ADVERTISEMENT

ತಿಳವಳ್ಳಿ: ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಗುಣಮಟ್ಟದ ಚಿಕಿತ್ಸೆ ಮರೀಚಿಕೆ

ಕಾಯಂ ವೈದ್ಯರಿಲ್ಲದೇ ಜನರಿಗೆ ಸಂಕಷ್ಟ

ಮಾಲತೇಶ ಆರ್
Published 30 ಜುಲೈ 2024, 4:31 IST
Last Updated 30 ಜುಲೈ 2024, 4:31 IST
ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಸರದಿಯಲ್ಲಿ ನಿಂತಿರುವ ಜನರು
ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಸರದಿಯಲ್ಲಿ ನಿಂತಿರುವ ಜನರು   

ತಿಳವಳ್ಳಿ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಹಲವು ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ಜನರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ.

ಶಿಥಿಲಾವಸ್ಥೆಯಲ್ಲಿದ್ದ ಆಸ್ಪತ್ರೆಯ ಕಟ್ಟಡವನ್ನು ನವೀಕರಣ ಮಾಡಲಾಗಿದೆ. ಸಿಬ್ಬಂದಿ ವಸತಿ ಗೃಹಗಳನ್ನು ಸುಸಜ್ಜಿತವಾಗಿ ನವೀಕರಿಸಲಾಗಿದೆ. ಆದರೆ, ಒಬ್ಬ ಕಾಯಂ ವೈದ್ಯರಿಲ್ಲ, ಫಾರ್ಮಾಸಿಸ್ಟ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಕಿರಿಯ ಪುರುಷ ಆರೋಗ್ಯ ಸಹಾಯಕ, ವಾಹನ ಚಾಲಕ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಪ್ಪಂದದ ಆಧಾರದ ಮೇಲೆ ನೇಮಕವಾಗಿರುವ ವೈದ್ಯರು, ಆರೋಗ್ಯ ಸಹಾಯಕಿಯರು ಹಾಗೂ ಫಾರ್ಮಾಸಿಸ್ಟ್ ಅವರೇ ಚಿಕಿತ್ಸೆ ನೀಡುತ್ತಿದ್ದಾರೆ.

ADVERTISEMENT

ತಿಳವಳ್ಳಿ ಹಾಗೂ ಸುತ್ತಮುತ್ತಲಿನ 10ಕ್ಕೂ ಹೆಚ್ಚಿನ ಗ್ರಾಮಗಳ ಜನರು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲದಿದ್ದರಿಂದ ಅವರೆಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು, ಖಾಸಗಿ ಆಸ್ಪತ್ರೆಗಳತ್ತ ಹೋಗುತ್ತಿದ್ದಾರೆ ಎಂದು ಜನರು ದೂರಿದರು.

ಈ ಭಾಗದಲ್ಲಿ ಕೆಲ ದಿನಗಳಿಂದ ಡೆಂಗಿ, ಚಿಕುನ್ ಗುನ್ಯಾದಂತಹ ಹಲವು ಪ್ರಕರಣಗಳು ಹೆಚ್ಚಾಗಿವೆ. ಚಿಕಿತ್ಸೆ ಪಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಒಬ್ಬರೇ ರಕ್ತ ಪರೀಕ್ಷಕರು ಇರುವುದರಿಂದ, ಜನರು ಗಂಟೆಗಟ್ಟಲೇ ನಿಲ್ಲಬೇಕಾದ ಸ್ಥಿತಿ ಇದೆ. ಇನ್ನೊಬ್ಬ ರಕ್ತ ಪರೀಕ್ಷಕರನ್ನು ನೇಮಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಸ್ವಚ್ಛತೆ ಕೊರತೆ: ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ವಿಶಾಲವಾದ ಜಾಗವಿದ್ದು, ಮುಳ್ಳಿನ ಗಿಡಗಳು ಬೆಳೆದಿವೆ. ಆಸ್ಪತ್ರೆಯ ಸುತ್ತಲಿನ ಜಾಗ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಆಸ್ಪತ್ರೆ ಸಿಬ್ಬಂದಿ ಸ್ವಚ್ಛತೆಗೆ ಗಮನ ನೀಡುತ್ತಿಲ್ಲವೆಂಬ ಆರೋಪವಿದೆ.

ಸೋರುತ್ತಿರುವ ಕಟ್ಟಡ: ಆಸ್ಪತ್ರೆಯ ಕಟ್ಟಡವನ್ನು 2016ರಲ್ಲಿ ನವೀಕರಣ ಮಾಡಲಾಗಿದೆ. ಇದೀಗ, ಕಟ್ಟಡ ಅಲ್ಲಲ್ಲಿ ಸೋರುತ್ತಿದೆ. ವೈದ್ಯಾಧಿಕಾರಿ ಅವರ ಹೊರ ರೋಗಿಗಳ ವಿಭಾಗದ ಕೊಠಡಿ ಹತ್ತಿರ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಯ ಹತ್ತಿರ ನೀರು ಸೋರುತ್ತಿದೆ. 

ತುರ್ತು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂಬ ಆರೋಪವಿದೆ. ಕ್ಲಿಷ್ಟಕರ ಹಾಗೂ ಇತರೆ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಆಸ್ಪತ್ರೆಗೆ ಸೇರಿದ್ದ 108 ಆಂಬುಲೆನ್ಸ್ ಸುಸಜ್ಜಿತವಾಗಿದ್ದು, ಜನರಲ್ಲಿ ಸ್ವಲ್ಪ ಸಮಾಧಾನ ತಂದಿದೆ.

ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲು ಮುಳ್ಳುಗಂಟಿ ಬೆಳೆದಿರುವುದು
ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಚಾವಣಿಯ ಸೀಮೆಂಟ್ ಕಿತ್ತು ನೀರು ಸೋರುತ್ತಿರುವುದು

24 ಗಂಟೆ ಹೆರಿಗೆ ಸೌಲಭ್ಯ

‘ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆ ಹೆರಿಗೆ ಸೌಲಭ್ಯವಿದೆ. ಲಭ್ಯವಿರುವ ಸೌಕರ್ಯ ಬಳಸಿಕೊಂಡು ಆರೋಗ್ಯ ಸಹಾಯಕಿಯರು ವಾರದಲ್ಲಿ 3ರಿಂದ 4 ಹೆರಿಗೆ ಮಾಡಿಸುತ್ತಿದ್ದಾರೆ. ಬ್ಯಾಡಗಿ ಮತ್ತು ಹಿರೇಕೆರೂರ ತಾಲ್ಲೂಕಿನ ಗರ್ಭಿಣಿಯರು ಸಹ ಈ ಆಸ್ಪತ್ರೆಗೆ ಬರುತ್ತಿದ್ದಾರೆ’ ಎಂದು ಸಿಬ್ಬಂದಿ ಹೇಳಿದರು.

ತಿಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ. ಖಾಲಿ ಇರುವ ವೈದ್ಯರು ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು
–ಚಂದ್ರಪ್ಪ, ತಿಳವಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.