ADVERTISEMENT

ಶಿಗ್ಗಾವಿ ಉಪಚುನಾವಣೆ: 13 ದಿನದಲ್ಲಿ 1 ಲಕ್ಷಕ್ಕೂ ಅಧಿಕ ಲೀಟರ್ ಮದ್ಯ ಮಾರಾಟ!

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ * ಜಿಲ್ಲೆಯಲ್ಲಿ 5.19 ಲಕ್ಷ ಲೀಟರ್ ಮಾರಾಟ

ಸಂತೋಷ ಜಿಗಳಿಕೊಪ್ಪ
Published 16 ನವೆಂಬರ್ 2024, 5:21 IST
Last Updated 16 ನವೆಂಬರ್ 2024, 5:21 IST
<div class="paragraphs"><p>ಶಿಗ್ಗಾವಿ ಬಾರ್‌ವೊಂದರಲ್ಲಿ ಕಂಡುಬಂದ ಖಾಲಿ ಬಿಯರ್ ಬಾಟಲಿಗಳ ರಾಶಿ</p></div>

ಶಿಗ್ಗಾವಿ ಬಾರ್‌ವೊಂದರಲ್ಲಿ ಕಂಡುಬಂದ ಖಾಲಿ ಬಿಯರ್ ಬಾಟಲಿಗಳ ರಾಶಿ

   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಚುನಾವಣೆ ಪ್ರಚಾರ ಹಾಗೂ ಇತರೆ ಚಟುವಟಿಕೆಗಳ ಸಂದರ್ಭದಲ್ಲಿ ಮದ್ಯ ಮಾರಾಟ ಭರ್ಜರಿಯಾಗಿ ನಡೆದಿದೆ. ಮದ್ಯದ ಅಂಗಡಿಗಳಲ್ಲಿ ₹ 500 ಮುಖಬೆಲೆಯ ನೋಟುಗಳದ್ದೇ ಹೆಚ್ಚು ಕಾರೋಬಾರು.

ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ನ.1ರಿಂದ ನ. 13ರವರೆಗಿನ ಅಂಕಿ–ಅಂಶಗಳ ಪ್ರಕಾರ, 1.01 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಎರಡೂ ತಾಲ್ಲೂಕಿನಲ್ಲಿರುವ ಮದ್ಯದ ಅಂಗಡಿ, ಬಾರ್‌ಗಳು ಹಾಗೂ ಇತರೆಡೆಗಳಲ್ಲಿ ಮದ್ಯ ಮಾರಾಟ ಜೋರಾಗಿ ನಡೆದಿದೆ.

ADVERTISEMENT

ಮದ್ಯ ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ಕೆಲವರು, ಮುಂಗಡವಾಗಿ ಮದ್ಯವನ್ನು ಖರೀದಿಸಿಟ್ಟುಕೊಂಡಿದ್ದಾರೆ. ಮತದಾನ ದಿನವಾದ ಬುಧವಾರ ಹಾಗೂ ಅದಕ್ಕೂ ಮುನ್ನಾ ದಿನವಾದ ಮಂಗಳವಾರ, ಮದ್ಯ ಮಾರಾಟ ಪ್ರಮಾಣ ಹೆಚ್ಚಾಗಿರುವುದು ಅಂಕಿ–ಅಂಶಗಳಿಂದ ಗೊತ್ತಾಗುತ್ತಿದೆ.

‘ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ನ.1ರಿಂದ ನ.13ರ ವರೆಗಿನ ಅವಧಿಯಲ್ಲಿ 11,737 ಮದ್ಯದ ಬಾಕ್ಸ್‌ಗಳು ಮಾರಾಟವಾಗಿವೆ. ಒಂದು ಬಾಕ್ಸ್‌ನಲ್ಲಿ 8 ಲೀಟರ್ 640 ಎಂ.ಎಲ್. ಮದ್ಯವಿರುತ್ತದೆ. ಅದರಂತೆ 11,737 ಬಾಕ್ಸ್‌ಗಳ ಲೆಕ್ಕದಲ್ಲಿ 1.01 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ’ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳಿವೆ.

‘1.01 ಲಕ್ಷ ಲೀಟರ್ ಪೈಕಿ, 69,845 ಲೀಟರ್ (8,084 ಬಾಕ್ಸ್) ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 31,561 ಲೀಟರ್ (3,653 ಬಾಕ್ಸ್‌ಗಳು) ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಅಲ್ಪಪ್ರಮಾಣದಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಳವಾಗಿದೆ’ ಎಂದು ತಿಳಿಸಿವೆ.

‘ಶಿಗ್ಗಾವಿ ಪಕ್ಕದಲ್ಲಿರುವ ಹಾನಗಲ್ ತಾಲ್ಲೂಕಿನಲ್ಲಿ 9,691 ಬಾಕ್ಸ್‌ ಮದ್ಯ ಮಾರಾಟವಾಗಿದೆ. ಹಾವೇರಿ ತಾಲ್ಲೂಕಿನಲ್ಲಿ 13,261 ಬಾಕ್ಸ್ ಮದ್ಯ ಬಿಕರಿಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 5.19 ಲಕ್ಷ ಲೀಟರ್ (60,101 ಬಾಕ್ಸ್) ಮದ್ಯ ಮಾರಾಟವಾಗಿದೆ’ ಎಂದು ಮೂಲಗಳು ಹೇಳಿವೆ.

