಲಿ ಯಾಸೀರ್ ಖಾನ್ ಪಠಾಣ್ ಅವರಿಗೆ ಪ್ರಮಾಣ ಪತ್ರ ನೀಡಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಭಾವೈಕ್ಯತೆ ಸಂದೇಶ ನೀಡಿದ ಮತದಾರರು: ಪಠಾಣ

‘ಅಲ್ಪಸಂಖ್ಯಾತ ಸಮುದಾಯದ ಸಾಮಾನ್ಯ ಕುಟುಂಬದ ನನ್ನನ್ನು ಜನರು ಗೆಲ್ಲಿಸಿದ್ದಾರೆ. ಈ ಮೂಲಕ ಇಡೀ ದೇಶದಕ್ಕೆ ಭಾವ್ಯಕ್ಯತೆ ಸಂದೇಶ ಸಾರಿದ್ದಾರೆ’ ಎಂದು ವಿಜೇತ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಹೇಳಿದರು.

ಮತ ಎಣಿಕೆ ಕೇಂದ್ರದಲ್ಲಿ ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸೇವೆಗೆ ಅವಕಾಶ ಮಾಡಿಕೊಟ್ಟ ಮತದಾರರಿಗೆ ಧನ್ಯವಾದಗಳು’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಕಾಂಗ್ರೆಸ್‌ನ ಪ್ರತಿಯೊಬ್ಬ ನಾಯಕರು ಹಾಗೂ ಸಾಮಾನ್ಯ ಕಾರ್ಯಕರ್ತರು ನನ್ನ ಪರ ನಿಂತು ಗೆಲ್ಲಿಸಿದ್ದಾರೆ’ ಎಂದರು.

‘ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗದ ಸಮಸ್ಯೆ ಹೆಚ್ಚಿದೆ. ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ಕಾಂಗ್ರೆಸ್‌ನಿಂದ ಹಣದ ಹೊಳೆ: ಭರತ್ ಬೊಮ್ಮಾಯಿ ಆರೋಪ

ಬೆಳಿಗ್ಗೆಯಿಂದ ಕೇಂದ್ರದಲ್ಲಿದ್ದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಸೋಲಿನ‌ ಮುನ್ಸೂಚನೆ ದೊರೆಯುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರಬಂದು ವಾಹನ ಏರಿ ಹೊರಟರು.

ಈ‌ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರ ಹಣದ ಹೊಳೆ ಹರಿಸಿದೆ' ಎಂದರು. 'ಶಿಗ್ಗಾವಿ ಜನತೆಗೆ ಕೃತಜ್ಣತೆ ಅರ್ಪಿಸುವೆ. ಸೋಲಿಗೆ ಕಾರಣವೇನು? ಎಂಬ ಬಗ್ಗೆ ಬೂತ್ ಮಟ್ಟದಲ್ಲಿ ಚರ್ಚಿಸಲಾಗುವುದು' ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.