ADVERTISEMENT

ಶಿಗ್ಗಾವಿ: ಬಯಲು ಶೌಚಮುಕ್ತ ಘೋಷಣೆ ದಾಖಲೆ ಮಾತ್ರ

ಉದ್ಘಾಟನೆಗೊಳದ ಸಾರ್ವಜನಿಕ ಶೌಚಾಲಯ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 3:53 IST
Last Updated 26 ನವೆಂಬರ್ 2024, 3:53 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಹತ್ತಿರದಲ್ಲಿ ನಿಮರ್ಿಸಿದ ಸಾರ್ವಜನಿಕ ಶೌಚಾಲಯ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿರುವದು.
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಹತ್ತಿರದಲ್ಲಿ ನಿಮರ್ಿಸಿದ ಸಾರ್ವಜನಿಕ ಶೌಚಾಲಯ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿರುವದು.   

ಶಿಗ್ಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಪೌರಾಡಳಿತ ನಿರ್ದೇಶನಾಲಯ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತಾಲ್ಲೂಕಿನ ಬಂಕಾಪುರ ಪಟ್ಟಣವನ್ನು ಬಯಲು ಶೌಚಮುಕ್ತ ಘೋಷಣೆ ಬರಿ ದಾಖಲೆಯಲ್ಲಿ ಮಾತ್ರವಾಗಿದೆ. ವಿನಃ ಈವರೆಗೆ ಶೌಚಾಲಯಗಳ ಸೌಕರ್ಯವಿಲ್ಲದೆ ಇಲ್ಲಿನ ಅನೇಕ ಜನರು ಪರದಾಡುವಂತಾಗಿದೆ.

ಪಟ್ಟಣದ ಪುರಸಭೆ 23 ವಾರ್ಡ್‌ಗಳು ಓ.ಡಿ.ಎಫ್+ (ಬಯಲು ಶೌಚಮುಕ್ತ) ನಗರವೆಂದು ಘೋಷಣೆ ಮಾಡುವ ಮೂಲಕ ಪ್ರಮಾಣಪತ್ರ ನೀಡಿದೆ. ಬಯಲು ಶೌಚಮುಕ್ತ ನಗರ+ (ಓ.ಡಿ.ಎಫ್ +) ರೀ ಸರ್ಟಿಫಿಕೇಶಮ್ ಎಂದು 23 ವಾರ್ಡ್‌ಗಳನ್ನು ಘೋಷಿಸಲು ಬಂಕಾಪುರ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಮಲ, ಮೂತ್ರವಿಸರ್ಜನೆ ಮಾಡುವುದನ್ನು ನಿಷೇಧಿಸಿದೆ. ತಪ್ಪಿದಲ್ಲಿ ಮೂತ್ರ ವಿಸರ್ಜನೆಗೆ ₹ 50 ಮತ್ತು ಮಲ ವಿಸರ್ಜನೆಗೆ ₹ 100 ದಂಡ ವಿಧಿಸಲಾಗುವದು ಎಂದು ತಿಳಿಸಿದೆ.

ಹೊಟೇಲ್, ಪೆಟ್ರೋಲ್ ಬಂಕಗಳ ಶೌಚಾಲಯಗಳನ್ನು ಸಾರ್ವಜನಿಕರು ಉಚಿತವಾಗಿ ಬಳಕೆ ಮಾಡಬಹುದು. ಈ ಕುರಿತು 7 ದಿನದೊಳಗಾಗಿ ಆಕ್ಷೇಪಣೆಗಳಿದ್ದರೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ADVERTISEMENT

‘ಆದರೆ ಪಟ್ಟಣದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯಗಳಿಲ್ಲ. ಹೊಟೇಲ್, ಪೆಟ್ರೋಲ್ ಶೌಚಾಲಯಗಳಿಲ್ಲ. ಮಲಮೂತ್ರ ತಡೆಯದವರು ಎಲ್ಲೆಂದರಲ್ಲಿ ಮಾಡುವ ಮೂಲಕ ಇಡೀ ಪಟ್ಟಣ ಗಬ್ಬೆಂದು ದುರ್ವಾಸನೆ ಹರಡುವಂತಾಗಿದೆ. ಬಂಕಾಪುರ ಸ್ವಚ್ಚತೆಗೆ ಮರೀಚಿಕೆಯಾಗಿದೆ’ ಎಂದು ಇಲ್ಲಿನ ನಿವಾಸಿಗಳಾದ ರಾಮಕೃಷ್ಣ ಆಲದಕಟ್ಟಿ ವಿಷಾದಿಸಿದರು.