‘ಕಳೆದ ವರ್ಷ ನ.1ರಿಂದ 13ರವರೆಗಿನ ಅವಧಿಯಲ್ಲಿ ಶಿಗ್ಗಾವಿ ತಾಲ್ಲೂಕಿನಲ್ಲಿ 7,643 ಮದ್ಯದ ಬಾಕ್ಸ್‌ಗಳು ಮಾರಾಟವಾಗಿದ್ದವು. ಸವಣೂರು ತಾಲ್ಲೂಕಿನಲ್ಲಿ 4,142 ಬಾಕ್ಸ್ ಮದ್ಯ ಬಿಕರಿಯಾಗಿದ್ದವು’ ಎಂದು ಮೂಲಗಳು ತಿಳಿಸಿವೆ.

ಪ್ರಚಾರದಲ್ಲಿ ಹೆಂಡದ ಮಾತು: ‘ಹಣ–ಹೆಂಡ ಹಂಚಿ ಚುನಾವಣೆ ನಡೆಯುತ್ತಿದೆ’ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ನೇರಾ ನೇರ ಆರೋಪ–ಪ್ರತ್ಯಾರೋಪ ಮಾಡಿದ್ದರು.

ಸಾರ್ವತ್ರಿಕ ಚುನಾವಣೆಗಿಂತಲೂ ಉಪ ಚುನಾವಣೆಯನ್ನು ಎರಡೂ ಪಕ್ಷದವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇದೇ ಕಾರಣಕ್ಕೆ, ಕ್ಷೇತ್ರದಲ್ಲಿ ಹಣ–ಹೆಂಡದ ಮಾತುಗಳು ಕೇಳಿಬಂದಿದ್ದವು. ಮತದಾನದ ಸಂದರ್ಭದಲ್ಲಿ, ಕೆಲ ಮತಗಟ್ಟೆಗಳ ಬಳಿ ಮದ್ಯ ಕುಡಿದವರು ಗಲಾಟೆ ಮಾಡಿದ್ದ ಪ್ರಕರಣಗಳೂ ನಡೆದಿದ್ದವು.

₹500ರ ನೋಟುಗಳೇ ಹೆಚ್ಚು: ‘ಚುನಾವಣೆ ಪ್ರಚಾರ ಆರಂಭವಾದಾಗಿನಿಂದ ಬಾರ್‌ಗೆ ಬರುವವರ ಸಂಖ್ಯೆ ಹೆಚ್ಚಿತ್ತು. ಜನರು ಗುಂಪು ಗುಂಪಾಗಿ ಬಾರ್‌ಗೆ ಬರುತ್ತಿದ್ದರು. ಬಹುತೇಕರ ಬಳಿ ₹500 ಮುಖಬೆಲೆಯ ನೋಟುಗಳು ಇದ್ದವು’ ಎಂದು ಶಿಗ್ಗಾವಿ ಪಟ್ಟಣದ ಬಾರ್‌ವೊಂದರ ಉದ್ಯೋಗಿ ಹೇಳಿದರು.

‘ಬಾರ್‌ಗೆ ಬಂದು ಹೋದ ಗ್ರಾಹಕರ ಪೈಕಿ, ಕೆಲವರು ಕಾಯಂ ಗ್ರಾಹಕರಿದ್ದರು. ಉಳಿದಂತೆ, ಅಕ್ಕ–ಪಕ್ಕದ ಗ್ರಾಮಗಳು ಹಾಗೂ ಬೇರೆ ಊರಿನ ಗ್ರಾಹಕರೂ ಬಂದು ಹೋದರು. ಕೆಲ ಕಾಯಂ ಗ್ರಾಹಕರು, ನಿತ್ಯವೂ ಬಾರ್‌ಗೆ ಬಂದು ಹೋಗುತ್ತಾರೆ. ಅವರು ನಿಗದಿತ ಪ್ರಮಾಣದಲ್ಲಿ ಮದ್ಯ ಕುಡಿಯುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಹೊರಟಿರುವುದಾಗಿ ಹೇಳುತ್ತಿದ್ದ ಅವರು, ನಿಗದಿಗಿಂತ ಹೆಚ್ಚು ಮದ್ಯ ಕುಡಿದು ಹೋಗಿದ್ದರು’ ಎಂದು ತಿಳಿಸಿದರು.

ಧಾಬಾ ಹೋಟೆಲ್‌ಗಳಲ್ಲಿ ‘ಕೂಪನ್’

ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಧಾಬಾ ಹಾಗೂ ಹೋಟೆಲ್‌ಗಳಲ್ಲಿ ಒಳ್ಳೆಯ ವ್ಯಾಪಾರವಾಗಿದೆ. ಪ್ರಚಾರಕ್ಕೆ ಬರುವ ಹಾಗೂ ಜೊತೆಗೆ ಸುತ್ತಾಡುವ ಜನರಿಗೆ ಕೂಪನ್ ಕೊಟ್ಟು ಧಾಬಾ ಹಾಗೂ ಹೋಟೆಲ್‌ಗಳಲ್ಲಿ ಊಟ ಮಾಡಿಸಲಾಗಿದೆ. ಇದರಿಂದಾಗಿ ಎರಡೂ ಕಡೆಯಲ್ಲಿಯೂ ನಿತ್ಯವೂ ಜನಸಂದಣಿಯಿತ್ತು. ‘ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದಲೂ ಧಾಬಾದಲ್ಲಿ ಊಟ ಮಾಡುತ್ತಿದ್ದೇವೆ. ನಮ್ಮ ಮುಖಂಡರೇ ಕೂಪನ್ ಕೊಟ್ಟಿದ್ದಾರೆ. ಅದನ್ನು ಬಳಸಿ ಊಟ ಮಾಡುತ್ತಿದ್ದೇವೆ’ ಎಂದು ಶಿಗ್ಗಾವಿ ತಾಲ್ಲೂಕಿನ ಗ್ರಾಮಸ್ಥರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.