ADVERTISEMENT

ಯಡಿಯೂರಪ್ಪಗೆ ಕಂಡಲ್ಲಿ ಕಪ್ಪುಬಾವುಟ ತೋರಿಸಿ: ಕೂಡಲಸಂಗಮಶ್ರೀ ಸೂಚನೆ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಮನೆ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 14:14 IST
Last Updated 20 ಸೆಪ್ಟೆಂಬರ್ 2022, 14:14 IST
ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯವರೆಗೆ ಪಾದಯಾತ್ರೆ ನಡೆಸಲಾಯಿತು
ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯವರೆಗೆ ಪಾದಯಾತ್ರೆ ನಡೆಸಲಾಯಿತು   

ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಮನಸ್ಸಿದೆ. ಆದರೆ ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್.ಯಡಿಯೂರಪ್ಪ ಮೀಸಲಾತಿ ನೀಡದಂತೆ ಒತ್ತಡ ತರುತ್ತಿದ್ದಾರೆ’ ಎಂದು ಆರೋಪಿಸಿದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ರಾಜ್ಯದ ಪಂಚಮಸಾಲಿ ಸಮಾಜ ಯಡಿಯೂರಪ್ಪನವರಿಗೆ ಕಪ್ಪು ಬಾವುಟ ತೋರಿಸಬೇಕು’ ಎಂದು ಸೂಚನೆ ನೀಡಿದರು.

2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಮಂಗಳವಾರ ಶಿಗ್ಗಾವಿ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಮುಂದೆ ನಡೆದ ಬೃಹತ್ ಧರಣಿ ನೇತೃತ್ವ ವಹಿಸಿ ಅವರು ಮಾತನಾಡಿ,‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾವು ನಡೆಸಿದ ಧರಣಿಗೆ ಬಂದು, ನಮ್ಮ ಬೇಡಿಕೆಯಂತೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿ ಹೋದ ಅವರೇ ಈಗ ವಿರೋಧಿಸುವುದು ಸರಿಯಲ್ಲ. ಮೀಸಲಾತಿಗೆ ಇನ್ನು ತೊಂದರೆ ನೀಡಿದರೆ ಶಿಕಾರಿಪುರದಲ್ಲಿನ ಅವರ ಮನೆ ಮುಂದೆ ಧರಣಿ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಬಂಗಾರದ ಗುಡಿ ಕಟ್ಟಿಸುತ್ತೇವೆ, ಕೋಟ್ಯಂತರ ಹಣ ಮಠಗಳಿಗೆ ಬಿಡುಗಡೆ ಮಾಡುತ್ತೇವೆ ಎಂಬ ಮಾತುಗಳನ್ನು ಬಿಟ್ಟು ಸಮಾಜದ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ನೀಡಬೇಕು. ಮೀಸಲಾತಿ ನೀಡಿದರೆ ಯಡಿಯೂರಪ್ಪ, ಬೊಮ್ಮಾಯಿ ಫೋಟೊಗಳನ್ನು ಮನೆ,ಮಠಗಳಲ್ಲಿ ಇಟ್ಟು, ಚನ್ನಮ್ಮನಷ್ಟೇ ಅವರನ್ನು ಸ್ಮರಿಸುತ್ತೇವೆ. ಇಲ್ಲವಾದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪಂಚಮಸಾಲಿಗಳನ್ನು ಸಂಘಟಿಸಿ ಬೆಂಗಳೂರಿಗೆ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಗುಡುಗಿದರು.

ADVERTISEMENT

‘ಹಿಂದೆ, ನಿಜಲಿಂಗಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಮುಖ್ಯಮಂತ್ರಿ ಮಾಡಿದ ಶಿಗ್ಗಾವಿ, ಸವಣೂರಿನ ಕ್ಷೇತ್ರದ ಜನರು ವಿರೋಧ ಬಂದರೆ ತಕ್ಕ ಪಾಠ ಕಲಿಸಲಿದ್ದಾರೆ. ಬೊಮ್ಮಾಯಿ ಅವರು ಉಂಡ ನವಣಕ್ಕಿ ಅನ್ನದ ಋಣ ತೀರಿಸಲು ಮುಂದಾಗಬೇಕು. ಇತರರ ಒತ್ತಡಕ್ಕೆ ಮಣಿಯಬಾರದು’ ಎಂದು ಹೇಳಿದರು.

ಮುಖಂಡರಾದ ವಿಜಯಾನಂದ ಕಾಶಪ್ಪನವರ, ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಬಿ.ಎ.ಪಾಟೀಲ, ಪಿ.ಸಿ.ಸಿದ್ದನಗೌಡ್ರ, ಮುಖಂಡರಾದ ಶಶಿಧರ ಯಲಿಗಾರ, ಶಿವಾನಂದ ಬಾಗೂರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.