ADVERTISEMENT

ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ l ಪ್ರಚಾರದಲ್ಲಿ ಹಣ–ಹೆಂಡದ ಮಾತು

ಸಂತೋಷ ಜಿಗಳಿಕೊಪ್ಪ
Published 2 ನವೆಂಬರ್ 2024, 1:20 IST
Last Updated 2 ನವೆಂಬರ್ 2024, 1:20 IST
<div class="paragraphs"><p><strong>ಬೊಮ್ಮಾಯಿ</strong></p></div>

ಬೊಮ್ಮಾಯಿ

   

ಶಿಗ್ಗಾವಿ (ಹಾವೇರಿ): ‘ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಹಣ – ಹೆಂಡದ ಹೊಳೆಯೇ ಹರಿಯುತ್ತದೆ’ ಎಂದು ಕಾಂಗ್ರೆಸ್, ಬಿಜೆಪಿಯವರು ಪರಸ್ಪರ ಆರೋಪಿಸುತ್ತಿದ್ದಾರೆ. ಪ್ರತಿ ಬಾರಿಯ ಚುನಾವಣೆ ಸಂದರ್ಭದಲ್ಲಿ ಕತ್ತಲ ರಾತ್ರಿಯ (ಮತದಾನದ ಮುನ್ನಾದಿನದ ರಾತ್ರಿ) ಕರಾಮತ್ತು ಜೋರಾಗುವ ಸಂಗತಿ ಗುಟ್ಟಾಗಿ ಉಳಿದಿಲ್ಲ.

ನಾಲ್ಕು ಅವಧಿಯಲ್ಲಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಲ್ಲಿ ಉಳಿಸಿಕೊಂಡಿದ್ದಾರೆ. ನಿರಂತರವಾಗಿ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್, ಈ ಬಾರಿಯಾದರೂ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತು ನಡೆಸುತ್ತಿದೆ. ಎರಡೂ ಪಕ್ಷಗಳ ನಡುವೆ ತೀವ್ರ ಹಣಾಹಣಿಯಿದೆ.

ADVERTISEMENT

ಕ್ಷೇತ್ರದ ಹಿರೇಮಣಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಯಾಸೀರಅಹ್ಮದ್ ಖಾನ್ ಪಠಾಣ, ‘ಕ್ಷೇತ್ರದ ಚುನಾವಣೆಯನ್ನು ಪ್ರತಿಸ್ಪರ್ಧಿಗಳು ಹಣ–ಹೆಂಡದ ಚುನಾವಣೆ ಮಾಡಿದ್ದಾರೆ. ಈ ಬಾರಿ ಅದಕ್ಕೆ ಅವಕಾಶವಿಲ್ಲ’ ಎನ್ನುತ್ತಾರೆ.

‘ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಬ್ಬ ರಂತೆ 9 ಸಚಿವರು ಕ್ಷೇತ್ರದಲ್ಲಿ ಉಳಿದು ಕೊಳ್ಳಲಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲೂ ಹದ್ದಿನ ಕಣ್ಣು ಇರಿಸಲಿದ್ದಾರೆ. ಹಣ–ಹೆಂಡ ಹಂಚುವುದು ಕಂಡುಬಂದರೆ, ಸಚಿವರು–ಶಾಸಕರು ಬೀದಿಗೆ ಇಳಿದು ತಡೆಯಲಿದ್ದಾರೆ’ ಎಂದು ಪಠಾಣ ತಿಳಿಸಿದರು.

ಬೊಮ್ಮಾಯಿ ತಿರುಗೇಟು

ಕಾಂಗ್ರೆಸ್ ಅಭ್ಯರ್ಥಿ ಯಾಸೀರಅಹ್ಮದ್ ಖಾನ್ ಪಠಾಣ ಆರೋಪಕ್ಕೆ ತಿರುಗೇಟು ನೀಡಿರುವ ಸಂಸದ ಬಸವರಾಜ ಬೊಮ್ಮಾಯಿ , ‘ಕಾಂಗ್ರೆಸ್ ಪಕ್ಷದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಹಣ– ಹೆಂಡ ಖರ್ಚು ಮಾಡು
ವವರಿದ್ದಾರೆ’ ಎಂದು ದೂರಿದರು.

‘ಹಣ–ಹೆಂಡ ಹೇಗೆ ಬರುತ್ತಿದೆ ಎಂಬುದು ನಮಗೆ ಗೊತ್ತಿದೆ‌. ಕಾಂಗ್ರೆಸ್‌ನ ಸಚಿವರು ಹಾಗೂ ಶಾಸಕರು, ಚುನಾವಣೆಗೆ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅವರು ಬರಿಗೈಯಲ್ಲಿ ಸುಮ್ಮನೇ ಬರುತ್ತಾರಾ?’ ಎಂದು ಪ್ರಶ್ನಿಸಿದರು.

‘ಚುನಾವಣೆ ನೋಡುತ್ತಲೇ ನಮಗೆ ವಯಸ್ಸಾಗಿದೆ. ಪ್ರತಿ ಚುನಾವಣೆಯಲ್ಲೂ ಮುಖಂಡರು, ಅಭ್ಯರ್ಥಿಗಳಿಂದ ಹಣ ಪಡೆಯುತ್ತಾರೆ. ಅದರಲ್ಲಿ ಸ್ವಲ್ಪ
ಖರ್ಚು ಮಾಡಿ, ಉಳಿದ ಹಣವನ್ನೆಲ್ಲ ತಾವೇ ತಿನ್ನುತ್ತಾರೆ. ಇಂಥ ಮುಖಂಡರನ್ನು ನೋಡಿ ನೋಡಿ ಸಾಕಾಗಿದೆ. ಹೀಗಾಗಿ, ಈ ವರ್ಷ ಚುನಾವಣೆ ತಂಟೆಗೆ ಹೋಗಿಲ್ಲ’ ಎನ್ನುತ್ತಾರೆ ಶಿಗ್ಗಾವಿ ಪಟ್ಟಣದ ಎಲೆ ವ್ಯಾಪಾರಿ ರಫೀಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.