ಪರ ಊರುಗಳಿಂದ ವ್ಯವಹಾರಕ್ಕಾಗಿ, ಸಂತೆಗಾಗಿ ನೂರಾರು ಜನ ಬರುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಆಡಳಿತದ ನಿಷ್ಕ್ರಿಯತೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣಕ್ಕೆ ನಿತ್ಯ ಸುತ್ತಲಿನ ಗ್ರಾಮಗಳಿಂದ ಶಾಲೆ, ಕಾಲೇಜು, ಉಪತಹಶೀಲ್ದಾರ್ ಕಚೇರಿಗೆ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಬರುತ್ತಿದ್ದಾರೆ. ಅಲ್ಲದೆ ಪ್ರತಿ ಮಂಗಳವಾರ ಸಂತೆ ನಡೆಯುತ್ತಿದ್ದು, ಅದರಲ್ಲಿ ಸಾವಿರಾರು ಜನರು ಸೇರುತ್ತಿದ್ದಾರೆ. ಆದರೆ ಸಾರ್ವಜನಿಕ ಶೌಚಾಲಗಳಿಲ್ಲದೆ ಸಂದಿಗಳಲ್ಲಿ, ಆವರಣ ಗೋಡೆಗಳ ಹಿಂದೆ ಪಕ್ಕದ ಚರಂಡಿಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೆ ಮಹಿಳೆಯರು, ಹೆಣ್ಣು ಮಕ್ಕಳು ಪರದಾಡುವಂತಾಗಿದೆ.

ಬಂಕಾಪುರ ಪುರಸಭೆ ಕಳೆದ 2016-17ನೇ ಸಾಲಿನ ಎಸ್ಎಫ್‌ಸಿ ಮತ್ತು ಎಸ್.ಬಿ.ಎಂ ಯೋಜನೆಯಡಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದೆ. ಆದರೆ ಏಂಟು ವರ್ಷ ಕಳೆದರು ಸಾರ್ವಜನಿಕರ ಉಪಯೋಗಕ್ಕೆ ನೀಡಿಲ್ಲ. ಹೀಗಾಗಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯ ಜನೋಪಯೋಗಿ ಆದದೇ ಪಾಳು ಬಿದ್ದಿದೆ. ಅದರ ಮುಂದೆ, ಪಕ್ಕದ ಗೋಡೆಗಳ ಸುತ್ತಲು ಜನ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಸಾರ್ವಜನಿಕ ಶೌಚಾಲಯದ ಕಟ್ಟಡ ಉದ್ಘಾಟಿಸಬೇಕು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪುರಸಭೆ ಎಸ್ಎಫ್‌ಸಿ ಯೋಜನೆಯಡಿ ಸುಮಾರು ₹ 20 ಲಕ್ಷ ಅನುದಾನ ಖರ್ಚು ಮಾಡಿದ್ದು. ಈ ವರೆಗೆ ಶೌಚಾಲಯ ಕಟ್ಟಡ ಜನ ಬಳಕೆಗೆ ನೀಡಿಲ್ಲ. ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಬಯಲು ಶೌಚಮುಕ್ತ ಪಟ್ಟಣವೆಂಬ ಘೊಷಣೆ ಹಿಂಪಡೆಯಬೇಕು ಎಂದು ಇಲ್ಲಿನ ನಿವಾಸಿಗಳಾದ ಮಂಜುನಾಥ ಕೂಲಿ, ಬಾಪುಗೌಡ್ರ ಪಾಟೀಲ ಆಗ್ರಹಿಸಿದ್ದಾರೆ.

ಬಯಲು ಶೌಚ ಮುಕ್ತ ಎಂಬ ಘೋಷಣೆಗೆ ಶಿಗ್ಗಾವಿ ಪಟ್ಟಣ ಪಂಚಾಯಿತಿ ಅಪಚಾರ ಎಸಗಿದೆ. ಈ ಘೋಷಣೆಯನ್ನು ಹಿಂದೆ ಪಡೆಯಬೇಕು
ರಾಮಕೃಷ್ಣ ಆಲದಕಟ್ಟಿ, ಸ್ಥಳೀಯ ನಿವಾಸಿ
ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಬಾಲಕಿ ಬಯಲು ಶೌಚಾಯಕ್ಕೆ ಹೋಗುತ್ತಿರುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.