ADVERTISEMENT

ಸೀಗೆ ಹುಣ್ಣಿಮೆ: ಭೂಮಿತಾಯಿಗೆ ಸೀಮಂತ

ಎತ್ತುಗಳ ಅಲಂಕಾರ, ಪಾಂಡವರ, ಕೌರವರ ಪೂಜೆ ಸಲ್ಲಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:28 IST
Last Updated 17 ಅಕ್ಟೋಬರ್ 2024, 15:28 IST
ಶಿಗ್ಗಾವಿ ಪಟ್ಟಣದ ಗುರುವಾರ ಸೀಗೆ ಹುಣ್ಣಿಮೆ ಅಂಗವಾಗಿ ರೈತ ಕುಟುಂಬಸ್ಥರು ಹೋಲಕ್ಕೆ ಹೋಗುತ್ತಿರುವುದು
ಶಿಗ್ಗಾವಿ ಪಟ್ಟಣದ ಗುರುವಾರ ಸೀಗೆ ಹುಣ್ಣಿಮೆ ಅಂಗವಾಗಿ ರೈತ ಕುಟುಂಬಸ್ಥರು ಹೋಲಕ್ಕೆ ಹೋಗುತ್ತಿರುವುದು   

ಶಿಗ್ಗಾವಿ: ತಾಲ್ಲೂಕಿನಾದ್ಯಂತ ರೈತ ಸಮೂಹ ತಮ್ಮ ಹೊಲಗದ್ದೆಗಳಿಗೆ ತೆರಳಿ ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರುವಾರ ಸಂಭ್ರಮದಿಂದ ಸೀಗೆ ಹುಣ್ಣಿಮೆ ಆಚರಿಸಿದರು.

ತಾಲ್ಲೂಕಿನ ಗಂಗೇಭಾವಿ ಹಾಗೂ ಹತ್ತಿರದ ಕೆರೆ, ಬಾವಿ, ಹೊಂಡಗಳಲ್ಲಿ ಬೆಳಿಗ್ಗೆ ಪುಣ್ಯ ಸ್ನಾನ ಮಾಡುವ ಜೊತೆಗೆ ಕೃಷಿ ಕಾರ್ಯಕ್ಕೆ ಬಳಕೆ ಮಾಡುವ ಸಾಮಗ್ರಿಗಳನ್ನು ಮತ್ತು ಎತ್ತು, ಕರುಗಳನ್ನು ತೊಳೆದು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಿ ಸಂಭ್ರಮಿಸಿದರು.

ರೈತ ಸಮೂಹ ವರ್ಷವೀಡಿ ಶ್ರಮವಹಿಸಿ ದುಡಿದು ಭೂತಾಯಿಗೆ ಸೀರೆ, ಹಸಿರು ಬಳೆ ಹಾಗೂ ಆಭರಣಗಳಿಂದ ಸೀಮಂತ ಕಾರ್ಯ ಮಾಡುವ ಮೂಲಕ ಶ್ರಮಕ್ಕೆ ತಕ್ಕಂತೆ ಫಲ ನೀಡು ತಾಯಿ ಎಂದು ಪ್ರಾರ್ಥಿಸುವ  ಆಚರಣೆಯಾಗಿದೆ. ಪರಂಪರಾಗತವಾಗಿ ಈ ಹುಣ್ಣಿಮೆಯನ್ನು ರೈತ ಕುಟುಂಬಗಳು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವುದನ್ನು ಕಾಣುತ್ತೇವೆ.

ADVERTISEMENT

ನಂತರ ಹೊಲಕ್ಕೆ ಬಂದಿರುವ ಕುಟುಂಬದ ಸಂಬಂಧಿಗಳು, ಸ್ನೇಹಿತರ ಬಳಗ ಒಂದಡೇ ಕುಳಿತು ಜೋಳದ ರೊಟ್ಟಿ, ಚಪಾತಿ, ಸಜ್ಜೆರೊಟ್ಟಿ, ಪುಂಡಿ ಪಲ್ಲೆ,  ಮೊಸರು ಬುತ್ತಿ, ಎಳ್ಳು ಮತ್ತು ಶೇಂಗಾ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಪದಾರ್ಥಗಳನ್ನು ಸವಿದರು. ನಂತರ ಮಕ್ಕಳು ಬಣ್ಣ,ಬಣ್ಣದ ಗಾಳಿಪಟಗಳನ್ನು ಹಾರಿಸಿ ಸಂತಸ ಪಡುವ ಜತೆಗೆ ಸೀಗೆ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಹುಲಗೂರು, ಅತ್ತಿಗೇರಿ, ಬಂಕಾಪುರ, ಅಂದಲಗಿ, ಕುಂದೂರ, ಮುಗಳಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರೈತರು ಸೀಗೆ ಹುಣ್ಣಿಮೆ ಸಂಭ್ರಮದಿಂದ ಆಚರಿಸಿದರು.

ಶಿಗ್ಗಾವಿ ಪಟ್ಟಣದ ಹೊಲವೊಂದರಲ್ಲಿ ಗುರುವಾರ ಸೀಗೆ ಹುಣ್ಣಿಮೆ ಅಂಗವಾಗಿ ರೈತ ಮಹಿಳೆಯರು ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಭೂಮಿತಾಯಿಗೆ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.