ADVERTISEMENT

‘ಕೌಶಲ ತರಬೇತಿ ಯೋಜನೆ: ಸಾಂಪ್ರದಾಯಿಕ ವೃತ್ತಿಗಳಿಗೆ ಪ್ರೋತ್ಸಾಹ’

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:51 IST
Last Updated 19 ಜೂನ್ 2024, 14:51 IST
ಬ್ಯಾಡಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಕ್ಷೌರಿಕ ವೃತ್ತಿಯಲ್ಲಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮ ನಡೆಯಿತು
ಬ್ಯಾಡಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಕ್ಷೌರಿಕ ವೃತ್ತಿಯಲ್ಲಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮ ನಡೆಯಿತು   

ಬ್ಯಾಡಗಿ: ‘ಕೌಶಲ ತರಬೇತಿ ನೀಡುವ ಮೂಲಕ ಯುವ ಸಮೂಹಕ್ಕೆ ಉದ್ಯೋಗ ಹಾಗೂ ತಲೆಮಾರಿನಿಂದ ಉಳಿಸಿಕೊಂಡ ಬಂದಿರುವ ವೃತ್ತಿಗಳಿಗೆ ಪ್ರೋತ್ಸಾಹಿಸುವ ಯತ್ನ ನಡೆಯುತ್ತಿದೆ’ ಎಂದು ಜಿಲ್ಲಾ ಕೌಶಲಾಧಿಕಾರಿ ಸಂಜಯ ಕೋರೆ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಈಚೆಗೆ ಕ್ಷೌರಿಕ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

‘ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಕಮ್ಮಾರ, ಕುಂಬಾರ, ಚಮ್ಮಾರ, ಅಕ್ಕಸಾಲಿಗ, ಬಟ್ಟೆ ಹೊಲಿಯುವವರು, ಹೂಗಾರರು, ಕ್ಷೌರಿಕರು ಸೇರಿದಂತೆ 18 ಸಾಂಪ್ರದಾಯಿಕ ಕುಲಕಸಬುಗಳನ್ನು ಸೇರ್ಪಡೆಗೊಳಿಸಿದ್ದು, ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ಇಚ್ಚಿಸುವವರಿಗೆ ಒಂದು ವಾರ ತರಬೇತಿ ನೀಡಲಾಗುವುದು. ಬಳಿಕ ಅವರಿಗೆ ಆಯಾ ವೃತ್ತಿಯ ಕಿಟ್ ವಿತರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಪ್ರಾಂಶುಪಾಲ ಮಲ್ಲಿಕಾರ್ಜುನ ಕಡ್ಡಿಪುಡಿ ಮಾತನಾಡಿ, ‘ಕೌಶಲಾಧಾರಿತ ತರಬೇತಿಯಿಂದ ಅಲ್ಪ ಬಂಡವಾಳದಲ್ಲಿ ಉದ್ಯೋಗಗಳನ್ನು ಮುಂದುವರಿಸಲು‌ ಅನುಕೂಲವಾಗಲಿದೆ. ಎಲ್ಲರೂ ಒಂದಿಲ್ಲೊಂದು ಬಗೆಯ ಉದ್ಯೋಗ ಮಾಡುವುದರಿಂದ ದೇಶದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಅಚ್ಚುಕಟ್ಟಾಗಿ ಸಾಗಲಿದೆ’ ಎಂದರು.

ಈ ವೇಳೆ ರಾಜ್ಯ ಕರಕುಶಲ ಸಮಿತಿಗಳ ಒಕ್ಕೂಟಗಳ ಅಧ್ಯಕ್ಷ ಶಿವಾನಂದ ಹಡಪದ, ಸದಸ್ಯರಾದ ದುಂಡೆಪ್ಪ ಕಾಯಕದ, ಮಂಜುನಾಥ ಹಡಪದ, ಎಂ.ರೋಹಿಣಿ, ಗೀತಾ ಹಡಪದ, ಅಣ್ಣಪ್ಪ ಹಡಪದ, ನಾಗರಾಜ ಕಾಯಕದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.