ಹಿರೇಕೆರೂರು: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘದಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ತಾಲ್ಲೂಕಿನ ಯತ್ತಿನಹಳ್ಳಿ ಎಂ.ಕೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಿಸ್ಟರ್ನ್ ಸ್ವಚ್ಛಗೊಳಿಸದ ಕಾರಣ ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಕೂಡಲೇ ಸಿಸ್ಟರ್ನ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಹಾಗೂ ಗ್ರಾಮದಲ್ಲಿ ಸ್ಥಳಾಂತರ ಮಾಡಿದ ಕುಡಿಯುವ ನೀರಿನ ಸಿಸ್ಟರ್ನ್ ಕಾಮಗಾರಿ ಅಪೂರ್ಣಗೊಂಡಿದ್ದು ಅದನ್ನು ಕೂಡಲೇ ಸಂಪೂರ್ಣ ಕಾಮಗಾರಿ ನಿರ್ವಹಿಸಬೇಕು. ಚಿಕ್ಕೋಣತಿ ಗ್ರಾಮದಲ್ಲಿನ ಕುಡಿಯುವ ನೀರಿನ ಮೇಲ್ಮಟ್ಟದ ಜಲಾಗಾರವನ್ನು ಸ್ವಚ್ಛಗೊಳಿಸಬೇಕು ಹಾಗೂ ವೀರಾಪುರದ ನಿವಾಸಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿರೇಕೊಣತಿ ಗ್ರಾಮದ ಗ್ರಾಮದೇವತೆ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ ಮಾಡಬೇಕು. ಅದೇ ಗ್ರಾಮದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿಯ ಎರಡೂ ಬದಿ ಪಕ್ಕಾ ಗಟಾರ ನಿರ್ಮಾಣ ಮಾಡಬೇಕು ಮತ್ತು ಪ್ರಾಥಮಿಕ ಶಾಲೆಗಳಿಗೆ ಕೊಠಡಿ ನಿರ್ಮಾಣ, ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಕಟ್ಟಡ ಮಂಜೂರು, ಗ್ರಾಮದ ಕೆರೆಗಳ ಸಮೀಕ್ಷೆ, ಮತ್ತಿಹಳ್ಳಿ ಗ್ರಾಮದಲ್ಲಿನ ಹೊಂಡ ಅಭಿವೃದ್ಧಿ, ದೋಭಿ ಘಾಟ್, ಬಸ್ ತಂಗುದಾಣ ಹಾಗೂ ಜಾನುವಾರುಗಳಿಗೆ ನೀರು ಕುಡಿಯಲು ತೊಟ್ಟಿ ನಿರ್ಮಾಣ, ಕಳಗೊಂಡ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಾಯಿನ್ ಬಾಕ್ಸ್ ಅಳವಡಿಕೆ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಸಿದ ಜನತೆಯ ಅಹವಾಲು ಪರಿಹರಿಸಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಾಗರಾಜಪ್ಪ ಹಡಗಲಿ ಮನವಿ ಸ್ವೀಕರಿಸಿದರು. ರಾಜ್ಯ ಉಪಾಧ್ಯಕ್ಷೆ ಮಲ್ಲಮ್ಮ ಹುಲ್ಲಿನಕೊಪ್ಪ, ತಾಲ್ಲೂಕು ಅಧ್ಯಕ್ಷೆ ಕಾವ್ಯ ಹುಡೇದ, ಚನ್ನಮ್ಮ ಸಾತೇನಹಳ್ಳಿ, ಪೂಜಾ ಮ್ಯಾಚರ್, ಗುರುರಾಜ ಕಡೇಮನಿ, ಜ್ಯೋತಿ ಯಲವದಳ್ಳಿ, ರಮೇಶ್ ಓಬಳೇರ, ಸಚಿನ್ ಹುಬ್ಬಳ್ಳೇರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.